ಬೆಂಗಳೂರು: 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಮಹಾವೀರ ಜಯಂತಿ ರಜೆ ಬದಲಾವಣೆ ಹಿನ್ನೆಲೆಯಲ್ಲಿ ಮಾ.30 ರಂದು ನಿಗಧಿಯಾಗಿದ್ದ ತೃತೀಯ ಭಾಷೆಯ ಪರೀಕ್ಷೆಯನ್ನು ಮಾ.31 ಕ್ಕೆ ಮುಂದೂಡಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಈ ಹಿಂದೆ ಪ್ರಕಟಿಸಿದ್ದ ಅಂತಿಮ ವೇಳಾಪಟ್ಟಿ ಪ್ರಕಾರ ಮಾ.30 ರಂದು ತೃತೀಯ ಭಾಷೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರವು ಮಹಾವೀರ ಜಯಂತಿ ಪ್ರಯುಕ್ತ ನೀಡಲಾಗಿದ್ದ ಸಾರ್ವತ್ರಿಕ ರಜೆಯನ್ನು ಮಾ.31ರ ಬದಲಾಗಿ ಮಾ.30 ರಂದು ಬದಲಾಯಿಸಿ ಆದೇಶಿಸಿದೆ. ಈ ಸರ್ಕಾರದ ಹೊಸ ಆದೇಶದ ಹಿನ್ನೆಲೆ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಉಳಿದ ವಿಷಯಗಳ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಏ.1 ರಂದು ಜೆಟಿಎಸ್ ವಿಷಯಗಳು, ಅರ್ಥಶಾಸ್ತ್ರ ಮತ್ತು ಏ.2 ರಂದು ನಡೆಯಲಿರುವ ಸಮಾಜ ವಿಜ್ಞಾನ ವಿಷಯಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಮಂಡಲಿಯ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.














