ಬೆಂಗಳೂರು: ಸಮಗ್ರ ವಿದ್ಯುತ್ ಅಭಿವೃದ್ದಿ ಯೋಜನೆಯ ಹಂತ-2 ರ ಅಡಿಯಲ್ಲಿ ಬೆಸ್ಕಾಂ ವ್ಯಾಪ್ತಿಯ ನಗರ ಪ್ರದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಐಪಿಡಿಎಸ್ ಐಟಿ ಅಪ್ಲಿಕೇಶನ್ ಅನ್ನು ಬೆಸ್ಕಾಂ ವ್ಯಾಪ್ತಿಯ 20 ಐಪಿಡಿಎಸ್ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಆ ಭಾಗಗಳಲ್ಲಿ ಆನ್ ಸೇವೆ ಅಲಭ್ಯವಾಗಲಿದೆ.
20 ಪಟ್ಟಣ ಪ್ರದೇಶಗಳಲ್ಲಿ ಜೂನ್ 10 ರಿಂದ 30 ರವರೆಗೆ ಬೆಸ್ಕಾಂನ ಆನ್ ಲೈನ್ ಸೇವೆಗಳು ಲಭ್ಯ ವಿರುವುದಿಲ್ಲ. ಪ್ರಸ್ತುತ ಚಾಲ್ತಿಯಲ್ಲಿರುವ ಟಿಆರ್ಎಮ್ ಸಾಫ್ಟ್ವೇರ್ ಬದಲಿಗೆ ಐಪಿಡಿಎಸ್ ಐಟಿ ಅಪ್ಲಿಕೇಶನ್ ಅಳವಡಿಸಿಕೊಳ್ಳುವುದರಿಂದ ದತ್ತಾಂಶ ವರ್ಗಾವಣೆ ಮಾಡುವ ಸಲುವಾಗಿ 21 ದಿನಗಳ ಕಾಲ ಆನ್ ಲೈನ್ ಸೇವೆಗಳಾದ ಹೊಸ ಸಂಪರ್ಕ, ಹೆಸರು ವರ್ಗಾವಣೆ, ಲೋಡ್ ಹೆಚ್ಚಳ, ಬಿಲ್ ಪಾವತಿ, ಸೇರಿದಂತೆ ಆನ್ಲೈನ್ ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರು ಥರ್ಡ್ ಪಾರ್ಟಿ ಬಿಲ್ ಪಾವತಿ ವ್ಯವಸ್ಥೆಗಳಾದ ಗೂಗಲ್ ಪೇ, ಫೋನ್ ಪೇ ಮೂಲಕ ಬಿಲ್ ಪಾವತಿ ಮಾಡಲು ಅವಕಾಶವಿರಲಿದೆ. ಆನ್ ಲೈನ್ ಸೇವೆಗಳು ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆಯಲ್ಲಿ ಅಲಭ್ಯವಾಗಲಿವೆ ಎಂದು ಮಾಹಿತಿ ನೀಡಿದೆ.
ಐಪಿಡಿಎಸ್ ಪಟ್ಟಣ ಪ್ರದೇಶಗಳಿಗೆ ಹೊಸ ಐಟಿ ಅಪ್ಲಿಕೇಶನ್ಅನ್ನು ವಿಸ್ತರಿಸುವ ಸಲುವಾಗಿ ಮೆಲ್ಕಂಡ ಪಟ್ಟಣ ಪ್ರದೇಶಗಳ ಉಪ ವಿಭಾಗಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ ಟಿಆರ್ಎಮ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. ಐಪಿಡಿಎಸ್ ಸಾಫ್ಟ್ ವೇರ್ ಅಳವಡಿಕೆ ಹಿನ್ನೆಲೆಯಲ್ಲಿ ಆನ್ಲೈನ್ ಸೇವೆ ಅಲಭ್ಯವಿರುವುದರಿಂದ 20 ಪಟ್ಟಣ ಪ್ರದೇಶಗಳ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕೋರಿದೆ.














