ಬೆಂಗಳೂರು: ಒಳ ಮೀಸಲಾತಿ ಇಲ್ಲದೆ 56.432 ಸರ್ಕಾರಿ ಉದ್ಯೋಗ ನೇಮಕ ಮಾಡಲು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾದಿಗ ಸಂಘಟನೆಗಳ ಒಕ್ಕೂಟ ತೀವ್ರವಾಗಿ ವಿರೋಧಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ. ಎನ್.ಎಸ್ ಮೂರ್ತಿ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ಮಾದಿಗ ಮತ್ತು ಉಪಜಾತಿಗಳ ವಿರೋಧಿ ಕ್ರಮವನ್ನು ಪ್ರತಿಭಟಿಸಿ ಮಾರ್ಚ್ 25 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯದ ಎಲ್ಲಾ 31 ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಮೌರ್ಯ ಸರ್ಕಲ್ (ಗಾಂಧಿ ಪ್ರತಿಮೆ) ಗಾಂಧಿನಗರದಿಂದ ಮುಖ್ಯಮಂತ್ರಿ ನಿವಾಸಕ್ಕೆ ಭಾರಿ ಪ್ರತಿಭಟನಾ ರ್ಯಾಲಿಯನ್ನು ಸಹ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
101 ಜಾತಿಗಳ ನಡುವೆ ಸಮನಾಗಿ ಮೀಸಲಾತಿ ಹಂಚಿಕೆಯಾಗಿಲ್ಲದ ಕಾರಣ ಮೀಸಲಾತಿ ವರ್ಗೀಕರಿಸಬೇಕು ಎಂದು ಕಳೆದ 35 ವರ್ಷಗಳಿಂದ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಸಿದ್ದೇವೆ. 2024 ರ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ಪರಿಶಿಷ್ಟ ಮೀಸಲಾತಿ ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಐತಿಹಾಸಿಕ ತೀರ್ಪು ನೀಡಿತ್ತು. ಸರ್ಕಾರ ದತ್ತಾಂಶ ಸಂಗ್ರಹಿಸಿ ವರ್ಗೀಕರಿಸಲಿ ಎನ್ನುವುದನ್ನು ಸಹ ತೀರ್ಪಿನಲ್ಲಿ ಹೇಳಲಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿ ವರದಿ ಪಡೆದು ಸಚಿವ ಸಂಪುಟದಲ್ಲಿ ಅನುಮೋದಿಸಲಾಗಿತ್ತು. ಆ ನಂತರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಸೂದೆ ಅಂಗೀಕರಿಸಲಾಗಿ ರಾಜ್ಯಪಾಲರ ಸಹಿ ನಂತರ ವಿಧೇಯಕ ಅಧಿಕೃತಗೊಂಡಿತ್ತು ಎಂದು ವಿವರಿಸಿದರು.
ಇದೆಲ್ಲವನ್ನು ಸರ್ಕಾರ ಬದಿಗೊತ್ತಿ ಒಳಮೀಸಲಾತಿ ಅಳವಡಿಸದೆ ಹಳೇ ರೋಸ್ಟರ್ ವಿಧಾನದಂತೆ 56,432 ಉದ್ಯೋಗ ನೇಮಕ ಮಾಡಲು ಫೆಬ್ರವರಿ 27 ರಂದು ಸುತ್ತೋಲೆ ಹೊರಡಿಸಿದ್ದು, ಈ ಸುತ್ತೋಲೆ ಕಾನೂನು ಬಾಹಿರ, ಅವೈಜ್ಞಾನಿಕ ಹಾಗೂ ಸಂವಿಧಾನ ವಿರೋಧಿ ಕರಾಳ ಸುತ್ತೋಲೆಯಾಗಿದೆ. ಸರ್ಕಾರದ ಇಂಥಹ ಕ್ರಮ ತೀರ ಬಡತನದಲ್ಲಿ ಕನಿಷ್ಟ ಜೀವನ ನಡೆಸುತ್ತಿರುವ ಮಾದಿಗ ಮತ್ತು ಮಾದಿಗ ಸಂಭಂದಿತ ಜಾತಿಗಳಿಗೆ ಮರಣ ಶಾಸನವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉದ್ಯೋಗ ನೇಮಕಾತಿಗಳಲ್ಲಿ ಒಳಮೀಸಲಾತಿ ಅಳವಡಿಸಲು ತಾಂತ್ರಿಕ ಆಡಚಣೆ ಹಾಗೂ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ಸರ್ಕಾರ ಹೇಳುವುದು ಸತ್ಯಕ್ಕೆ ದೂರವಾದ ಮಾತಾಗಿದೆ. ಹಾಗೂ ಹಸಿ ಸುಳ್ಳಿನ ಸಂಚಾಗಿದೆ. ಈ ಕುರಿತ ಸಚಿವ ಸಂಪುಟ ಸಭೆಯನ್ನು ಸಹ ಸುಖಾ ಸುಮ್ಮನೆ ಮುಂದೂಡಲಾಗುತ್ತಿದೆ. ಪ್ರಸ್ತುತ ಸುಮಾರು 56,432 ಹುದ್ದೆಗಳು ಕೈ ತಪ್ಪುವ ಗಂಭೀರ ಸಂಭವವಿದೆ. ಸಿ.ಎಂ ಸಿದ್ದರಾಮಯ್ಯ ಸಹ ಇದುವರೆಗೆ ಯಾವುದೇ ಸ್ಪಷ್ಟ ಹಾಗೂ ಬಲವಾದ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ನಮ್ಮ ಸಮುದಾಯದ ಒಳಮೀಸಲಾತಿ ಹಕ್ಕುಗಳು ಹಿನ್ನೆಡೆಯಾಗಿ ಉದ್ಯೋಗಾವಕಾಶಗಳು ಕೈ ತಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಾ. ಎನ್.ಎಸ್ ಮೂರ್ತಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮಾದಿಗ ದಂಡೋರ ಸಂಘಟನೆಯ ರಾಜ್ಯಾಧಕ್ಷ ಶಂಕರಪ್ಪ, ಜೈ ಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಬಿ.ಆರ್.ಮುನಿರಾಜು, ವಿಶ್ವ ಜಾಂಭವ ಮಹಾ ಸಭಾ ರಾಜ್ಯಾಧಕ್ಷ ಡಾ ಭೀಮ್ ರಾಜ್ ಉಪಸ್ಥಿತರಿದ್ದರು.















