ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳಿಗೆ ಕಡಿವಾಣ ಹಾಕುವವರಾರು?

WhatsApp
Telegram
Facebook
Twitter
LinkedIn

ಸಾಗರ ಕೃಷ್ಣಾ ಕೋಳೆಕರ, ಸಂಪಾದಕರು

ಸಂವಿಧಾನಾತ್ಮಕವಾಗಿ ಸ್ವಾತಂತ್ರ್ಯ ನಂತರ ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಜಿಲ್ಲಾ, ತಾಲೂಕ ಹಾಗೂ ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ಪ್ರಮುಖ ಉದ್ದೇಶ ಸ್ಥಳೀಯ ಮಟ್ಟದಲ್ಲಿ ಕಟ್ಟ ಕಡೆಯ ವ್ಯಕ್ತಿಗಳಿಗೆ ಸಹ ಮೂಲ ಸೌಕರ್ಯಗಳು ತಲುಪಲಿ ಎನ್ನುದಾಗಿತ್ತು. ಇನ್ನು ಇವುಗಳಿಗೆ ಹೆಚ್ಚು ಬಲ ನೀಡಲು ಕರ್ನಾಟಕ ರಾಜ್ಯ ಸರ್ಕಾರ 2010ರಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸುವ ನಿರ್ಧಾರ ಕೈಗೊಂಡಿತ್ತು, ಆದರೆ ಇವೆಲ್ಲದರ ಸದುದ್ದೇಶಗಳೇ ದುರುದ್ದೇಶಗಳಾಗಿ ಮಾರ್ಪಟ್ಟಿರುವುದು ವಿಪರ್ಯಾಸವಾಗಿದೆ.

ಮುಖ್ಯವಾಗಿ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ, ದ್ವೀತಿಯ ದರ್ಜೆಯ ಸಹಾಯಕರು, ಕಂಪ್ಯೂಟರ್ ಆಪರೇಟರ್ಸ್ ಹಾಗೂ ಪ್ಯೂನ್ ಗಳನ್ನು ನಿಯೋಜಿಸಲಾಗಿದ್ದು, ಈ 16 ವರ್ಷಗಳ ವ್ಯವಸ್ಥೆಯಲ್ಲಿ ಕೆಲವೇ ಕೆಲವು ಸಾವಿರ ರೂಪಾಯಿಗಳಿಂದ ಪ್ರಾರಂಭವಾದ ಇವರೆಲ್ಲರ ಸಂಬಳ ಇತ್ತೀಚಿನ ವೇತನ ಆಯೋಗದ ಶಿಫಾರಸ್ಸಿನಂತೆ 50 ಸಾವಿರದಿಂದ ಹೆಚ್ಚಾಗಿ ಹೋಗಿದೆ. ಪ್ರಮುಖವಾಗಿ ಪಿಡಿಒಗಳ ಸಂಬಳ 15 20 ಸಾವಿರದಿಂದ ಸದ್ಯ 70ರಿಂದ 80 ಸಾವಿರಕ್ಕೆ ಬಂದು ತಲುಪಿದೆ. ಆದರೆ ಅಕ್ರಮ ಹಣ, ಆಸ್ತಿಗಳಿಕೆ ವಿಚಾರವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹೇಳುವವರು ಕೇಳುವವರು ಇಲ್ಲವಾಗಿದೆ ಎನ್ನುವುದು ವಿಪರ್ಯಾಸವಾಗಿದೆ.

ಪಿಡಿಓಗಳ ಸಂಬಳ ಒಂದು ಕುಟುಂಬ ನಿರ್ವಹಣೆಗೆ ಬೇಕಾದಷ್ಟಾಗಿದ್ದು ಆದರೆ ಇವರುಗಳು ಬೇನಾಮಿ ಆಸ್ತಿ ಗಳಿಸಿ ಐಷಾರಾಮಿ ಜೀವನವನ್ನು ಗಮನಿಸುತ್ತಿದ್ದರೆ ಆಶ್ಚರ್ಯ ಹಾಗೂ ಸೋಜಿಗವೆನಿಸುತ್ತಿದೆ. ಒಂದು ಸರ್ಕಾರಿ ನೌಕರಿಯ ಪ್ರಮುಖ ಉದ್ದೇಶ ನಿಯಮತವಾಗಿ ಸಂಬಳ ಪಡೆಯುವುದಾಗಿದೆ ಆದರೆ ದೊಡ್ಡ ಬಂಗಲೆಗಳನ್ನು ಕಟ್ಟಿಸಿಕೊಂಡು ಎಸ್.ಯು.ವಿ ಎಂ.ಯು.ವಿ ಗಳಲ್ಲಿ ಓಡಾಡಿಕೊಂಡು, ಮಕ್ಕಳನ್ನು ಅಂತರಾಷ್ಟ್ರೀಯ ಶಾಲೆಗಳಿಗೆ ದಾಖಲಿಸಿ, ಯಥೇಚ್ಛವಾಗಿ ಬೆಳ್ಳಿ ಬಂಗಾರದ ವಸ್ತುಗಳು ಮತ್ತು ಒಡವೆಗಳನ್ನು ಶೇಖರಿಸಿ ಇಟ್ಟುಕೊಳ್ಳುವುದು ನೋಡುತ್ತಿದ್ದರೆ ಯಾವುದೋ ಮ್ಯಾಜಿಕ್ ಶೋ ನೋಡಿದಂತೆ ಭಾಸವಾಗುತ್ತದೆ.

ಕೇವಲ ಸಂಬಳದಿಂದ ಯಾವುದೇ ವ್ಯಕ್ತಿ ಉತ್ತಮ ಜೀವನವನ್ನು ನಿರ್ವಹಿಸಬಹುದೇ ಹೊರತು ಬೇಕಾಬಿಟ್ಟಿಯಾಗಿ ಆಸ್ತಿಯಗಳನ್ನು ಸಂಪಾದಿಸಿ ಖರ್ಚುಗಳನ್ನು ನಿರ್ವಹಿಸಲಾಗುವುದಿಲ್ಲ ಎನ್ನುವುದು ಕಟು ಸತ್ಯವಾಗಿದೆ. ಇನ್ನೂ ಆಶ್ಚರ್ಯಕರ ವಿಚಾರವಾಗಿ ನೋಡುವುದಾದರೆ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದು ಅವರ ಸಂಬಳ ಕೇವಲ 20 ಸಾವಿರ ರೂಗಳಾಗಿದೆ ಆದರೆ ಅವರುಗಳು ಕೂಡ ಯಾರಿಗೂ ಕಡಿಮೆ ಇಲ್ಲದಂತೆ ಜೀವನ ನಿರ್ವಹಿಸುತ್ತಿರುವುದು ಸಾಮಾನ್ಯ ನಂತೂ ಮೂಗಿನ ಬೆರಳಿಟ್ಟುಕೊಂಡು ನೋಡಬೇಕಾದ ಸನ್ನಿವೇಶವಿದೆ.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ನೋಡುವುದಾದರೆ, ಪಂಚಾಯತಿ ಕಾರ್ಯದರ್ಶಿಗಳು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಆಪರೇಟರ್ಸ್ ಗಳು ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿಗಳು ದಿನನಿತ್ಯ ಅಕ್ರಮಗಳನ್ನು ನೆಡೆಸುತ್ತಿದ್ದರೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹ ಅಧಿಕಾರಿ ಗಳಿಗೆ ಹಾಗೂ ಅದಕ್ಕೂ ಉನ್ನತ ಮಟ್ಟದ ಅಧಿಕಾರಿಗಳಾಗಲಿ ಜಾಣ ಕುರುಡನ್ನು ಪ್ರದರ್ಶಿಸುತ್ತಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿದ್ದರೆ ಕಡಿವಾಣ ಹಾಕುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗದಾಗಿದೆ. ಇನ್ನು ಇದು ಪ್ರತಿಯೊಂದು ಇಲಾಖೆಯಲ್ಲಿ ಅಲ್ಲೂ ಇದಕ್ಕಿಂತ ಬಿನ್ನ ಪರಿಸ್ಥಿತಿಯೇನಿಲ್ಲ ಎನ್ನುವುದು ಕೂಡ ಕಟು ಸತ್ಯವಾಗಿದೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon