ಬೆಂಗಳೂರು: ರಾಜ್ಯದ ಆಯುಷ್ ವೈದ್ಯರ ಬಹುದಿನಗಳ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಕರ್ನಾಟಕ ಘಟಕದ ವತಿಯಿಂದ ಸೆ.22ರಂದು ರಾಯಚೂರು ಚಲೋ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಎಫ್‌ಐ ಕರ್ನಾಟಕ ಘಟಕದ ಅಧ್ಯಕ್ಷ ಡಾ. ಮೋಹನ್ ಬಿರಾದಾರ್ ಮಾತನಾಡಿ, ಆಯುಷ್ ವೈದ್ಯರ ವೃತ್ತಿಪರ ಹಕ್ಕುಗಳು, ಸೇವಾ ಭದ್ರತೆ ಹಾಗೂ ಗ್ರಾಮೀಣ ಮತ್ತು ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಅವರ ಸಮರ್ಪಕ ಬಳಕೆಗೆ ಸಂಬಂಧಿಸಿದ ಬೇಡಿಕೆಗಳನ್ನು ರಾಯಚೂರು ಚಲೋ ಮೂಲಕ ಸರ್ಕಾರದ ಗಮನಕ್ಕೆ ತಂದು, ಶೀಘ್ರ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಪ್ರಾಥಮಿಕ ಹಂತದ ಆರೋಗ್ಯ ಸೇವೆಯಲ್ಲಿ ಅನ್ವಯಿಸುವ ಕಾನೂನು, ನಿಯಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಆಯುಷ್ ವೈದ್ಯರಿಗೆ ಆಧುನಿಕ ಔಷಧಗಳ ಬಳಕೆಗೆ ಸೂಕ್ತ ಅನುಮತಿ ವ್ಯವಸ್ಥೆ ಕಲ್ಪಿಸಬೇಕು. ಎನ್‌ಸಿಎಸ್ಎಂ ಹಾಗೂ ಎನ್‌ಸಿಐಎಸ್‌ಎಂ ಕಾಯ್ದೆಗಳಡಿ ಸಂಬಂಧಿತ ಗೆಜೆಟ್ ಅಧಿಸೂಚನೆಗಳ ಆಶಯಕ್ಕೆ ಅನುಗುಣವಾಗಿ ಆಯುಷ್ ವೈದ್ಯರ ವೃತ್ತಿಪರ ಹಕ್ಕುಗಳು ಮತ್ತು ಸೇವಾ ಅವಕಾಶಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ಪಿಎಚ್‌ಸಿ ನೋಂದಣಿ, ನವೀಕರಣ ಹಾಗೂ ಫೈರ್ ಎನ್‌ಒಸಿ ಸೇರಿದಂತೆ ಆಯುಷ್ ಕ್ಲಿನಿಕ್‌ಗಳಿಗೆ ಸಂಬಂಧಿಸಿದ ಪ್ರಾಯೋಗಿಕ ಸಮಸ್ಯೆಗಳಿಗೆ ಸರಳೀಕೃತ ಹಾಗೂ ಸ್ಪಷ್ಟ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪಠ್ಯಕ್ರಮ, ವಿದ್ಯಾರ್ಹತೆ, ತರಬೇತಿಗೆ ಅನುಗುಣವಾಗಿ ನಿಯಮದಂತೆಯೇ ನಾವು ಆಧುನಿಕ ಔಷಧಿಗಳನ್ನು ಸೂಚಿಸುತ್ತಿದ್ದೇವೆ. ಆದರೆ ಕೆಲ ಅಧಿಕಾರಿಗಳು ಇದಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಆಧುನಿಕ ಔಷಧಿಗಳ ಬಳಕೆಗೆ ಸೂಕ್ತ ಅನುಮತಿ ನೀಡಬೇಕು. ಆಯುಷ್ ವೈದ್ಯರ ವಿರುದ್ಧ ರೋಗಿ ಅಥವಾ ಅವರ ಅಧಿಕೃತ ಸಂಬಂಧಿಕರಿಂದ ಸಲ್ಲಿಕೆಯಾಗುವ ದೂರುಗಳಿಗೆ ಮಾತ್ರ ವಿಚಾರಣೆ ನಡೆಯಬೇಕು. ಆಯುಷ್ ವೈದ್ಯರಿಗೆ ಸಂಬಂಧಿಸಿದ ಸರ್ಕಾರಿ ಹಾಗೂ ಕೆಪಿಎಂಇ ಸಮಿತಿಗಳಲ್ಲಿ ಆಯುಷ್ ವೈದ್ಯರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ವಿನಂತಿಸಿದರು.
ರಾಯಚೂರಿನಲ್ಲಿ ನಕಲಿ ಪತ್ರಕರ್ತರು ಹಾಗೂ ಯೂಟ್ಯೂಬರ್‌ಗಳು ಆಯುಷ್ ವೈದ್ಯರ ಕ್ಲಿನಿಕ್‌ಗಳಿಗೆ ತೆರಳಿ, ರೋಗಿಗಳ ಸಮ್ಮುಖದಲ್ಲಿ ವಿಡಿಯೊ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ. ಇಂತಹ ಪ್ರಕರಣಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಾ. ಮೋಹನ್ ಬಿರಾದಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಫ್‌ಐ ಕರ್ನಾಟಕ ಘಟಕದ ಜಂಟಿ ಕಾರ್ಯದರ್ಶಿ ಡಾ. ಎಂ.ಬಿ. ಸಂತೋಷ್, ಪ್ರಮುಖರಾದ ಡಾ. ಶಂಕರಾನಂದ, ಡಾ. ಮಲ್ಲೇಶ್ ನಾಯಕ್, ಡಾ. ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.














