ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಖಾಸಗಿ, ಅನುದಾನಿತ ಹಾಗೂ ಬಿ.ಎಡ್ ಕಾಲೇಜುಗಳಲ್ಲಿ ನ್ಯಾಕ್‌ನ ಪತ್ರ ವ್ಯವಹಾರಗಳು ಕನ್ನಡದಲ್ಲೇ ನಡೆಸಲಿರುವ ಕಾಲೇಜು ಶಿಕ್ಷಣ ಇಲಾಖೆಯ ತೀರ್ಮಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹರ್ಷವ್ಯಕ್ತಪಡಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಯ ಮೇರೆಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಕಾಲೇಜುಗಳಲ್ಲಿ ನ್ಯಾಕ್‌ಗೆ ಸಂಬಂಧ ಪತ್ರ ವ್ಯವಹಾರಗಳು ಇನ್ನು ಮುಂದೆ ಕನ್ನಡದಲ್ಲೇ ನಡೆಯಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದು, ಈ ನಡೆಯನ್ನು ಸ್ವಾಗತಾರ್ಹ ಎಂದಿದ್ದಾರೆ.
ಈ ಸುತ್ತೋಲೆಯು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ಸಾರ್ವಭೌಮತೆಯನ್ನು ಮರುಸ್ಥಾಪಿಸಲಿದ್ದು, ವಿಶೇಷವಾಗಿ ಕನ್ನಡ ಅಧ್ಯಾಪಕರುಗಳ ಮೇಲೆ ಹೇರಲಾಗುತ್ತಿರುವ ಮಾನಸಿಕ ಹೊರೆಯನ್ನು ಇಳಿಸಲಿದೆ. ಇನ್ನು ಮುಂದೆ ಕನ್ನಡದ ಅಧ್ಯಾಪಕರುಗಳು ನ್ಯಾಕ್ ಸಮೀಕ್ಷೆ ತಯಾರಿಗೆ ಪೂರಕ ಮಾಹಿತಿಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ನಮೂದಿಸಬೇಕು, ಅವಶ್ಯಕ ಎನ್ನಿಸಿದಲ್ಲಿ ವಿಶ್ವವಿದ್ಯಾಲಯಗಳು ಇದನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿಕೊಂಡು ನ್ಯಾಕ್ ಸಂಸ್ಥೆಗೆ ಸಲ್ಲಿಸಬಹುದಾಗಿದೆ ಎಂದಿದ್ದಾರೆ.














