ಬೆಂಗಳೂರು: ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ ಏಪ್ರಿಲ್ 23 ಮತ್ತು 24ರಂದು ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್ ಮಾಹಿತಿ ನೀಡಿದರು.
ಕೆಇಎ ಕಚೇರಿಯಲ್ಲಿ ಶುಕ್ರವಾರ ಸಿಇಟಿ ದಿಕ್ಸೂಚಿ-2026 ಕಿರು ಹೊತ್ತಿಗೆಯನ್ನು ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಬಿಡುಗಡೆಗೊಳಿಸಿ, ಸಿಇಟಿ ಪ್ರಕ್ರಿಯೆಗೆ ಚಾಲನೆ ನೀಡಿದರು.
ಈ ವೇಳೆ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರು, ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗೆ ಸಂಬಂಧಿಸಿದ ನೋಂದಣಿ ಪ್ರಕ್ರಿಯೆ ಜನವರಿ 17ರಿಂದ ಪ್ರಾರಂಭವಾಗಲಿದ್ದು, ಏಪ್ರಿಲ್ 23ರ ಗುರುವಾರ ಬೆಳಗ್ಗೆ 10.30ರಿಂದ 11.50ರ ವರೆಗೆ ಭೌತಶಾಸ್ತ್ರ ಪರೀಕ್ಷೆ, ಅಂದು ಮಧ್ಯಾಹ್ನ 2.30ರಿಂದ 3.50ರ ವರೆಗೆ ರಸಾಯನಶಾಸ್ತ್ರ ಪರೀಕ್ಷೆ ಜರುಗಲಿದೆ ಮತ್ತು 24ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಗಣಿತಶಾಸ್ತ್ರ ಪರೀಕ್ಷೆ ನಡೆದರೆ, ಮಧ್ಯಾಹ್ನ 2.30ರಿಂದ 3.50ರ ವರೆಗೆ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು.
ಏ.22ರ ಬೆಳಗ್ಗೆ 10.30ರಿಂದ 11.30ರ ವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಡೆಯಲಿದೆ ಎಂದು ಹೇಳಿದರು.
ಸಿಇಟಿ ದಿಕ್ಸೂಚಿ-2026:
ಗ್ರಾಮೀಣ ಭಾಗದ ಮಕ್ಕಳಿಗೆ ಸಿಇಟಿ ಪ್ರಕ್ರಿಯೆಯನ್ನು ಸರಳವಾಗಿ ಅರ್ಥೈಸಲು ಈಗಾಗಲೇ ಪ್ರಾಧಿಕಾರವು ಕೆಇಎ ಚಾಟ್-ಬಾಟ್ ಹಾಗೂ ಆ್ಯಪ್ ಅನ್ನು ಹೊರ ತಂದಿದೆ. ಇದೀಗ ಸಿಇಟಿ ದಿಕ್ಸೂಚಿ ಕಿರು ಹೊತ್ತಿಗೆ ಪರಿಚಯಿಸಿದ್ದು, ಇದರಲ್ಲಿ ಅರ್ಜಿ ಸಲ್ಲಿಕೆಯಿಂದ ಹಿಡಿದು ಶುಲ್ಕ ವಿವರ, ಲಭ್ಯವಿರುವ ಸೀಟುಗಳು, ಅರ್ಹತಾ ಮಾನದಂಡಗಳು, ಪರೀಕ್ಷಾ ಕೇಂದ್ರಗಳು ಸೇರಿದಂತೆ ಸಮಗ್ರ ವಿವರ ತಿಳಿಸಲಿದೆ ಎಂದು ವಿವರಿಸಿದರು.
ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಕೈಪಿಡಿ:
ರಾಜ್ಯದಲ್ಲಿ ಸರ್ಕಾರಿ ಸೇರಿದಂತೆ ಮಾನ್ಯತೆ ಪಡೆದ ಒಟ್ಟು 3,112 ವಿಜ್ಞಾನ ಪಿಯು ಕಾಲೇಜುಗಳಿದ್ದು, ಈ ಪೈಕಿ ದ್ವಿತೀಯ ಪಿಯುಸಿಯಲ್ಲಿ 2,92,733 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರ ಜತೆಗೆ ರಾಜ್ಯದಲ್ಲಿನ ಸಿಬಿಎಸ್‌ಇ ಹಾಗೂ ಇಐಎಸ್‌ಇ ಕಾಲೇಜುಗಳಲ್ಲಿ ಓದುವ 83 ಸಾವಿರ ಮಂದಿಯನ್ನೂ ಸೇರಿ ಒಟ್ಟು 3,75,507 ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಕೈಪಿಡಿ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಆಧಾರ್-ಡಿಜಿ ಲಾಕರ್ ವ್ಯವಸ್ಥೆ ಅಳವಡಿಕೆ:
ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವಿಕೆ ಈ ಬಾರಿಯ ವಿಶೇಷತೆಯಾಗಿದೆ. ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯ ಹೆಸರೂ, ಹುಟ್ಟಿದ ದಿನಾಂಕ, ವಿಳಾಸ ಇತ್ಯಾದಿ ವಿವರಗಳನ್ನು ಆಧಾರ್ ಅಥವಾ ಡಿಜಿ ಲಾಕರ್ ಮೂಲಕ ಪ್ರಾಮಾಣೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಹೆಸರು ಬರೆಯುವುದರಲ್ಲಿ ಆಗುತ್ತಿದ್ದ ತಪ್ಪುಗಳನ್ನು ತಪ್ಪಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಶುಲ್ಕ ಪಾವತಿಸಿಕೊಂಡರೆ ಕ್ರಮ:
ಸಿಇಟಿ ಪರೀಕ್ಷೆಯ ಮೂಲಕ ಸರ್ಕಾರಿ ಸೀಟುಗಳನ್ನು ಪಡೆದುಕೊಂಡು ಕಾಲೇಜುಗಳಿಗೆ ಪ್ರವೇಶ ಪಡೆದುಕೊಂಡಾಗ ಸರ್ಕಾರಿ ನಿಗದಿ ಮಾಡಿದ ಶುಲ್ಕಕ್ಕಿಂತ ಹೆಚ್ಚಿನ ಹಣ ಪಾವತಿಸಬಾರದು. ಹೆಚ್ಚಿನ ಶುಲ್ಕ ಪಾವತಿಸುವಂತೆ ಒತ್ತಾಯಿಸಿದರೆ ಪ್ರಾಧಿಕಾರಕ್ಕೆ ದೂರು ನೀಡಿದರೆ ಆ ಕಾಲೇಜಿನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.














