ಬೆಂಗಳೂರು: ಮಹಿಳೆಯರೊಂದಿಗೆ ಡಿಜಿಪಿ ಕೆ.ರಾಮಚಂದ್ರರಾವ್ ಅಸಭ್ಯ ವಿಡಿಯೊ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ವೈರಲ್ ಆಗಿದ್ದ ವಿಡಿಯೋ ಎಐ ಹಾಗೂ ಡೀಫ್ ಪೇಕ್ ಅಲ್ಲ. ಅಸಲಿ ವಿಡಿಯೋ ಆಗಿದೆ ಎಂದು ಸರ್ಕಾರಕ್ಕೆ ಪೊಲೀಸ್ ಇಲಾಖೆ ವರದಿ ನೀಡಿದೆ. ಈ ಮೂಲಕ ನಿವೃತ್ತಿ ಅಂಚಿನಲ್ಲಿರುವ ರಾಮಚಂದ್ರರಾವ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.
ಪೊಲೀಸ್ ಸಮವಸ್ತ್ರದಲ್ಲಿ ಕಚೇರಿಯಲ್ಲಿ ಮಹಿಳೆಯೊಂದಿಗೆ ರಾಮಚಂದ್ರರಾವ್ ಅಸಭ್ಯ ವರ್ತನೆ ತೋರಿರುವ ಆರೋಪ ಸಂಬಂಧ ಕಳೆದ ಜನವರಿಯಲ್ಲಿ ವಿಡಿಯೊ ವೈರಲ್ ಆಗಿತ್ತು. ಇದರಿಂದ ಇಲಾಖೆಯು ಮುಜುಗರಕ್ಕೆ ಒಳಗಾಗಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ರಾವ್, ತಮ್ಮನ್ನು ತೇಜೋವಧೆ ಮಾಡಲು ಕಿಡಿಗೇಡಿಗಳು ಎಐ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಕಿಡಿಕಾರಿದ್ದರು. ರಾವ್ ಅವರನ್ನ ಅಮಾನತು ಮಾಡಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಗೃಹ ಇಲಾಖೆಯು ಎಡಿಜಿಪಿ ಆರ್.ಹಿತೇಂದ್ರ ಅವರ ನೇತೃತ್ವದ ತಂಡ ರಚಿಸಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ತನಿಖೆ ನಡೆಸಿ 100 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ರಾಮಚಂದ್ರರಾವ್ ಗೆ ನೋಟಿಸ್:
ವೈರಲ್ ಆಗಿದ್ದ ವಿಡಿಯೋ ನೈಜವಾಗಿದೆ. ರಾಮಚಂದ್ರರಾವ್ ಅವರು 2016-17ನೇ ಸಾಲಿನಲ್ಲಿ ಬೆಳಗಾವಿ ವಲಯ ಐಜಿಪಿ ಆಗಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಕಚೇರಿ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದವರು ಇಬ್ಬರು ಮಹಿಳೆಯರನ್ನ ಗುರುತು ಹಿಡಿದಿದ್ದು ರಾಮಚಂದ್ರರಾವ್ ಅವರ ಕಚೇರಿಗೆ ಆಗಾಗ ಬಂದು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಎಫ್.ಎಸ್.ಎಲ್ ವರದಿಯಲ್ಲಿ ಎಐ ವಿಡಿಯೋ ಅಲ್ಲವೆಂದು ಸೃಷ್ಟಪಡಿಸಿದೆ. ಸದ್ಯ ಮೇಲ್ನೊಟಕ್ಕೆ ಕೃತ್ಯವೆಸಗಿರುವುದು ಸಾಬೀತಾದ ಹಿನ್ನೆಲೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್ ) ರಾಮಚಂದ್ರರಾವ್ ಅವರಿಗೆ ನೋಟಿಸ್ ನೀಡಿದೆ.
ನಿವೃತ್ತಿ ಅಂಚಿನಲ್ಲಿರುವ ಡಿಜಿಪಿಗೆ ಸಂಕಷ್ಟ:
ಅಕ್ರಮ ಚಿನ್ನ ಸಾಗಾಟ ಆರೋಪ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟಿ ಹಾಗೂ ಮಲಮಗಳಾದ ರನ್ಯಾರಾವ್ ಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರದಿಂದ ವಿನಾಯಿತಿ ನೀಡಿದ ರಾಮಚಂದ್ರರಾವ್ ವಿರುದ್ಧ ಆರೋಪ ಕೇಳಿಬಂದಿತ್ತು. ಸರ್ಕಾರ ಸಹ ಕಡ್ಡಾಯ ರಜೆ ನೀಡಿ ಆಂತರಿಕ ತನಿಖೆಗೆ ಸೂಚಿಸಿತು. ಇದಾದ ಬಳಿಕ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಡಿಜಿಪಿಯಾಗಿ ವರ್ಗಾಯಿಸಲಾಗಿತ್ತು. ಮಹಿಳೆಯೊಂದಿಗೆ ಅಸಭ್ಯ ವಿಡಿಯೊ ವೈರಲ್ ಹಿನ್ನೆಲೆಯಲ್ಲಿ ರಾಮಚಂದ್ರರಾವ್ ಅವರನ್ನ ಸರ್ಕಾರ ಸಸ್ಪೆಂಡ್ ಮಾಡಿತ್ತು. ಮೇ 31ರಂದು ನಿವೃತ್ತಿ ಹೊಂದುತ್ತಿರುವ ರಾಮಚಂದ್ರರಾವ್ ಗೆ ಪ್ರಕರಣ ತನಿಖೆ ತೂಗುಗತ್ತಿ ಹಿನ್ನಲೆ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.















