ಬೆಂಗಳೂರು: ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಏಳು ಸರ್ಕಾರಿ ಅಧಿಕಾರಿಗಳ ಅಕ್ರಮ ಸಂಪತ್ತು ಬಯಲಿಗೆಳೆದಿದ್ದಾರೆ.
ಹಾಸನ, ಮಂಡ್ಯ, ಬೆಂಗಳೂರು, ಧಾರವಾಡ ಸೇರಿದಂತೆ 30 ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದು, ಕೋಟ್ಯಾಂತರ ರೂ ಚರ-ಸ್ಥಿರ ಆಸ್ತಿ ವಶಕ್ಕೆ ಪಡೆದಿದ್ದಾರೆ.ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದಡಿ ದಾಳಿ ನಡೆಸಲಾಗಿದ್ದು, ಕೆಲವರ ಅಕ್ರಮ ಸಂಪತ್ತಿನ ದಾಖಲೆಗಳನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಹಾಸನ ನಗರದ ರಕ್ಷಣಾಪುರಂನಲ್ಲಿರುವ ಮಹಾನಗರ ಪಾಲಿಕೆಯ ಎಇಇ ಎಂ.ಸಿ ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್ ಕುಮಾರ್, ಇನ್‌ಸಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಬೆಳಗ್ಗೆ 5.15 ರ ಸುಮಾರಿನಲ್ಲಿ ಸತ್ಯನಾರಾಯಣ ಅವರ ಮನೆ ಬಳಿ ಹೋಗಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡಲು ಬಾಗಿಲು ಬಡಿಯುತ್ತಿದ್ದಂತೆ ಮನೆಯ ಲೈಟ್ ಆಫ್ ಮಾಡಿ ಮನೆಯ ಬಾಗಿಲು ತೆರೆಯದೆ ಸತಾಯಿಸಿದ್ದಾರೆ.
ಸತತ 2 ಗಂಟೆಯಿಂದ ಮನೆಯ ಬಾಗಿಲು ತೆಗೆಸಲು ಲೋಕಾಯುಕ್ತ ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ. ಬಿಲ್ಡಿಂಗ್ ಹತ್ತಿ ಕಿಟಕಿ ಬಡಿದು, ಕೂಗಿದರೂ ಸತ್ಯನಾರಾಯಣ ಬಾಗಿಲು ತೆಗೆದಿಲ್ಲ. ಈ ಹೈಡ್ರಾಮ ನೋಡಿ ಕೆಲ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸತ್ಯನಾರಾಯಣ ಅವರು ಫೋನ್ ಕೂಡ ಸ್ವಿಚ್ ಆಫ್ ಮಾಡಿ ಮನೆಗೆ ಅಳವಡಿಸಿದ್ದ ಸಿಸಿಟಿವಿ ನೋಡುತ್ತಾ ಲೋಕಾ ಅಧಿಕಾರಿಗಳಿಗೆ ಕೆಲಕಾಲ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ನಂದಿನಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮೇಲ್ವಿಚಾರಣೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರು ಬಂದು ಬಾಗಿಲು ತೆಗೆಸಿದ್ದಾರೆ.ನಂತರ ಮನೆಯವರೆಲ್ಲಾ ಟೆರೆಸ್ ರೂಂನಲ್ಲಿ ಸೇರಿಕೊಂಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಮನೆಯಲ್ಲಾ ಜಾಲಾಡಿದಾಗ ಬೇರೆ ಬೇರೆ ಕಡೆ ಇಟ್ಟಿದ್ದ ಆಸ್ತಿ ದಾಖಲೆ , ನಗದು ಹಣ ಚಿನ್ನಾಭರಣ ಪತ್ತೆಯಾಗಿದೆ.
ಇನ್ನು ನಗರದಲ್ಲೂ ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಬಿಸಿಮುಟ್ಟಿಸಿದೆ. ಬೆಂಗಳೂರಿನ ನಾಲ್ಕು ಕಡೆ ದಾಳಿ ನಡೆಸಿದೆ.ಕೆಆರ್‌ಐಡಿಎಲ್ ಮುಖ್ಯಎಂಜಿನಿಯರ್ ವಸಂತ್ ವಿ ನಾಯಕ್ ಅವರ ನಗರದಲ್ಲಿನ ನಿವಾಸ ಹಾಗು ಬಾಗಲಕೋಟೆ ಜಿಲ್ಲೆಗಳಲ್ಲಿ ಅವರ ಮನೆಗಳ ಜೊತೆಗೆ ಪೋಸ್ಟಲ್ ಕಾಲೋನಿಯಲ್ಲಿರುವ ಅವರ ಸಹೋದರ ಭೀಮಸಿಂಗ್ ನಾಯಕ್ ಅವರ ಮನೆ ಮೇಲೂ ದಾಳಿ ನಡೆದಿದೆ. ಭೀಮಸಿಂಗ್ ನಾಯಕ್ ಅವರು ಬಾಗಲಕೋಟೆ ಡಿಎಆರ್‌ನಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದು, ಬಾಗಲಕೋಟೆ ತಾಲೂಕಿನ ಬಿಲ್ ಕೆರೂರು ಗ್ರಾಮದಲ್ಲಿರುವ ಅವರ ಮೂಲ ನಿವಾಸದಲ್ಲಿಯೂ ಪರಿಶೀಲನೆ ನಡೆಸಲಾಗಿದೆ.ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗಿದೆ. ಬಾಗಲಕೋಟೆ ಲೋಕಾಯುಕ್ತ ಎಸ್‌ಪಿ ಮಾನಿಂಗ್ ನಂದಗಾವಿ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಬಿಡಿಎ ವ್ಯಾಪ್ತಿಯ ಆರ್‌ಎಫ್‌ಓ ಡಾಲೇಶ್ ಅವರ ಬೆಂಗಳೂರಿನಲ್ಲಿರುವ ಮನೆ ಹಾಗೂ ಬಿಡಿಎ ಕಚೇರಿಯಲ್ಲೂ ಕೂಡ ಲೋಕಾಯುಕ್ತ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ. ಈ ವೇಳೆ ಮನೆಯಲ್ಲಿ ಬಿಡಿಎ ದಾಖಲೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ರೈತ ಸೇವಾ ಸಹಕಾರ ಸಂಘದ ಸಿಇಓ ಶಶಿಧರ್ ಅವರ ಬೆಂಗಳೂರು ಹೊರವಲಯದ ಮನೆ ಹಾಗೂ ಅವರ ಕಚೇರಿಯಲ್ಲಿ ತಪಾಸಣೆ ನಡೆದಿದ್ದು, ಕೆಲವೆಡೆ ಕೃಷಿ ಜಮೀನು, ಗೋದಾಮು ಸೇರಿದಂತೆ ಹಲವು ಕಡೆ ಆಸ್ತಿ ಖರೀದಿಸಿರುವ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಇಂದ್ರೇಶ್ ಅವರ ಯಲಹಂಕದ ಮನೆ ಹಾಗೂ ಕಾಲೇಜಿನ ಕೊಠಡಿಯಲ್ಲೂ ಕೂಡ ತಪಾಸಣೆ ನಡೆಸಲಾಗಿದೆ. ಪಿಜಿ ಹಾಗೂ ಇತರೆ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸೀಟು ಕೊಡಿಸುವುದಾಗಿ ಲಂಚ ಪಡೆದಿದ್ದಾರೆ ಎಂಬ ಆರೋಪಗಳು ಇವರ ಮೇಲಿತ್ತು.
ಯಾದಗಿರಿಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿವೀಕ್ಷಕ ವೀರೇಶ್ ಹಿರೇಮಠ ಅವರಿಗೂ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು ಹಲವೆಡೆ ವಾಣಿಜ್ಯ ಕಟ್ಟಡಗಳು, ನಿವೇಶನಗಳು ಪತ್ತೆಯಾಗಿದ್ದು, ಷೇರು ಮಾರುಕಟ್ಟೆಯಲ್ಲೂ ಹೂಡಿಕೆ ಮಾಡಿರುವುದು ಗೊತ್ತಾಗಿದೆ. ಅವರ ಬ್ಯಾಂಕ್ ಮತ್ತು ಇತರ ಕಡೆಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಲೇವಾದೇವಿ ವ್ಯವಹಾರ ನಡೆಸುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಧಾರವಾಡದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಕೆ.ಸುರಕೋಡ ಅವರು ನಿವೃತ್ತಿ ಅಂಚಿನಲ್ಲಿದ್ದು, ಶಿರಹಟ್ಟಿಯಲ್ಲಿ ಬಿಸಿಎಂ ಅಧಿಕಾರಿಯಾಗಿದ್ದಾಗ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.
ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರೇದಾರ ಸೇರಿದಂತೆ ಹಲವು ಅಧಿಕಾರಿಗಳು ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳಲ್ಲೂ ಶೋಧ ಕಾರ್ಯ ನಡೆಸಿದ್ದಾರೆ. ಹಲವೆಡೆ ಕೃಷಿ ಜಮೀನು, ನಿವೇಶನಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಗಳಿಸಿರುವ ದಾಖಲೆಗಳು ಸಿಕ್ಕಿವೆ. ಮೂಲತಃ ರೋಣಾ ತಾಲ್ಲೂಕಿನ ಕೌಜಗೇರಿ ಗ್ರಾಮದವರಾದ ಎಂ.ಎಸ್.ಸುರಕೋಡ ಅವರು ಶಿರಹಟ್ಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ದೂರುಗಳು ದಾಖಲಾಗಿತ್ತು.













