ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದ ಮಂತ್ರಿ: ಸಿಎಂ ಸಿದ್ದರಾಮಯ್ಯ

WhatsApp
Telegram
Facebook
Twitter
LinkedIn

ಬಾಗಲಕೋಟೆ:  ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಶುಕ್ರವಾರ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ಸೋಮಣ್ಣ ಅವರಿಗೆ ಪ್ರಚಾರ ಮಾಡಲು ಸಮಯವಿಲ್ಲ. ಕ್ಷೇತ್ರದಲ್ಲಿ ಸೋಲುತ್ತೇವೆ ಎಂದು ತಿಳಿದಿರುವುದರಿಂದ ಹೆಚ್ಚು ಪ್ರಚಾರ ಮಾಡುತ್ತಿಲ್ಲ. ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಮಾತನಾಡಲು ಅವರೇನು ಕಾಂಗ್ರೆಸ್ ಹೈ ಕಮಾಂಡ್ ಅಲ್ಲ ಎಂದರು.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಸತ್ಯವಿಲ್ಲ ಹಾಗೂ ಹೇಳಿದಂತೆ ನಡೆದುಕೊಳ್ಳುತ್ತಿಲ್ಲವಾದ್ದರಿಂದ ಅವರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲಿಚ್ಚಿಸುವುದಿಲ್ಲ. ಬಾಗಲಕೋಟೆ  ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದೆ ಎಂಬ ಭಯದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪಕ್ಷದಿಂದ ಉಚ್ಛಾಟಿಸಲ್ಪಟ್ಟಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಗೋಗರೆದು ಕರೆ ತಂದು ಪ್ರಚಾರ ಕಾರ್ಯಕ್ಕೆ ಇಳಿಸಿದ್ದಾರೆ. ಇದು ಅವರ ದ್ವಂದ್ವ  ನೀತಿಯಾಗಿದೆ ಒಟ್ಟಿನಲ್ಲಿ ಬಿಜೆಪಿ ಹೀನಾಯ ಸ್ಥಿತಿಯಲ್ಲಿದೆ ಎಂದರು.

ಸ್ಥಾನಗಳ ಹೆಚ್ಚಳದಲ್ಲಿ ಮಲತಾಯಿ ಧೋರಣೆ ಇರಬಾರದು:

ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವುದರಿಂದ ರಾಜ್ಯಕ್ಕಾಗುವ ಲಾಭವೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳನ್ನು ಹೆಚ್ಚಿಸಬೇಕು ಆದರೆ ಮಲತಾಯಿ ಧೋರಣೆ ಇರಬಾರದು. ದಕ್ಷಿಣದ ರಾಜ್ಯಗಳಿಗೆ ಕಡಿಮೆ, ಉತ್ತರದ ರಾಜ್ಯಗಳಿಗೆ ಹೆಚ್ಚಿನ ಸ್ಥಾನ ಕೊಡುವ ಕೆಲಸ ಮಾಡಬಾರದು ಎಂದರು.

ನರೇಂದ್ರ ಮೋದಿಯವರ ಮನೆಗೆ ಮುತ್ತಿಗೆ ಹಾಕಬೇಕು:

ಗ್ಯಾಸ್ ಸಿಲಿಂಡರ್ ಅಭಾವದ ಬಗ್ಗೆ ಮಾತನಾಡಿ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದು ಅವರ ಕರ್ತವ್ಯ. ರಾಜ್ಯ ಸರ್ಕಾರ ವಿತರಣೆ ಮಾಡುತ್ತದೆಯಷ್ಟೇ ಎಂದರು. ಆಟೋ ಚಾಲಕರು ಆಹಾರ ಸಚಿವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳಿರುವ ಬಗ್ಗೆ ಮಾತನಾಡಿ ನರೇಂದ್ರ ಮೋದಿಯವರ ಮನೆಗೆ ಮುತ್ತಿಗೆ ಹಾಕಬೇಕು ಎಂದರು.

ಎರಡೂ ಕಡೆ ನಮ್ಮ ಪಕ್ಷ ಗೆಲ್ಲಲಿದೆ:

ಉಪಚುನಾವಣೆ ಫಲಿತಾಂಶ ಸಿಎಂ ಸ್ಥಾನದ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಎರಡೂ ಕಡೆ ನಮ್ಮ ಪಕ್ಷ ಗೆಲ್ಲಲಿದ್ದು, ಪರಿಣಾಮ ಹೇಗೆ ಬೀರಲು ಸಾಧ್ಯ ಎಂದರು.

ಅಲ್ಪಸಂಖ್ಯಾತರಿಗೂ ಅನುದಾನ ಒದಗಿಸಲಾಗಿದೆ:

ರಾಜ್ಯದ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಯತ್ನಾಳ್ ಅವರು ಆರೋಪಿಸಿರುವ ಬಗ್ಗೆ ಮಾತನಾಡಿ ಅಲ್ಪಸಂಖ್ಯಾತರು ಸಹ ಈ ರಾಜ್ಯದ ನಾಗರಿಕರು ಅವರ ಜನಸಂಖ್ಯೆ ಶೇ14% ರಷ್ಟಿದ್ದು ಎಲ್ಲರಿಗೂ ಅನುದಾನ ನೀಡಿದಂತೆ ಅವರಿಗೂ ನೀಡಲಾಗಿದೆ ಎಂದರು.

ಬಿಜೆಪಿ ನಮ್ಮ ಪಕ್ಷದ ಹೈ ಕಮಾಂಡ್ ಅಲ್ಲ:

ಬಿಜೆಪಿ ಯವರು ಸಿಎಂ ಸ್ಥಾನದ ಬಗ್ಗೆ ಪದೇ ಪದೇ ಮಾತನಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,  ಈಗಾಗಲೇ ಈ ಕುರಿತು ಸ್ಪಷ್ಟವಾಗಿ ತಿಳಿಸಿದ್ದು, ಬಿಜೆಪಿಯವರು ಇದರ ಬಗ್ಗೆ ಮಾತನಾಡಲು ಅವರೇನು ನಮ್ಮ ಹೈಕಮಾಂಡ್ ಅಲ್ಲ.  ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕಾ ಗಾಂಧಿ ಅವರುಗಳು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಂದರು.

ಬಿಜೆಪಿಯಿಂದ ಹಣದ ದುರುಪಯೋಗ:

ಅಧಿಕಾರ ಮತ್ತು ಹಣದ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಾಗೇನಾದರೂ ಹಣ ಮತ್ತು ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದರೆ ಅದು ಬಿಜೆಪಿಯಿಂದ ಆಗಿರುವ ಕೆಲಸ ಎಂದು ಸಿದ್ದರಾಮಯ್ಯ ಹೇಳಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon