ಬೆಂಗಳೂರು: ಮೇಲ್ಮನೆಯಲ್ಲಿ ಅವಧಿ ಮುಕ್ತಾಯಗೊಳ್ಳಲಿರುವ 11 ಜನ ಸದಸ್ಯರಿಗೆ ಸದನ, ವಿದಾಯ ನೀಡಿ ಶುಭ ಕೋರಿತು.
ಗುರುವಾರ ಈ ಕುರಿತು ಪ್ರಸ್ತಾಪಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಮುಂಬರುವ ಜೂ.30 ರಂದು ಕಾಂಗ್ರೆಸ್‌ನ ಕೆ. ಗೋವಿಂದರಾಜು, ನಜೀರ್ ಅಹಮದ್, ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ್, ಬಿಜೆಪಿಯ ಎಂ.ಟಿ.ಬಿ. ನಾಗರಾಜು, ಪ್ರತಾಪ್‌ಸಿಂಹ ನಾಯಕ್, ಸುನೀಲ್ ವಲ್ಯಾಪುರೆ ಹಾಗೂ ಜು. 21 ರಂದು ಬಿಜೆಪಿಯ ಎಚ್. ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತಾರಾಮ್ ಬುಡ್ನ ಸಿದ್ದಿ, ಡಾ. ತಳವಾರ್ ಸಾಬಣ್ಣ ಅವರ ಅವಧಿ ಮುಕ್ತಾಯಗೊಳ್ಳಲಿದೆ.
ಇವರೊಂದಿಗೆ ವಿಧಾನ ಪರಿಷತ್‌ನ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ, ಸಹಕಾರ್ಯದರ್ಶಿ ಎಸ್. ನಿರ್ಮಲಾ ಅವರೂ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಅವರೆಲ್ಲರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಬಸವರಾಜ್ ಹೊರಟ್ಟಿ ಶುಭ ಕೋರಿದರು.
ಮುಂಬರುವ ಜೂನ್-ಜುಲೈನಲ್ಲಿ ಕೆಲವು ಸದಸ್ಯರು ನಿವೃತ್ತಿಯಾಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಎಂಟು ದಿನದ ಅಧಿವೇಶನದಲ್ಲಿ ಕರೆಯಬೇಕು ಎಂದು ಮನವಿ ಮಾಡುತ್ತೇನೆ. ಆಗ ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಕೇಳುತ್ತೇನೆ. ಮುಖ್ಯಮಂತ್ರಿಗಳು ಒಪ್ಪಿದರೆ ಸರಿ. ಇಲ್ಲವಾದರೆ, ಇದನ್ನೇ ವಿದಾಯ ಎಂದು ಪರಿಗಣಿಸಬೇಕು ಎಂದು ತಿಳಿಸಿದರು.














