ಬೆಂಗಳೂರು: ರಾಜ್ಯದಲ್ಲಿನ ನವೋದ್ಯಮಗಳನ್ನು ಬಲಪಡಿಸಲು ಮತ್ತು ಮುಂಬರುವ ವರ್ಷಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲು ಮಂಗಳವಾರ ಸ್ಟಾರ್ಟ್ಅಪ್ಗಳಿಗೆ ಸಂಬಂಧಿಸಿದ ವಿಷನ್ ಗ್ರೂಪ್ನ ಎಂಟನೇ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.
ಪ್ರಶಾಂತ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ನವೋದ್ಯಮ ಉದ್ದಿಮೆಗಳ ಪ್ರಮುಖರು, ಹೂಡಿಕೆದಾರರು, ಶಿಕ್ಷಣ ತಜ್ಞರು ಮತ್ತು ಇತರ ಪಾಲುದಾರರು ಭಾಗವಹಿಸಿದ್ದರು. ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮತ್ತು ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ನಿರ್ದೇಶಕ ಮತ್ತು ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರು, ವಿಷನ್ ಗ್ರೂಪ್ನ ಇತರ ಸದಸ್ಯರಾದ ಕೆ. ಗಣೇಶ್, ನಾಗಾನಂದ್ ದೊರೆಸ್ವಾಮಿ, ರವಿ ಗುರುರಾಜ್, ಮದನ್ ಪದಕಿ, ರೋಹಿತ್ ಭಟ್, ಸುಧನ್ವ ಧನಂಜಯ, ಡಾ. ಆನಂದ್ ಕುಮಾರ್, ರೋಹನ್ ಎಂ. ಗಣಪತಿ ಮತ್ತು ಡಾ. ಶ್ರೀಕುಮಾರ್ ಸೂರ್ಯನಾರಾಯಣ್ ಮತ್ತಿತರರು ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಮುಖ ನವೋದ್ಯಮ ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸಲಾಯಿತು, ನವೋದ್ಯಮಗಳಿಗೆ ಸಂಬಂಧಿಸಿದಂತೆ ದೇಶದಲ್ಲಿನ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ಕರ್ನಾಟಕದ ಸ್ಥಾನಮಾನ, ಡೀಪ್ಟೆಕ್ ಜಾಲದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುವ ದಿಸೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಡೀಪ್ಟೆಕ್ ಕ್ಷೇತ್ರದಲ್ಲಿ ಕರ್ನಾಟಕದ ಪ್ರಗತಿಯನ್ನು ಇನ್ನಷ್ಟು ತೀವ್ರಗೊಳಿಸುವುದು, ನವೋದ್ಯಮಗಳನ್ನು ಬೆಂಗಳೂರಿನ ಆಚೆಗೆ ವಿಸ್ತರಿಸುವ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು, ಈ ಕ್ಷೇತ್ರದಲ್ಲಿ ಇನ್ನಷ್ಟು ಹೂಡಿಕೆ ಆಗುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವುದು, ನವೋದ್ಯಮಗಳು ಕರ್ನಾಟಕದ ಉದ್ದಗಲಕ್ಕೂ ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರದ ನೀತಿ ನಿರೂಪಣೆಗಳನ್ನು ರೂಪಿಸುವ ಕುರಿತಾಗಿ ವಿವರವಾಗಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ವಿಷನ್ ಗ್ರೂಪ್ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮಾತನಾಡಿ, ಕರ್ನಾಟಕವು ದೇಶದಲ್ಲೇ ಸ್ಟಾರ್ಟ್ಅಪ್ಗಳಿಗೆ ಪೂರಕವಾದ ಅತ್ಯುತ್ತಮ ಪರಿಸರವನ್ನು ನಿರ್ಮಿಸಿದೆ. ಮುಂದಿನ ಹಂತದ ಬೆಳವಣಿಗೆಯು ಡೀಪ್ ಟೆಕ್ ನಾವೀನ್ಯತೆಯ ನೇತೃತ್ವದಲ್ಲಿ ನಡೆಯಲಿದೆ. ಉದ್ಯಮ ಮತ್ತು ಶಿಕ್ಷಣ ತಜ್ಞರ ನಡುವೆ ಸಹಕಾರ ಮತ್ತು ಹೊಸದಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ವಿಸ್ತರಣೆಗೆ ಸಹಾಯಕವಾಗಿ ಕೆಲಸ ಮಾಡುವುದು ಮುಂತಾದವುಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಈ ಕ್ಷೇತ್ರದಲ್ಲಿ ಪ್ರಭಾವಶಾಲಿ ಪೂರಕ ಪರಿಸರವನ್ನು ನಿರ್ಮಿಸಿಕೊಡುವಲ್ಲಿ ಸರ್ಕಾರವು ಈಗಾಗಲೇ ಮುಂಚೂಣಿಯಲ್ಲಿದ್ದು, ಬಂಡವಾಳವು ಸುಲಭವಾಗಿ ದೊರಕುವ ದಿಸೆಯಲ್ಲಿ ನವೋದ್ಯಮಿಗಳಿಗೆ ಸಹಾಯ, ತಜ್ಞರಿಂದ ಮಾರ್ಗದರ್ಶನ, ಮಾರುಕಟ್ಟೆಯ ಅವಕಾಶಗಳನ್ನು ಕಲ್ಪಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಡಾ. ಎನ್. ಮಂಜುಳಾ ಮಾತನಾಡಿ, ಸರ್ಕಾರವು ರಾಜ್ಯದ ಉದ್ದಗಲಕ್ಕೂ ನವೋದ್ಯಮಗಳು ಆರಂಭವಾಗುವ ನಿಟ್ಟಿನಲ್ಲಿ ನೆರವು ನೀಡಲು ಮುಂದಾಗಿದ್ದು, ಉದ್ದಿಮೆಗಳನ್ನು ಸ್ಥಾಪಿಸಲು ಮುಂದೆ ಬರುವ ಉತ್ಸಾಹಿಗಳಿಗೆ ಎಲ್ಲ ಹಂತದಲ್ಲಿ ಬೆಂಬಲ ನೀಡಲು ಸಿದ್ಧವಾಗಿದೆ. ರಾಜ್ಯ ಸರ್ಕಾರದ ಪ್ರಬಲ ನೀತಿಯ ಬೆಂಬಲದ ನೆರವಿನಿಂದ ಹೊಸದಾಗಿ ನವೋದ್ಯಮ ಕ್ಷೇತ್ರಗಳಾಗಿ ಹೊರಹೊಮ್ಮುತ್ತಿರುವ ಭಾಗಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು. ಕರ್ನಾಟಕದಲ್ಲಿ ಸಾಕಷ್ಟು ಸಂಪನ್ಮೂಲಗಳು, ತಜ್ಞರ ಮಾರ್ಗದರ್ಶನ ಮತ್ತು ಮಾರುಕಟ್ಟೆಯ ಅವಕಾಶಗಳು ಇರುವ ಕಾರಣ ನವೋದ್ಯಮಗಳಿಗೆ ರಾಜ್ಯವು ಉತ್ತಮ ತಾಣವಾಗಿ ಮಾರ್ಪಡುವಲ್ಲಿ ಸಂಶಯವಿಲ್ಲ ಎಂದರು.
ಸಭೆಯಲ್ಲಿ ಮಾತನಾಡಿದ ಸದಸ್ಯರು, ಡೀಪ್ ಟೆಕ್ ವ್ಯವಸ್ಥೆ ಬಲಪಡಿಸುವ ದಿಸೆಯಲ್ಲಿ, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರವು ಮುಂದಾಗಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಹೊರತುಪಡಿಸಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಮತ್ತು ವಿವಿಧ ವಿಭಾಗಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಹ್ಯಾಕಥಾನ್ಗಳು, ಬೂಟ್ ಕ್ಯಾಂಪ್ಗಳು ಮತ್ತು ನಿರ್ದಿಷ್ಟ ಗುಂಪುಗಳನ್ನು ಗುರಿಯಾಗಿರಿಸಿಕೊಂಡು ಅವರಿಗೆ ತರಬೇತಿ ನೀಡುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಜಾಗತಿಕ ಉದ್ಯಮಿಗಳ ಜತೆ ನಿಯಮಿತವಾಗಿ ಸಂವಾದಗಳನ್ನು ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಪೈಪೋಟಿ ನೀಡಲು ಅನುಕೂಲವಾಗುವಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಾರುಕಟ್ಟೆ ಅವಕಾಶಗಳನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಯುವ ಉದ್ದಿಮೆದಾರರಿಗೆ ಮಾರ್ಗದರ್ಶನ ನೀಡುವ ಕೆಲಸಗಳು ಆಗಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.















