ನವದೆಹಲಿ: ಹಿಂದೆ ಜಿಹಾದಿ ಭಯೋತ್ಪಾದಕರು ಎಲ್ಲೆಂದರಲ್ಲಿ ಬಾಂಬ್ ಸ್ಫೋಟ ಮಾಡುತ್ತಿದ್ದರು, ಆದರೆ ಈಗ ಅವರಿಗೆ ಹಾಗೆ ಮಾಡುವ ಮೊದಲೇ ತಕ್ಕ ಉತ್ತರ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರು ಹತ್ಯೆಗೀಡಾಗುತ್ತಿದ್ದು, ಇದರಿಂದ ಜಾತ್ಯತೀತರೆಂದು ಕರೆಯಲ್ಪಡುವವರ ಹೊಟ್ಟೆಯಲ್ಲಿ ನೋವು ಶುರುವಾಗಿದೆ. ಈ ನೋವು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಅವರು ದೆಹಲಿಯಲ್ಲಿ ಬಾಂಬ್ ಸ್ಫೋಟ ಮಾಡಿ ಜನರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸಿದರು, ಆದರೆ ನಮ್ಮಲ್ಲಿ ಭಯವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಇದಕ್ಕೆ ವಿರುದ್ಧವಾಗಿ, ಎಷ್ಟು ಜಿಹಾದಿ ಭಯೋತ್ಪಾದಕರು ಹುಟ್ಟುತ್ತಾರೋ, ಅಷ್ಟು ಛತ್ರಪತಿ ಶಿವಾಜಿ ಮಹಾರಾಜರು ದೇಶದ ಪ್ರತಿ ಮನೆಯಲ್ಲಿಯೂ ಜನಿಸಲಿದ್ದಾರೆ ಎಂದು ದೆಹಲಿಯ ಸಾಂಸ್ಕೃತಿಕ ಕಾರ್ಯಮಂತ್ರಿ ಕಪಿಲ್ ಮಿಶ್ರಾ ಎಂದು ಎಚ್ಚರಿಕೆ ನೀಡಿದರು.
ಶನಿವಾರ ದೇಶದ ರಾಜಧಾನಿ ದೆಹಲಿಯ ‘ಭಾರತ್ ಮಂಡಪಮ್ ನಲ್ಲಿ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ವತಿಯಿಂದ ಪ್ರಸ್ತುತಪಡಿಸಿದ್ದ ಹಾಗೂ ‘ಸನಾತನ ಸಂಸ್ಥೆ’ ಆಯೋಜಿಸಿದ್ದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರಗಳ ಅವಧಿಯಲ್ಲಿ ರಾಷ್ಟ್ರದ ನಿಜವಾದ ಸಮಸ್ಯೆಗಳ ಬಗ್ಗೆ ಚರ್ಚೆಯ ಅಗತ್ಯವಿದ್ದಾಗ, ಸ್ವತಃ ಸರ್ಕಾರವೇ ಅದನ್ನು ವಿರೋಧಿಸುತ್ತಿತ್ತು ಮತ್ತು ಇಂತಹ ವಿಷಯಗಳ ಬಗ್ಗೆ ಎಲ್ಲಿ ಚರ್ಚಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತಿತ್ತು. ಆದರೆ, ಇಂದು ನಡೆಯುತ್ತಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳ ಬೆಂಬಲವಿದೆ. ಮುಂಬರುವ ದಿನಗಳಲ್ಲಿ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಉನ್ನತಿಗಾಗಿ ಪ್ರತಿಯೊಬ್ಬ ನಾಗರಿಕನು ನಿರಂತರವಾಗಿ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದರು.
ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್ ಅಧ್ಯಕ್ಷ ಮತ್ತು ಭಾರತದ ಮಾಜಿ ಮಾಹಿತಿ ಆಯುಕ್ತ ಉದಯ ಮಾಹೂರಕರ ಅವರು ಮಾತನಾಡಿ, ಇಂದು ಒಟಿಟ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಶ್ಲೀಲತೆಯು ಹರಡುತ್ತಿದೆ. ಹಿಂದವೀ ಸ್ವರಾಜ್ಯ ಸ್ಥಾಪನೆಯಾದಂತೆಯೇ, ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಕಠಿಣತೆ ಅಗತ್ಯವಿದೆ. ಪ್ರತಿಯೊಬ್ಬ ಭಾರತೀಯನು ವಿಕೃತಿ ಸಾಮಗ್ರಿ ಮುಕ್ತ ಭಾರತದ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಸನಾತನ ಸಂಸ್ಥೆಯ ವಕ್ತಾರ ಅಭಯ ವರ್ತಕ ಮಾತನಾಡಿ, ಇಂದು ದೇಶದಲ್ಲಿ ಭಯೋತ್ಪಾದಕರ ಸ್ಲೀಪರ್ ಸೆಲ್ ಇಲ್ಲದ ಜಿಲ್ಲೆ ಅಥವಾ ರಾಜ್ಯವಿಲ್ಲ. ಎರಡು ರಂಗಗಳಲ್ಲಿ ಸೇನೆ ಮತ್ತು ಸರ್ಕಾರ ಹೋರಾಡುತ್ತಿವೆ. ಅರ್ಧ ರಂಗದಲ್ಲಿ ಜನಸಾಮಾನ್ಯರು ಹೋರಾಡಬೇಕಿದೆ. ಆಗ ಮಾತ್ರ ಭಯೋತ್ಪಾದಕರನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿದೆ. ಇದೇ ಉದ್ದೇಶದಿಂದ ದೇಶದ ರಾಜಧಾನಿ ಕುರುಕ್ಷೇತ್ರದ ಸಮೀಪ ಸನಾತನ ರಾಷ್ಟ್ರದ ಶಂಖನಾದ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಂದೇ ಮಾತರಮ್ ಗೀತೆಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಹಾಜರಿದ್ದ ಎಲ್ಲರೂ ಸಾಮೂಹಿಕವಾಗಿ ವಂದೇ ಮಾತರಮ್ಗೀ ತೆಯನ್ನು ಹಾಡಿ ರಾಷ್ಟ್ರಭಾವನೆಯನ್ನು ಜಾಗೃತಗೊಳಿಸಿದರು. ಸನಾತನ ಸಂಸ್ಥೆ ನಿರ್ಮಿತ ಹಿಂದಿ ಪುಸ್ತಕ ಸಂಕಲ್ಪ ರಾಮರಾಜ್ಯ ಕಾ ಮತ್ತು ವೇದವೀರ್ ಆರ್ಯ ರಚಿತ ಇಂಗ್ಲಿಷ್ ಗ್ರಂಥ ಕ್ರೋನಾಲಜಿ ಆ್ಯಂಡ್ ಒರಿಜಿನ್ಸ್ ಆಫ್ ಇಂಡೋ ಯುರೋಪಿಯನ್ ಸಿವಿಲೈಸೇಶನ್ ಅನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶಾಂತಿಗಿರಿ ಮಹಾರಾಜ್, ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಅಂಜಲಿ ಗಾಡಗೀಳ, ಸುದರ್ಶನ್ ನ್ಯೂಸ್‌ನ ಪ್ರಧಾನ ಸಂಪಾದಕ ಸುರೇಶ್ ಚವ್ಹಾಣ್ಕೆ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಸನಾತನ ಸಂಸ್ಥೆಯ ವಕ್ತಾರ ಅಭಯ ವರ್ತಕ ಹಾಜರಿದ್ದರು.















