ಬೆಳಗಾವಿ ಕೃಷಿ ಇಲಾಖೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ; ನೋಟು ಹರಿದು ಚರಂಡಿಗೆ ಎಸೆದ ಆಸಾಮಿ

WhatsApp
Telegram
Facebook
Twitter
LinkedIn

ಬೆಳಗಾವಿ/ಧಾರವಾಡ: ಬೆಳಗಾವಿ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಅವರ ಧಾರವಾಡ ನಿವಾಸದ ಮೇಲೆ ಇಂದು ಮಂಗಳವಾರ ಬೆಳಗಿನ ಜಾವ ಲೋಕಾಯುಕ್ತ ದಾಳಿ ನಡೆದಿದೆ. ದಾಳಿಯ ಸಮಯದಲ್ಲಿ ಅಧಿಕಾರಿಯ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಆಸ್ತಿ ಪಾಸ್ತಿ ಪತ್ರಗಳು ಸಿಕ್ಕಿವೆ. ಈ ಅಧಿಕಾರಿಯು 13 ಸ್ಥಳಗಳಲ್ಲಿ ಆಸ್ತಿ ಪಾಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಚಿನ್ನಾಭರಣಗಳು ಕೂಡ ನಿವಾಸದಲ್ಲಿ ಸಿಕ್ಕಿವೆ.

ನೋಟು ಹರಿದು ಚರಂಡಿಗೆ ಹಾಕಿದ ಆಸಾಮಿ:

ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ನಿವಾಸಕ್ಕೆ ಬಂದಿದ್ದು ತಿಳಿಯುತ್ತಲೇ ಅಧಿಕಾರಿ ರಾಜಶೇಖರ ಇವರು ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳನ್ನು ಹರಿದು ಟಾಯ್ಲೆಟ್ ಗೆ ಹಾಕಿ ಫ್ಲಶ್ ಮಾಡಿದ್ದಾರೆ. ಆದರೆ ಇದನ್ನು ಪತ್ತೆ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಮೋರಿ ಪೈಪ್ ನಲ್ಲಿದ್ದ ಹರಿದ ನೋಟುಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ಒಟ್ಟು 4.81 ಕೋಟಿ ಅಕ್ರಮ ಆಸ್ತಿ ಪತ್ತೆ:

ದಾಳಿಯ ಕುರಿತು ಮಾಹಿತಿ ನೀಡಿರುವ ಧಾರವಾಡ ಜಿಲ್ಲಾ ಲೋಕಾಯುಕ್ತ ಎಸ್.ಪಿ ಎಸ್.ಟಿ ಸಿದ್ದಲಿಂಗಪ್ಪ, ಇಂದಿನ ದಾಳಿಯಲ್ಲಿ ಅಕ್ರಮವಾಗಿ ಸಂಪಾದಿಸಿರುವ 3 ನಿವೇಶನ ಪತ್ತೆಯಾಗಿದ್ದು, ಇವುಗಳ ಮೌಲ್ಯ ಸುಮಾರು 3 ಕೋಟಿ 15 ಲಕ್ಷವಾಗಿದೆ, 2 ಕೋಟಿ 62 ಲಕ್ಷ ಮೌಲ್ಯದ 3 ಮನೆಗಳು ಪತ್ತೆಯಾಗಿವೆ. 1 ಕೋಟಿ 57 ಲಕ್ಷ ಮೌಲ್ಯದ 6.5 ಎಕರೆ 30 ಗುಂಟೆ ಕೃಷಿ ಜಮೀನು ಪತ್ತೆಯಾಗಿದ್ದು, 80 ಸಾವಿರ ನಗದು, 18 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಸಾಮಾನುಗಳು, 38 ಲಕ್ಷ ಮೌಲ್ಯದ ದ್ವಿಚಕ್ರ ವಾಹನ ಮತ್ತು ಕಾರ್ ಗಳು, 15 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು 4 ಕೋಟಿ 81 ಲಕ್ಷ 44 ಸಾವಿರ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಪ್ರಜಾನೆರಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಲೋಕಾಯುಕ್ತರ ಕಾರ್ಯಕ್ಕೆ ಪ್ರಶಂಸೆ:

ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಭ್ರಷ್ಟ ಅಧಿಕಾರಿಯನ್ನು ಬಲೆಗೆ ಬೀಳಿಸಿದ ಇವರ ತಂಡದ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿನ ಪಂಚಾಯತ್ ರಾಜ್ ಹಾಗೂ ಪಿಡಬ್ಲ್ಯೂಡಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಪ್ರಜಾ ನೆರಳು ದಿನಪತ್ರಿಕೆ ಸತತವಾಗಿ ವರದಿ ಮಾಡುತ್ತಿದ್ದು, ಈ ಬಗ್ಗೆ ಲೋಕಾಯುಕ್ತರ ಗಮನಕ್ಕೂ ತರುತ್ತಿರುವುದು ಇಲ್ಲಿ ಉಲ್ಲೇಖನೀಯವಾಗಿದೆ.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon