ಬೆಂಗಳೂರು: ವನಲೋಕ ಪೌಂಡೇಷನ್ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ತಿನ ವತಿಯಿಂದ ಜ.4ರಂದು ನಡೆಯುವ 23 ನೇ ಚಿತ್ರಸಂತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಲಾಪ್ರದರ್ಶನಕ್ಕೆೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್ ಮಾಹಿತಿ ನೀಡಿದರು.
ಮಂಗಳವಾರ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಸಚಿವ ಎಂ.ಸಿ ಸುಧಾಕರ್, ಸಂಸತ್ ಸದಸ್ಯ ಪಿ.ಸಿ ಮೋಹನ್, ಶಾಸಕರಾದ ಎಸ್.ಟಿ ಸೋಮಶೇಖರ್, ರಿಜ್ವಾನ್ ಅರ್ಷದ್ ಸೇರಿದಂತೆ ಇನ್ನಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಭಾನುವಾರ ಬೆಳಗ್ಗೆೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದ್ದು, ಪರಿಸರದ ಸವಾಲುಗಳನ್ನು ಸಾರ್ವಜನಿಕರ ಗಮನಕ್ಕೆೆ ತರುವ ಉದ್ದೇಶದಿಂದ ಕಲೆಯ ದೃಷ್ಟಿಕೋನದಲ್ಲಿ ಪರಿಸರ ಸಂಬಂಧಿತ ಸವಾಲುಗಳು ಎಂಬ ವಿಷಯಾಧಾರಿತ ಕಲಾ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಚಿತ್ರಸಂತೆಯಲ್ಲಿ 22 ರಾಜ್ಯ ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಂದ 1500ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಲಿದ್ದಾರೆ. ಈ ಬಾರಿ 3000ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಸ್ಥಳಾವಕಾಶ ದೊರಕದ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲು ವರ್ಚುವಲ್ ಆರ್ಟ್ ಗ್ಯಾಲರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ವರ್ಚುವಲ್ ಗ್ಯಾಲರಿಯಲ್ಲಿ ಕಲಾವಿದರ ಕಲಾಕೃತಿಗಳನ್ನು ಜ. 4ರಿಂದ 31ರವರೆಗೆ ಉಚಿತವಾಗಿ ಪ್ರದರ್ಶಿಸಲಾಗುವುದು. ವಿಶ್ವದಾದ್ಯಂತ ವೀಕ್ಷಕರು ಈ ಗ್ಯಾಲರಿಯ ಕಲಾಕೃತಿಗಳನ್ನು ವೀಕ್ಷಿಸಬಹುದು ಮತ್ತು ಆಸಕ್ತಿ ಇದ್ದಲ್ಲಿ ಈ ಪೋರ್ಟಲ್ ಮೂಲಕ ನೇರವಾಗಿ ಕಲಾವಿದರನ್ನು ಸಂಪರ್ಕಿಸಬಹುದು ಎಂದರು.
ಹಿರಿಯ ನಾಗರಿಕ ಕಲಾವಿದರು ಮತ್ತು ವಿಶೇಷ ಚೇತನ ಕಲಾವಿದರಿಗಾಗಿ ವಿಶೇಷ ಸ್ಥಳವನ್ನು ಗುರುತಿಸಲಾಗಿದೆ. ವೃತ್ತಿಪರ ಕಲಾವಿದರು, ಹವ್ಯಾಸಿ ಕಲಾವಿದರು ಹಾಗೂ ಕಲಾ ಸಂಸ್ಥೆೆಗಳು ಚಿತ್ರಸಂತೆಯಲ್ಲಿ ಭಾಗಿಯಾಗಲಿದ್ದಾರೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ, ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ ಮತ್ತು ವಿಧಾನಸೌಧ ಮೆಟ್ರೋ ನಿಲ್ದಾಣದಗಳಿಂದ ಶಿವಾನಂದ ವೃತ್ತದವರೆಗೆ ಫೀಡರ್ ಬಸ್ ಸೇವೆಯನ್ನು ವ್ಯವಸ್ಥೆೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಬಾರಿಯ ಪ್ರದರ್ಶನದಲ್ಲಿ ಬೆಂಗಳೂರಿನ ಭೌಗೋಳಿಕ ರಚನೆ, ಜೀವನಾಡಿಗಳಾದ ನದಿಗಳು, ಅರಣ್ಯಗಳು, ವನ್ಯಜೀವಿ ಮತ್ತು ಮಾನವ ಸಹಬಾಳ್ವೆ, ಹವಾಮಾನ ಬದಲಾವಣೆಯ ಪರಿಣಾಮಗಳು ಸೇರಿದಂತೆ ನಗರದ ಪರಿಸರದ ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸುವ ಪ್ರಮುಖ ವಿಷಯಗಳ ಬಗ್ಗೆೆ ಕಲಾವಿದರು ಕಲೆ ಅರಳಿಸಲಿದ್ದಾರೆ. ಆಯ್ದ ಕಲಾಕೃತಿಗಳು, ಆವರ್ತಕ ಸ್ಥಾಪನೆಗಳು, 3ಡಿ ಮಾದರಿಗಳು ಮತ್ತು ವಿವರಣಾತ್ಮಕ ಪ್ರದರ್ಶನಗಳ ಮೂಲಕ ವೈಜ್ಞಾನಿಕ ಅರಿವು, ಪರಿಸರ ಜ್ಞಾನ ಮತ್ತು ಕಲಾತ್ಮಕ ಅಭಿವ್ಯಕ್ತಿಗಳನ್ನು ಒಟ್ಟುಗೂಡಿಸಿ ಪ್ರಭಾವಶಾಲಿ ದೃಶ್ಯ ಕಥನಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರದರ್ಶಿಸಲ್ಪಡುವ ಕಲಾಕೃತಿಗಳು:
ಈ ಬಾರಿಯ ಚಿತ್ರಸಂತೆಯಲ್ಲಿ ಮೈಸೂರು ಮತ್ತು ತಂಜಾವೂರು ಶೈಲಿಯ ಪರಂಪರೆಯ ಚಿತ್ರಕಲೆ, ರಾಜಸ್ಥಾನಿ, ಮಧುಬನಿ ಶೈಲಿಯ ಕಲಾಕೃತಿಗಳು ಹಾಗೂ ಜಲಬಣ್ಣ, ತೈಲಬಣ್ಣ, ಅಕ್ರಿಲಿಕ್, ಪೆನ್ಸಿಲ್, ಮಷಿ ರೇಖಾಚಿತ್ರಗಳು, ಗ್ರಾಫಿಕ್ ಮಾಧ್ಯಮ ಕೃತಿಗಳು, ಪ್ರಸಿದ್ಧ ಕಾರ್ಟೂನಿಸ್ಟ್ ಗಳ ಕಾರ್ಟೂನ್‌ಗಳು ಸೇರಿದಂತೆ ವಿವಿಧ ಪರಂಪರೆಯ ಆಧುನಿಕ ಮತ್ತು ಸಮಕಾಲೀನ ಶೈಲಿಯ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಮಳಿಗೆಗಳನ್ನು ವಿಂಡ್ಸರ್ ಮ್ಯಾನರ್ ಹೋಟೆಲ್ ಜಂಕ್ಷನ್‌ನಿಂದ ಶಿವಾನಂದ ವೃತ್ತದವರೆಗೆ ಹಾಗೂ ಕ್ರೆೆಸೆಂಟ್ ರಸ್ತೆೆಯ ಒಂದು ಭಾಗದಲ್ಲಿ ವಿಸ್ತರಿಸಲ್ಪಡುತ್ತವೆ. ಹೆಚ್ಚುವರಿ ಮಳಿಗೆಗಳನ್ನು ಸೇವಾದಳ ಮೈದಾನ ಮತ್ತು ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಭದ್ರತೆ, ತುರ್ತು ಚಿಕಿತ್ಸಾ ವ್ಯವಸ್ಥೆೆ:
ಚಿತ್ರಸಂತೆಗೆ ಭೇಟಿ ನೀಡುವವರ ಅಗತ್ಯಗಳನ್ನು ಪೂರೈಸಲು ಆಹಾರ ಮಳಿಗೆಗಳ ವ್ಯವಸ್ಥೆೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಗಾಗಿ ಆಯ್ದ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆೆ ಮಾಡಲಾಗುತ್ತಿದೆ. ಪ್ರಥಮ ಚಿಕಿತ್ಸೆೆ ಮತ್ತು ಆಂಬ್ಯುಲೆನ್ಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಭದ್ರತಾ ಉದ್ದೇಶಕ್ಕಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಬಿ.ಎಲ್ ಶಂಕರ್ ಹೇಳಿದರು.














