ಬೆಂಗಳೂರು: ಸ್ವಚ್ಛತಾ ಸಿಬ್ಬಂದಿಗಳಿಗೆ ಕಾನೂನು ರೀತಿಯಲ್ಲಿ ಸಿಗಬೇಕಾದ ಸೌಲಭ್ಯಗಳಿಗೆ ಯಾವುದೇ ರಾಜಿ ಇಲ್ಲ. ಪ್ರಸ್ತುತ ಇರುವ ಪೌರಕಾರ್ಮಿಕರ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಹೇಳಿದರು.
ನಗರದ ಕಮ್ಯೂನಿಟಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜಿನ ಆಡಿಟೋರಿಯಂ ನಲ್ಲಿ ಸೋಮವಾರ ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್‌ಗಳು, ಆಟೋ ಟಿಪ್ಪರ್ ಚಾಲಕರು ಮತ್ತು ಇನ್ನಿತರೆ ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ನೇರ ಸಂವಾದ ನಡೆಸಿ ಮಾತನಾಡಿದ ಅವರು, ಸ್ವಚ್ಛತಾ ಕಾರ್ಮಿಕರು ತಮ್ಮ ಅನೇಕ ಸಮಸ್ಯೆಗಳಾದ ಸೌಲಭ್ಯಗಳ ಕೊರತೆ, ನೇಮಕಾತಿಗೆ ಸಂಬಂಧಿಸಿದ ತೊಂದರೆಗಳು, ಮೃತ ಪೌರ ಕಾರ್ಮಿಕರಿಗೆ ಪರಿಹಾರ ವಿಳಂಬ, ಪಿಎಫ್ ಸಂಬಂಧಿತ ಸಮಸ್ಯೆ, ಬಯೋಮೆಟ್ರಿಕ್ ಹಾಜರಾತಿ ಸಮಸ್ಯೆ, ವೇತನ ಬಾಕಿ, ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಪ್ರತಿ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅರ್ಹ ಪೌರ ಕಾರ್ಮಿಕರ ನೇಮಕಾತಿ ಆದೇಶ ಬಾಕಿ ಇರುವ ಪ್ರಕರಣಗಳಲ್ಲಿ ಒಂದು ವಾರದೊಳಗಾಗಿ ಆದೇಶ ಪ್ರತಿ ನೀಡಬೇಕು. ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿ ವಾರ್ಡ್ ಗಳಲ್ಲಿ ಸುವಿಧ ವಿಶ್ರಾಂತಿ ಕೊಠಡಿಗಳನ್ನು ವಿಸ್ತರಿಸಿ, ಪ್ರತಿಯೊಂದು ಮಸ್ಟರಿಂಗ್ ಪಾಯಿಂಟ್ ಗಳಲ್ಲೂ ವಿಶ್ರಾಂತಿ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು. ಕೆಲವು ಸಂದರ್ಭದಲ್ಲಿ ಪೌರಕಾರ್ಮಿಕರು ಶೌಚಾಲಯ ಬಳಸಲು ಹೋಟೆಲ್ ನವರು ನಿರಾಕರಣೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ವಿಷಯಗಳು ಮರುಕಳಿಸಿದಲ್ಲಿ ಆಯುಕ್ತರು ಅಂತಹ ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉದ್ಯಾನವನಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಸುಸ್ಥಿತಿಯಲ್ಲಿಟ್ಟು ಪೌರ ಕಾರ್ಮಿಕರಿಗೆ ಉಪಯೋಗಿಸಲು ಅವಕಾಶ ಕಲ್ಪಿಸಬೇಕು.ತಾಂತ್ರಿಕ ಕಾರಣಗಳಿಂದ ವೇತನ ಪಾವತಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳಿಗೆ ತಕ್ಷಣ ಪರಿಹಾರಕ್ಕೆ ಕ್ರಮ ವಹಿಸಬೇಕು.ಸೇವೆಯಲ್ಲಿ ಮೃತರಾದ ಸ್ವಚ್ಛತಾ ಕಾರ್ಮಿಕರ ಕುಟುಂಬಗಳಿಗೆ ನೀಡಬೇಕಾದ ಪರಿಹಾರವನ್ನು ತ್ವರಿತವಾಗಿ ಒದಗಿಸಬೇಕು ಎಂದು ಸೂಚಿಸಿದರು.
ಸ್ವಚ್ಛತಾ ಸಿಬ್ಬಂದಿ ಮರಣಾನಂತರ ಅನುಕಂಪದ ನೇಮಕಾತಿಗೆ ಸಂಬಂಧಿಸಿದ ಪ್ರಕರಣ ಸರ್ಕಾರದ ಹಂತದಲ್ಲಿದ್ದು, ಪ್ರಸ್ತುತ 10 ಲಕ್ಷ ರೂಪಾಯಿಗಳ ಪರಿಹಾರ ನೀಡುತ್ತಿರುವುದು ಸರಿಯಾಗಿ ತಲುಪುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸ್ವಚ್ಛತಾ ಸಿಬ್ಬಂದಿಗಳಿಗೆ ಪ್ರತಿ 3 ತಿಂಗಳಿಗೊಮ್ಮೆ ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ವರ್ಷಕ್ಕೊಮ್ಮೆ ಮಾಸ್ಟರ್ ಆರೋಗ್ಯ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಬೇಕು. ಪೌರ ಕಾರ್ಮಿಕ ನೇಮಕಾತಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದರು.
ನೇರ ವೇತನ ಪಾವತಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ಪಾವತಿಗೆ ಕ್ರಮ ವಹಿಸಬೇಕು. ಪಿಎಫ್ ಹಾಗೂ ಇ.ಎಸ್.ಐ ಗಳನ್ನು ಪ್ರತಿ ತಿಂಗಳು ತಪ್ಪದೇ ಪಾವತಿಸಬೇಕು. ಮೇಲಾಧಿಕಾರಿಗಳು ಪೌರಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಹಾಗೂ ಪೌರಕಾರ್ಮಿಕರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಬಂದಾಗ ಸೌಜನ್ಯವಾಗಿ ಸ್ಪಂದಿಸಿ ನಿಯಮಾನುಸಾರ ಕ್ರಮ ಜರುಗಿಸಬೇಕು. ಇನ್ನು ನಗರದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗಳು ಆತ್ಮವಿಶ್ವಾಸದೊಂದಿಗೆ ಕಾರ್ಯ ನಿರ್ವಹಿಸಬೇಕು. ನಗರದ ಸ್ವಚ್ಛತೆ ಅವರನ್ನು ಅವಲಂಬಿಸಿದೆ. ಅವರ ಕಲ್ಯಾಣಕ್ಕಾಗಿ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಪಾಲಿಕೆಯ ಆಯುಕ್ತ ಕೆ.ಎನ್ ರಮೇಶ್, ಅಪರ ಆಯುಕ್ತ ರಾಚಪ್ಪ, ಜಂಟಿ ಆಯುಕ್ತರುಗಳಾದ ಸತೀಶ್ ಬಾಬು ಹಾಗೂ ಮಧು, ಬಿ.ಎಸ್. ಡಬ್ಲ್ಯೂ ಎಂ ಎಲ್ ಮುಖ್ಯ ಕಾರ್ಯಚರಣೆ ಅಧಿಕಾರಿ ರಮಾಮಣಿ, ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಸುಮಯ ರೂಹಿ, ಸಂಶೋಧನಾಧಿಕಾರಿ ಮಹಾದೇವಸ್ವಾಮಿ ಹಾಗೂ ಕಾರ್ಮಿಕ ಇಲಾಖೆ, ಪಿಎಫ್, ಇ.ಎಸ್.ಐ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.















