ಬೆಂಗಳೂರು: 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿಭಾಗ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಗ್ರಾಮ ಪಂಚಾಯತಿಗಳಿಗೆ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡುವ ಕುರಿತು ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ.
2024-25 ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ತಾಲ್ಲೂಕು ಮಟ್ಟದ ಜೊತೆಗೆ ಜಿಲ್ಲಾ ಹಾಗೂ ವಿಭಾಗ ಮಟ್ಟಕ್ಕೂ ವಿಸ್ತರಿಸಲಾಗಿದ್ದು, ಈ ಸಂಬಂಧ ವಿಸ್ತ್ರತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಈ ಸಂಬಂಧ ಒಟ್ಟು 11.76 ಕೋಟಿಗಳ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಲಾಗಿದೆ.
ಪಂಚಾಯತ್ ರಾಜ್ ಆಯುಕ್ತಾಲಯದ ಪ್ರಸ್ತಾವನೆಯಂತೆ ರಾಜ್ಯ ಮಟ್ಟದ ಪರಾಮರ್ಶೆ ಸಭೆಯಲ್ಲಿ ಅಧಿಕಾರಿಗಳ ತಂಡ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿ ರಾಜ್ಯದ 239 ರ ಪೈಕಿ 238 ತಾಲೂಕುಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. (ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕನ್ನು ಹೊರತುಪಡಿಸಿ) ವಿಭಾಗ ಮಟ್ಟಕ್ಕೆ 4 ಪ್ರಥಮ ಸ್ಥಾನಗಳನ್ನು, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ 12 ಗ್ರಾಮ ಪಂಚಾಯಿತಿಗಳನ್ನು ಹಾಗೂ ಜಿಲ್ಲಾ ಮಟ್ಟಕ್ಕೆ 31, ತಾಲ್ಲೂಕು ಮಟ್ಟಕ್ಕೆ 195 ಗ್ರಾಮ ಪಂಚಾಯಿತಿಗಳನ್ನು ಪುರಸ್ಕಾರಕ್ಕೆ ಅಂತಿಮಗೊಳಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14ನೇ ಸಾಲಿನಿಂದ ಪ್ರತಿ ತಾಲ್ಲೂಕಿಗೆ ಒಂದರಂತೆ ಗ್ರಾಮ ಪಂಚಾಯತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿ 5 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.














