ಬೆಂಗಳೂರು: ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಶತಮಾನೋತ್ಸವದ ಪ್ರಯುಕ್ತ ನಗರದ ಹೆಬ್ಬಾಳದ ಕರ್ನಾಟಕ ಪಶುವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ಗುರುವಾರ ನೂತನ ಜಾನುವಾರು ಲಸಿಕೆ ಉತ್ಪಾದನಾ ಕೇಂದ್ರವನ್ನು ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಕೆ. ಸಿ ವೀರಣ್ಣ ಲೋಕಾರ್ಪಣೆಗೊಳಿಸಿದರು.
ಲೋಕಾರ್ಪಣೆಯ ನಂತರ ಮಾತನಾಡಿದ ಅವರು, ರಿಂಡರ್ಪೆಸ್ಟ್ ಲಸಿಕೆ ಉತ್ಪಾದನೆಯಿಂದ ಆರಂಭವಾದ ಸಂಸ್ಥೆ ಇಂದು ಲಂಪಿ ಸ್ಕಿನ್ ಸೇರಿದಂತೆ ಹಲವು ವೈರಾಣುಜನ್ಯ ರೋಗಗಳಿಗೆ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಭಾರತದಲ್ಲಿ ಮೊದಲ ಬಾರಿಗೆ ರೇಬಿಸ್ ವಿರುದ್ಧ ಟಿಶ್ಯೂ ಕಲ್ಚರ್ ಲಸಿಕೆ ಅಭಿವೃದ್ಧಿಪಡಿಸಿದ ಹೆಗ್ಗಳಿಕೆಯೂ ಸಂಸ್ಥೆಗಿದೆ ಎಂದು ಅಭಿಪ್ರಾಯಪಟ್ಟರು.
ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕಿ ಡಾ. ಡಿ ರತ್ನಮ್ಮ ಮಾತನಾಡಿ, ಪ್ರತಿವರ್ಷ 10 ವಿವಿಧ ಜಾನುವಾರು ಲಸಿಕೆಗಳನ್ನು ಬಳಸಿ 7 ರಿಂದ 8 ಕೋಟಿ ಡೋಸ್ಗಳನ್ನು ರಾಜ್ಯ ಹಾಗೂ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಪೂರೈಸಲಾಗುತ್ತಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ಪ್ರಾದೇಶಿಕ ಪ್ರಯೋಗಾಲಗಳು ಕಾರ್ಯನಿರ್ವಹಿಸುತ್ತಿವೆ. ಲಸಿಕೆ ಉತ್ಪಾದನೆಯ ಜೊತೆಗೆ ಜಾನುವಾರು ರೋಗಗಳ ಪತ್ತೆ ಮತ್ತು ಸಂಶೋಧನೆಯಲ್ಲಿಯೂ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಡೆಪ್ಯುಟಿ ಡ್ರಗ್ ಕಂಟ್ರೋಲರ್ ಡಾ. ಕೆ.ಎಂ. ಶ್ರೀನಿವಾಸನ್, ಸಂಸ್ಥೆಯ ಶತಮಾನದ ಸಾಧನೆಯನ್ನು ಶ್ಲಾಘಿಸಿದರು. ಮಾಜಿ ವ್ಯವಸ್ಥಾಪಕ ಮಂಡಳಿ ಸದಸ್ಯರು, ನಿವೃತ್ತ ಕುಲಪತಿಗಳು ಹಾಗೂ ಹಿರಿಯ ವಿಜ್ಞಾನಿಗಳು ಸಂಸ್ಥೆಯ ಸಂಶೋಧನಾ ಸಾಧನೆಗಳು ಮತ್ತು ರೈತಪರ ಸೇವೆಯನ್ನು ಸ್ಮರಿಸಿದರು.
ಶತಮಾನೋತ್ಸವ ಅಂಗವಾಗಿ ತಾಂತ್ರಿಕ ಸಮ್ಮೇಳನ, ವಿಚಾರಗೋಷ್ಠಿ, ಪ್ರದರ್ಶನ ಹಾಗೂ ರೈತರಿಗೆ ಉಪಯುಕ್ತ ತಂತ್ರಜ್ಞಾನಗಳ ಪ್ರದರ್ಶನಕ್ಕೂ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪಶುವೈದ್ಯ ಇಲಾಖೆಯ ಅಧಿಕಾರಿಗಳು, ವಿಶ್ವವಿದ್ಯಾಲಯದ ಸಿಬ್ಬಂದಿ, ವಿವಿಧ ಜಿಲ್ಲೆಗಳ ಪಶುವೈದ್ಯರು, ಪ್ರಗತಿಪರ ಪಶುಪಾಲಕರು ಉಪಸ್ಥಿತರಿದ್ದರು.















