ಬೆಂಗಳೂರು: ಸಕಲ ಜೀವರಾಶಿಗಳಿಗೂ ಸೃಷ್ಟಿಯಾಗಬೇಕಾದರೆ ತಾಯಿಯ ಪಾತ್ರವೇ ಮಹತ್ವವಾಗಿದೆ. ಮನುಷ್ಯನೂ ಅಮ್ಮನ ಹೊರತಾಗಿ ನಗಣ್ಯನಾಗಿದ್ದಾನೆ. ಆದ್ದರಿಂದ ತಾಯಿ ಎಂದರೆ ಕೇವಲ ಒಂದು ಪದವಲ್ಲ, ಅದು ಅನಂತ ಪ್ರೀತಿ, ತ್ಯಾಗ ಮತ್ತು ಮಮತೆಯ ರೂಪವಾಗಿದೆ ಎಂದು ಚಿಲುಮೆ ರವಿಕುಮಾರ್ ಹೇಳಿದರು.
ಭಾನುವಾರ ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿವನಗರದ ಸಿದ್ಧಗಂಗಾ ಹೈ ಸ್ಕೂಲ್ ಮೈದಾನದಲ್ಲಿ ಚಿಲುಮೆ ಫೌಂಡೇಶನ್ ವತಿಯಿಂದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮವನ್ನು ನೆಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲವಾಗಿ ನಿಲ್ಲುವ ಶಕ್ತಿ ತಾಯಿ. ಅವಳ ಕೈಗಳಲ್ಲಿ ನಾವು ಸುರಕ್ಷಿತವಾಗಿದ್ದೇವೆ, ಅವಳ ಹೃದಯದಲ್ಲಿ ನಮ್ಮ ಕನಸುಗಳು ಬೆಳೆದುಕೊಳ್ಳುತ್ತವೆ. ನಾವು ನಗುವಾಗ ಅವಳು ಸಂತೋಷ ಪಡುವಳು, ನಾವು ನೋವು ಅನುಭವಿಸಿದಾಗ ಅವಳ ಹೃದಯವೇ ಕರಗುತ್ತದೆ. ನಮ್ಮ ಯಶಸ್ಸಿನ ಹಿಂದೆ ಇರುವ ನಿಜವಾದ ಶಕ್ತಿ ತಾಯಿಯ ಆಶೀರ್ವಾದ ಮತ್ತು ತ್ಯಾಗವೇ ಆಗಿದೆ ಎಂದು ಅಭಿಪ್ರಾಯಿಸಿದರು.
ಈ ವಿಶ್ವ ತಾಯಂದಿರ ದಿನದಂದು, ತಾಯಿಯ ಅನಂತ ಪ್ರೀತಿಗೆ ಕೃತಜ್ಞತೆಯನ್ನು ಸಲ್ಲಿಸಿ, ಅವಳಿಗೆ ಗೌರವ ನೀಡುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದೆ. ಎಲ್ಲಾ ತಾಯಂದಿರಿಗೂ ಹೃತ್ಪೂರ್ವಕವಾದ ಶುಭಾಶಯಗಳನ್ನು ತಿಳಿಸುತ್ತಾ, ನಿಮ್ಮ ಪ್ರೀತಿ ಸದಾ ನಮ್ಮ ಬದುಕಿಗೆ ಬೆಳಕು ನೀಡಬೇಕು. ಆದ್ದರಿಂದಲ್ಲೇ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ತಾಯಂದಿರನ್ನು ಸನ್ಮಾನಿಸಿ ಸತ್ಕರಿಸುವ ಕಾರ್ಯ ಇಂದು ನಡೆಸಲಾಗಿದೆ ಎಂದರು.
ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ತಾಯಂದಿರೆ ರಕ್ತ ದಾನವನ್ನು ಮಾಡುವಂತಹ ವಿಶೇಷ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಜೀವವನ್ನು ಈ ಧರೆಗೆ ತಂದ ತಾಯಿ ಇನ್ನೊಬ್ಬರ ಪ್ರಾಣವನ್ನು ಉಳಿಸುವ ರಕ್ತವನ್ನು ಸಹ ನೀಡಬಲ್ಲ ವ್ಯಕ್ತಿಯಾಗಿದ್ದಾಳೆ ಎಂದು ಇದರಿಂದ ಸಾಬೀತುಪಡಿಸಲಾಗಿದೆ. ಇಂತಹ ವಿಶಿಷ್ಟ ಸೇವಾ ಕಾರ್ಯಕ್ರಮ ಸಹ ಇದೇ ಮೊದಲಾಗಿದೆ ಎಂದು ರವಿಕುಮಾರ್ ಸಂತಸ ವ್ಯಕ್ತಪಡಿಸಿದರು.















