ಬೆಂಗಳೂರು: ಬ್ಯಾಕ್ಲಾಗ್ ಹುದ್ದೆ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜು.3 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್ ತಿಳಿಸಿದರು.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿಶೇಷ ಘಟಕ ಯೋಜನೆ ಹಣವನ್ನು ನಿಯಮಬಾಹಿರವಾಗಿ ಸಾರಿಗೆ ಇಲಾಖೆ ಸಿಬ್ಬಂದಿಗಳ ವೇತನಕ್ಕೆ ಬಿಡುಗಡೆ ಮಾಡಿರುವ 200 ಕೋಟಿ ರುಪಾಯಿಯನ್ನು ಮರು ವಸೂಲಿ ಮಾಡಬೇಕು. ಹಣ ಬಿಡುಗಡೆಗೊಳಿಸಿದ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದು ಹೇಳಿದರು.
ವಿಶೇಷ ಘಟಕ ಯೋಜನೆ ಅನುಷ್ಠಾನಕ್ಕೆ ಏಕಗವಾಕ್ಷಿ ನೀತಿ ಜಾರಿ, ಪರಿಶಿಷ್ಟರ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಭೂಹೀನ ಪರಿಶಿಷ್ಟ ಕೃಷಿ ಕಾರ್ಮಿಕರಿಗೆ ಕನಿಷ್ಟ ಎರಡು ಎಕರೆ ಜಮೀನು ನೀಡಬೇಕು.ಅರಣ್ಯ ವಾಸಿಗಳು, ಬಗರ್ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಮಣಿಪಾಲ್ ರಾಜಪ್ಪ, ಮುನಿನಂಜಪ್ಪ, ವರ್ತೂರು ರವಿಕುಮಾರ್, ದಶರಥ್ ಮಾರಗೊಂಡನಹಳ್ಳಿ, ಬಾಲಕೃಷ್ಣ ಶ್ರೀರಾಂಪುರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.















