ಗೂಳ್ಯನಂದಿಗುಂದ ಜಮೀನು ವಿವಾದ; ನ್ಯಾಯಾಂಗ ತನಿಖೆಗೆ ಆಗ್ರಹ

WhatsApp
Telegram
Facebook
Twitter
LinkedIn

ಬೆಂಗಳೂರು: ಗೂಳ್ಯನಂದಿಗುಂದ ಗ್ರಾಮದ ಜಮೀನು ವಿವಾದದ ಕುರಿತು ಶೀಘ್ರವೇ ನ್ಯಾಯಾಂಗ ತನಿಖೆ ನಡೆಸುವಂತೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಹಾಗೂ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿವೆ.

ಈ ಕುರಿತು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಯು. ಮುನಿರಾಜು ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಗೂಳ್ಯನಂದಿಗುಂದ ಗ್ರಾಮದಲ್ಲಿ ವೆಂಕಟೇಶ್ ಎಂಬುವರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರಿ ಗೋಮಾಳದ 13 ಎಕರೆ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸಿ, ಸ್ಥಳೀಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಗೋಮಾಳದ ಜಾಗವನ್ನು ವೆಂಕಟೇಶ್ ಅತಿಕ್ರಮಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಮುಂದಾದವರಿಗೆ ದೌರ್ಜನ್ಯ ಎಸಗಲಾಗುತ್ತಿದೆ. ಈ ಕುರಿತು ಪೊಲೀಸರಿಗೂ ದೂರು ನೀಡಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ತಾಲ್ಲೂಕು ಹಾಗೂ ಜಿಲ್ಲಾಧಿಕಾರಿಗಳಿಗೂ ಈ ಸಂಬಂಧ ಪತ್ರ ಬರೆಯಲಾಗಿದೆ. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಗೂಳ್ಯನಂದಿಗುಂದ ಗ್ರಾಮದ ಸರ್ವೆ ನಂ.28ರಲ್ಲಿ 8 ಎಕರೆ 14 ಗುಂಟೆ ಹಾಗೂ ಸರ್ವೆ ನಂ.30ರಲ್ಲಿ 4 ಎಕರೆ 30 ಗುಂಟೆ ಜಮೀನು ಸರ್ಕಾರಿ ಗೋಮಾಳ ಜಮೀನಾಗಿದೆ. ಈ ಜಮೀನುಗಳಿಗೆ ಸಂಬಂಧಿಸಿದಂತೆ ನಕಲಿ ಅಥವಾ ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂಬ ಆರೋಪಗಳಿದ್ದು, ಜಮೀನಿನ ಮೂಲ ದಾಖಲೆಗಳು, ಕಂದಾಯ ದಾಖಲೆಗಳು ಹಾಗೂ ಸಂಬಂಧಿತ ದಾಖಲಾತಿಗಳನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಗಳು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರೆ, ಅಥವಾ ಅಂತಹ ದಾಖಲೆಗಳನ್ನು ಸೃಷ್ಟಿಸಲು ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಸಹಕರಿಸಿರುವುದು ತನಿಖೆಯಲ್ಲಿ ಕಂಡುಬಂದರೆ, ಸಂಬಂಧಪಟ್ಟವರ ಹೊಣೆಗಾರಿಕೆಯನ್ನು ನಿಗದಿಪಡಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಮೀನು ಮತ್ತು ಸರ್ಕಾರಿ ದಾಖಲೆಗಳ ಕುರಿತು ಪ್ರಶ್ನಿಸಿ ಕಾನೂನುಬದ್ಧವಾಗಿ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರ ವಿರುದ್ಧ ರಾಜಕೀಯ ಪ್ರಭಾವ ಅಥವಾ ಅಧಿಕಾರಿಗಳ ಒತ್ತಡದಿಂದ ಸುಳ್ಳು ಆರೋಪಗಳು ಹಾಗೂ ಪ್ರಕರಣಗಳನ್ನು ದಾಖಲಾಗುತ್ತಿವೆ ಎಂದು ಇದೇ ಸಂದರ್ಭದಲ್ಲಿ ಯು. ಮುನಿರಾಜು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಸ್ತೂರಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಪ್ರಕಾಶ್, ಚಿಕ್ಕಣ್ಣ, ಪ್ರಮುಖರಾದ ನಾಗರಾಜ್, ಮುನಿರಾಜು, ವಿ. ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon