ಬೆಂಗಳೂರು/ಬೆಳಗಾವಿ: ಬೆಳಗಾವಿ ಸುವರ್ಣ ಸೌಧಾ ಮುಂಭಾಗದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ವೇಳೆ ಶಾಂತಿಯುತ ಪ್ರತಿಭಟನೆ ಸಭೆ ನಡೆಸಲು ಅನುಮತಿಯನ್ನು ಕರ್ನಾಟಕ ರಾಜ್ಯ ಸಮಾಗರ ಹರಳಯ್ಯ ಸಂಘ ಮನವಿ ಪತ್ರವನ್ನು ಸಲ್ಲಿಸಿದೆ.
ಪ್ರತಿಭಟನೆಯ ಕುರಿತು ಮಾತನಾಡಿರುವ ಸಂಘದ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿ ಗಣೇಶ ಕಾಳೆ, ನಮ್ಮ ಸಮುದಾಯದ ಹಕ್ಕುಗಳ ಸಂರಕ್ಷಣೆ ಹಾಗೂ ದೀರ್ಘಕಾಲದ ಬೇಡಿಕೆಗಳ ಪರಿಹಾರಕ್ಕಾಗಿ, ಬೆಳಗಾವಿಯ ಸುವರ್ಣಸೌಧಾ ಮುಂಭಾಗದಲ್ಲಿ ಶಾಂತಿಯುತ ಪ್ರತಿಭಟನಾ ಸಭೆ ನಡೆಸಲು ಅನುಮತಿಯನ್ನು ಕೋರಿದ್ದೇವೆ ಎಂದು ಹೇಳಿದ್ದಾರೆ.
ಚಳಿಗಾಲದ ಅಧಿವೇಶನ ಡಿಸೆಂಬರ್ 8 ರಿಂದ ಆರಂಭವಾಗುತ್ತಿದ್ದು, ಡಿಸೆಂಬರ್ 11 ರ ಗುರುವಾರ ನಮ್ಮ ಸಂಘದ ವತಿಯಿಂದ ನಡೆಸಲಾಗುವ ಈ ಪ್ರತಿಭಟನೆಯಲ್ಲಿ ಸುಮಾರು 1500 ಜನರು ಭಾಗವಹಿಸವ ನಿರೀಕ್ಷೆಯಿದೆ. ಸಂಘದ ಕಾರ್ಯದರ್ಶಿ ಸುನಿಲ್ ಕುಮಾರ್ ಪಿ. ಮದನಭಾವಿ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಸಮುದಾಯದ ಮುಖ್ಯ ಉದ್ಯೋಗ ಚರ್ಮ ಉದ್ಯಮ ಮತ್ತು ಉತ್ಪನ್ನಗಳ ತಯಾರಿಕೆ ಆಗಿದ್ದು, ಶಿವಶರಣ ಹರಳಯ್ಯ ಅಭಿವೃದ್ದಿ ನಿಗಮ ರಚಿಸಿ ಸ್ವತಂತ್ರ ನಿಧಿ ವಿನಿಯೋಗ ಮಾಡುವಂತೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ವಿನಂತಿ ಸಲ್ಲಿಸಿದ್ದೇವೆ. ಲಿಡ್ಕರ್ ಚರ್ಮ ಉದ್ಯಮ ಹಾಗೂ ಮೂಲ ಚರ್ಮಕಾರರ ಕಲ್ಯಾಣವನ್ನು ಉದ್ದೇಶಿಸಿ ರಚನೆಯಾಗಿರುವ ನಿಗಮವಾಗಿದ್ದರೂ, ನಮ್ಮ ಸಮಗಾರ ಸಮುದಾಯದವರಿಗೆ ಇದುವರೆಗೆ ಯಾವುದೇ ಹುದ್ದೆಯ ಪ್ರತಿನಿಧಿತ್ವ ನೀಡಲಾಗಿಲ್ಲ. ಇದು ನಮ್ಮ ಸಮುದಾಯದ ಪರಂಪರೆ ವೃತ್ತಿ ಮತ್ತು ಕೊಡುಗೆಯನ್ನು ಗಮನಿಸಿದಾಗ ಅನ್ಯಾಯ ಮಾಡಿದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಸಮಗಾರ ಸಮುದಾಯದ ನೈಜ ಹಕ್ಕು ಮತ್ತು ತಕ್ಕ ಪ್ರತಿನಿಧಿತ್ವಕ್ಕಾಗಿ, ಲಿಡ್ಕರ್ ನಿಗಮದಲ್ಲಿ ಅಧ್ಯಕ್ಷ ಹುದ್ದೆ, ನಿರ್ದೇಶಕ ಹುದ್ದೆಗಳು ಸೇರಿದಂತೆ ಮಹತ್ವದ ಸ್ಥಾನಗಳಿಗೆ ಸಮುದಾಯದ ಅರ್ಹ ವ್ಯಕ್ತಿಗಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸುತ್ತೇವೆ. ಬೆಂಗಳೂರು ನಗರಭಾವಿ ಪ್ರದೇಶದಲ್ಲಿ ಬಿಡಿಎಯಿಂದ ನಮ್ಮ ಸಮುದಾಯಕ್ಕೆ ಅಲಾಟಾಗಿರುವ ಸೈಟ್ ನಲ್ಲಿ ಶಿವಶರಣ ಹರಳಯ್ಯ ಭವನ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರ ನಿರ್ಮಾಣಕ್ಕಾಗಿ ನಿಧಿ ಮಂಜೂರು ಮಾಡಿ ಹಾಗೂ ಪ್ಲಾನ್ ಗೆ ಅನುಮೋದನೆ ನೀಡಬೇಕು ಎಂದು ಕೋರಿದ್ದಾರೆ.
ಜಾತಿ ಗಜೆಟ್ ಅಧಿಸೂಚನೆಯಲ್ಲಿ ಕ್ರಮ ಸಂಖ್ಯೆ 93ರಲ್ಲಿ ಸಮಗಾರ ಜಾತಿ ಎಂದು ಉಲ್ಲೇಖಿತವಾಗಿದ್ದು, ಕ್ರಮ ಸಂಖ್ಯೆ 22ರಲ್ಲಿ ಸಮಾಗಾರ ಜಾತಿ ಉಪಜಾತಿಗಳು ನಮೂದಾಗಿವೆ. ಆದ್ದರಿಂದ ಕ್ರಮ ಸಂಖ್ಯೆ 93 ಅನ್ನು ಕ್ರಮ ಸಂಖ್ಯೆ 22ರಲ್ಲಿ ವಿಲೀನಗೊಳಿಸಿ ಪರಿಗಣಿಸಬೇಕು ಎನ್ನುವದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಸಮಗಾರ ಸಮುದಾಯ ಅತ್ಯಂತ ಬಡವರಾಗಿದ್ದು ರಾಜಕೀಯ ಪ್ರತಿನಿಧಿತ್ವವಿಲ್ಲದ ಕಾರಣ, ನ್ಯಾಯ ದೊರಕುವಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯೋಗ್ಯ ಪ್ರತಿನಿಧಿತ್ವ ನೀಡಬೇಕು. ಮಹಾಶರಣ ಹರಳಯ್ಯ ಮತ್ತು ಕಲ್ಯಾಣಮ್ಮ ಸ್ಮಾರಕಗಳ ಅಭಿವೃದ್ದಿಗೆ, ಸರ್ಕಾರ ವಿಶೇಷ ಬಜೆಟ್ ಮತ್ತು ಯೋಜನೆ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಮಗಾರ ಸಮುದಾಯದ ಅನೇಕ ಕುಟುಂಬಗಳು ಚಪ್ಪಲ್ ರಿಪೇರಿ ಮತ್ತು ಚಪ್ಪಲ್ ಮಾರಾಟದ ಮೂಲಕ ತಮ್ಮ ಜೀವನೋಪಾಯವನ್ನು ನಡೆಸುತ್ತಿದ್ದಾರೆ. ದಿನನಿತ್ಯವೂ ರಸ್ತೆ ಬದಿ, ಬಿಸಿಲು–ಮಳೆ ಹಾಗೂ ಅನೇಕ ಅಸೌಕರ್ಯಗಳ ನಡುವೆ ಕೆಲಸ ಮಾಡುತ್ತಿದ್ದು, ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಸುಧಾರಣೆಗೆ ಲಿಡ್ಕರ್ ಶೆಡ್ ಗಳನ್ನು ಮಂಜೂರು ಮಾಡಬೇಕು. ಜೀವ ವಿಮೆ ಸೌಲಭ್ಯ ಮತ್ತು ವಸತಿ ಸೌಲಭ್ಯ ಯೋಜನೆ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಗಣೇಶ ಕಾಳೆ ವಿನಂತಿಸಿದ್ದಾರೆ.















