ಬೆಂಗಳೂರು: ಪ್ರಸಕ್ತ ಹಂಗಾಮಿನಲ್ಲಿ ಒಟ್ಟು 81 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿದ್ದು, ನಾಲ್ಕು ಸಹಕಾರಿ ಸೇರಿದಂತೆ ಒಟ್ಟು 16 ಸಕ್ಕರೆ ಕಾರ್ಖಾನೆಗಳು ನಿಯಮಾನುಸಾರ ಕಬ್ಬಿನ ಬಿಲ್ ಪಾವತಿ ಮಾಡದ ಕಾರಣ ರಿಕವರಿ ನೋಟಿಸ್ ಜಾರಿ ಮಾಡಲಾಗಿದೆ.
ರೈತರಿಗೆ ಕೊಡಬೇಕಾದ ಕಬ್ಬಿನ ಬಿಲ್ ಬಾಕಿಯನ್ನು ಕಂದಾಯ ಬಾಕಿ ಎಂದು ಪರಿಗಣಿಸಿ ಪ್ರತಿಶತ 15 ರಷ್ಟು ಬಡ್ಡಿಯೊಂದಿಗೆ ರೈತರಿಗೆ ಕೊಡಿಸಬೇಕು ಎಂದು ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕ ಗೋವಿಂದರೆಡ್ಡಿ ಅವರು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ಅಂತಹ ಕಾರ್ಖಾನೆಗಳಗೆ ಬಾಕಿಯನ್ನು ತಕ್ಷಣ ಪಾವತಿ ಮಾಡಬೇಕು ಎಂದು ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ನೀಡಿದ ನಂತರವೂ ಕೆಲವು ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ರಿಕವರಿ ಸರ್ಟಿಫಿಕೇಟ್ ಜಾರಿ ಮಾಡಲಾಗಿದೆ ಎಂದು ಕಬ್ಬು ಅಭಿವೃದ್ಧಿ ಆಯುಕ್ತರು ತಿಳಿಸಿದ್ದಾರೆ.
ಕಳೆದ ಹಂಗಾಮಿಗೆ ಹೋಲಿಕೆ ಮಾಡಿದರೆ ಕಾರ್ಖಾನೆಗಳು ಘೋಷಿಸಿದ ದರದಂತೆ ಪ್ರತಿ ಟನ್ ಕಬ್ಬಿಗೆ 250 ರಿಂದ 300 ರೂ. ಹೆಚ್ಚಳವಾಗಿದೆ. ಕಬ್ಬಿನ ಬಿಲ್ ಪಾವತಿಯನ್ನು ಹೋಲಿಕೆ ಮಾಡಿದರೆ ಕಳೆದ ಹಂಗಾಮಿಗಿಂತ 4.709 ಕೋಟಿ ರೂ. ಹೆಚ್ಚಳವಾಗಲಿದೆ. ಕಬ್ಬಿನ ಬಿಲ್ ಪಾವತಿಯಲ್ಲಿ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
2022-23ರ ಹಂಗಾಮಿನಲ್ಲಿ ಪ್ರತಿಶತ 102ರಷ್ಟು, 2023-24ರ ಹಂಗಾಮಿನಲ್ಲಿ ಪ್ರತಿಶತ 104ರಷ್ಟು ಹಾಗೂ 2024-25ನೇ ಹಂಗಾಮಿನಲ್ಲಿ ಪ್ರತಿಶತ 107.39ರಷ್ಟು ಹಣವನ್ನು ಪಾವತಿ ಮಾಡಲಾಗಿದ್ದು, ಇದು ಎಫ್.ಆರ್.ಪಿ ದರಕ್ಕಿಂತ ಹೆಚ್ಚಿದೆ. ಕಳೆದ ಹಂಗಾಮಿಗೆ ಹೋಲಿಕೆ ಮಾಡಿದರೆ ಈ ಹಂಗಾಮಿನಲ್ಲಿ, ಕಬ್ಬು ನುರಿಸುವಿಕೆ ಮತ್ತು ಸಕ್ಕರೆ ಉತ್ಪಾದನೆ ಪ್ರಮಾಣದಲ್ಲಿ ಪ್ರತಿಶತ 9 ರಷ್ಟು ಏರಿಕೆಯಾಗಿದೆ.ಈ ಮೂಲಕ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮ ಸಕ್ಕರೆ ಇಳುವರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
2025-26ನೇ ಹಂಗಾಮಿನ ಅಂತ್ಯಕ್ಕೆ ಸುಮಾರು 574 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ ಸುಮಾರು 23,250 ಕೋಟಿ ರೂ.ಗಳಷ್ಟು ಹಣವನ್ನು ಕಬ್ಬು ಪೂರೈಕೆ ಮಾಡಿದ ರೈತರಿಗೆ ಪಾವತಿಸುವ ಅಂದಾಜು ಇದೆ ಎಂದು ವಿವರಿಸಿದ್ದಾರೆ.
300 ಕೋಟಿ ರೂ. ನೆರವು ಬಿಡುಗಡೆ:
ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ಎಫ್.ಆರ್.ಪಿ ಮೇಲೆ ಪ್ರತಿ ಟನ್ ಕಬ್ಬಿಗೆ 50 ರೂ.ಗಳ ಆರ್ಥಿಕ ನೆರವನ್ನು ಕಬ್ಬು ಪೂರೈಕೆ ಮಾಡಿದ ರೈತರಿಗೆ ನೀಡಲು ರಾಜ್ಯ ಸರ್ಕಾರ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕಬ್ಬು ಬೆಳೆಗಾರರ ಅಭಿಪ್ರಾಯದಂತೆ ಈ ಹಣವನ್ನು ಸಕ್ಕರೆ ಕಾರ್ಖಾನೆಗಳಿಗೆ ಬಿಡುಗಡೆ ಮಾಡಲಾಗಿದೆ. ಸಕ್ಕರೆ ಕಾರ್ಖಾನೆಗಳ ಪಾಲಿನ 50 ರೂ. ಆರ್ಥಿಕ ನೆರವು ಸೇರಿ ಒಟ್ಟು 100 ರೂ.ಗಳನ್ನು ಕಬ್ಬು ಬೆಳೆಗಾರರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಕಬ್ಬು ಅಭಿವೃದ್ಧಿ ಆಯುಕ್ತರು ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದಾರೆ.















