ಬೆಂಗಳೂರು: ಇಂದಿನ ಮಕ್ಕಳು ಪುಸ್ತಕಗಳಿಗಿಂತ ಹೆಚ್ಚಾಗಿ ಫೇಸ್ಬುಕ್, ಇನ್‌ಸ್ಟಾಗ್ರಾಂಗಳಂತಹ ಸಾಮಾಜಿಕ ಜಾಲತಾಣಗಳನ್ನು ನೋಡುವುದು ಹೆಚ್ಚಾಗಿದೆ. ಇದರಿಂದ ಮಕ್ಕಳ ಕಲಿಕೆ ಕುಂಠಿತವಾಗಿವೆ. ಈಗಿನ ಮಕ್ಕಳು, ಓದುವ ಕಲೆಯನ್ನು ಹೆಚ್ಚಿಸಿಕೊಳ್ಳಬೇಕು. ಅವರು ತಮ್ಮ ಕಲ್ಪನಾಶಕ್ತಿ, ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ ತಿಳಿಸಿದರು.
ಭಾನುವಾರ ಪ್ಯಾಲೇಸ್ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬೆರಗು ಪ್ರಕಾಶನ ವತಿಯಿಂದ ಲೇಖಕಿ ಭಾರತಿ ವಸ್ತ್ರದ ಅವರ ಚೇತನ ಭಾರತಿ, ಲೇಖಕಿ ಹಾಗೂ ಪತ್ರಕರ್ತೆ ರಶ್ಮಿ ಎಸ್. ಅವರ ಮಿದು ಮಾತು ಹಾಗೂ ಅರ್ನಿ ಸಿ. ನವೀನ್ ಅವರ ಅಚೋಸ್ ಫ್ರಂ ಮೈ ಜಾರ್ ಕೃತಿಗಳು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂದಿನ ಕಾಲಘಟ್ಟದಲ್ಲಿ ಎಲ್ಲದಕ್ಕೂ ಪರ್ಯಾಯವಾಗಿ ಮೊಬೈಲ್ ಬಳಕೆ ಮಾಡುವಂತಾಗಿದೆ. ನಾವೊಂದು ಚೌಕಟ್ಟನ್ನು ಹಾಕಿಕೊಂಡಿದ್ದೇವೆ. ಅದನ್ನು ಮೀರಿ ಓದು ಹಾಗೂ ಸಾಹಿತ್ಯದ ಕಡೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ತಮ್ಮ ಮಕ್ಕಳು ಕನಿಷ್ಠ ಪಕ್ಷ ಓದುವುದನ್ನು ರೂಢಿಸಿಕೊಳ್ಳಲಿ ಎಂಬುದು ಪ್ರತಿಯೊಬ್ಬ ತಂದೆ ತಾಯಿಯ ಆಶಯವಾಗಬೇಕು ಎಂದರು.
ಅಂಕಣಕಾರ ಎಸ್. ರವಿಶಂಕರ್ ಅವರು ಮೂವರೂ ಲೇಖಕಿಯರ ಜತೆಗೆ ಸಂವಾದ ನಡೆಸಿ ಮಾತನಾಡಿ, ನಮ್ಮ ಕಾಲದಲ್ಲಿ ಬಾಡಿ ಶೇಮಿಂಗ್‌ಗೆ ಅರ್ಥ ಇರಲಿಲ್ಲ. ಕರಿಯ, ಕುಳ್ಳ ಎಂದೆಲ್ಲ ಕರೆಯುವುದು ಸಾಮಾನ್ಯವಾಗಿತ್ತು. ಈ ಬಗ್ಗೆ ಆಗ ಯಾರೂ ಮನಸ್ಸಿಗೆ ತೆಗೆದುಕೊಳ್ಳುಯತ್ತಿರಲ್ಲ. ಆದರೆ ಇಂದಿನ ಕಾಲಮಾನದಲ್ಲಿ ಬಹಳ ಸೂಕ್ಷ್ಮವಾಗಿ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಸಣ್ಣ-ಪುಟ್ಟ ನಿಂದನೆಗಳನ್ನೂ ಸಹಿಸಿಕೊಳ್ಳದಂತಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಲೇಖಕಿ ರಶ್ಮಿ ಎಸ್ ಮಾತನಾಡಿ, ಗಜಲ್‌ಗಳೇ ನನ್ನ ಬರವಣಿಗೆಗಳಿಗೆ ಕಾರಣವಾಯಿತು. ನನ್ನ ತಾಯಿ ಕೂಡ ಉದ್ಯೋಗಸ್ಥ ಮಹಿಳೆಯಾಗಿದ್ದರು. ಅವರಿಗೆ ನಮಗಿದ್ದ ಅನುಕೂಲತೆಗಳು ಸಹ ಇರಲಿಲ್ಲ. ಕೆಲಸದ ಒತ್ತಡ ಹಾಗೂ ಮನೆಯ ಜವಾಬ್ದಾರಿಯನ್ನು ಜತೆ-ಜತೆಗೆ ನಿಭಾಯಿಸಿಕೊಂಡು ಹೋಗುತ್ತಿದ್ದ ಅವರ ಜೀವನ ಸಹ ಸಾಕಷ್ಟು ಪ್ರೇರೇಪಣೆ ನೀಡಿತು ಎಂದರು.
ಯುವ ಲೇಖಕಿ ಅರ್ನಿ ಸಿ. ನವೀನ್ ಮಾತನಾಡಿ, ನಾನು ನನ್ನ 9 ವರ್ಷ ವಯಸ್ಸಿನಿಂದ ಬರವಣಿಗೆಯನ್ನು ಮೈಗೂಡಿಸಿಕೊಂಡಿದ್ದೇನೆ. ಈಗಿನ ಯುವಜನತೆ ಬರವಣಿಗೆಯಿಂದ ವಿಮುಖರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ದಿನದ 24 ಗಂಟೆಗಳಲ್ಲಿ ಕನಿಷ್ಠ 5 ನಿಮಿಷವಾದರೂ ಬರೆಯಲು ಸಮಯ ಕೊಡಬೇಕು. ಅದರಿಂದಲೇ ಸಹನೆ ಮತ್ತು ಸಹಾನುಭೂತಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಲೇಖಕಿ ಭಾರತಿ ವಸ್ತ್ರದ ಮಾತನಾಡಿ, ಪತಿ ನೀಡಿದ ಸ್ವಾತಂತ್ರ್ಯ ಮತ್ತು ಪ್ರೋತ್ಸಾಹದಿಂದ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಯಿತು. ಯಾವುದೂ ಅಸಾಧ್ಯವಲ್ಲ ಎನ್ನುವುದು ಅನುಭವಕ್ಕೆ ಬಂದಿತು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಬೆರಗು ಪ್ರಕಾಶನದ ವಿಜಯಲಕ್ಷ್ಮಿಕತ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಪ್ರಕಾಶ್ ಕಂಬತ್ತಳ್ಳಿ, ಗಿರೀಶ್ ಎಸ್. ತಿಳಿ, ಸಂತೋಷ್ ಎಸ್. ತಿಳಿ ಸೇರಿದಂತೆ ಇತರರಿದ್ದರು.















