ಬೆಂಗಳೂರು: ವಸಂತಾ ಆರ್ಟ್ಸ್ ವತಿಯಿಂದ ಕೋರಮಂಗಲದ 7 ನೇ ಬ್ಲಾಕ್ ನ ಶೇಡ್ಸ್ ಕ್ರಿಯೇಟಿವ್ ಗ್ಯಾಲರಿಯಲ್ಲಿ ಅತಿ ಮನೋಮೋಹಕ ಚಿತ್ರಕಲೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕಲಾಸಕ್ತರಿಗಾಗಿ ಬಾಟಿಕ್ ಆರ್ಟ್ ಗಳನ್ನು ವೀಕ್ಷಣೆಗಾಗಿ ವಿಶೇಷವಾಗಿ ಪ್ರದರ್ಶಿಸಲಾಗುತ್ತಿದೆ.
ಮೇ 9 ರಿಂದ 16 ರವರೆಗೆ ವಿವಿಧ ಬಗೆಯ ಪೇಟಿಂಗ್ಸ್ ಪ್ರದರ್ಶನಕ್ಕಿದ್ದು, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ 13 ಚಿತ್ರಕಾರರನ್ನು ಭೇಟಿಯಾಗಿ ಮಾತನಾಡಿಸುವ ಸಾಧವಕಾಶ ಕೂಡ ಕಲಾಸಕ್ತರಿಗೆ ಇಲ್ಲಿದೆ. ಈ ಪ್ರದರ್ಶನದ ಉಸ್ತುವಾರಿ ಶೇಡ್ಸ್ ಕ್ರಿಯೇಟಿವ್ ನ ಸಫಿಯಾ ಹಯಾತ್ ವಹಿಸಿದ್ದು, ಆರ್ಟ್ ಕ್ಯೂರೇಟರ್ ಹಾಗೂ ಕಲಾವಿದರಾದ ಮೈಲಾದ್ರಿ ಕೆ ಅವರು ತಿಂಗಳಿನಿಂದ ಶ್ರಮವಹಿಸಿ ಇದನ್ನು ಆಯೋಜಿಸಿದ್ದಾರೆ.
ಇನ್ ಸ್ಪೈರಿಂಗ್ ಆರ್ಟ್ಸ್ ಹೆಸರಿನ ಚಿತ್ರ ಪ್ರದರ್ಶನ ಇದಾಗಿದ್ದು, ಶನಿವಾರ ಭಾರತೀಯ ಸಂಗೀತ ಥೆರಫಿ ಅಸೋಸಿಯೇಷನ್ ನ ಟಿ.ವಿ ಸಾಯಿರಾಮ್ ಇದಕ್ಕೆ ಚಾಲನೆಯನ್ನು ನೀಡಿದರು. ಹೈದರಾಬಾದ್ ನ ಪುಲಿ ವಿಜಯ್ ಕಿಶೋರ್, ಮುಂಬೈನ ರೇಣು ಎಸ್.ಅಯ್ಯರ್, ಪುಣೆಯ ಮಧುರಾ ದೇಶಪಾಂಡೆ, ಬೆಂಗಳೂರಿನವರಾದ ಸ್ವಾತಿ ಪರಾಂಜಪೆ, ಶೋಭಾ ಪಿ.ಎ, ದೇಬದತ್ತಮ್ ಚಟರ್ಜಿ, ಪಿ.ಶರ್ಮಿಳಾ, ಸತೀಸ್ ರಿಯಾಲಿ, ಜಾನ್ವಿ ಸಿಂಗ್ ಆರ್, ನೇಹಾ ಗಂಗಾಲ್, ಕರಿಷ್ಮಾ ತಲರೇಜಾ, ಚಾದುರಿಯಾ ಅವರ ಚಿತ್ರಪಟಗಳು ಚಿತ್ರ ಪ್ರೇಮಿಗಳ ಮನಸೂರೆಗೊಳ್ಳುತ್ತಿವೆ.
ಪ್ರದರ್ಶನದ ಕುರಿತು ಸಫಿಯಾ ಹಯಾತ್ ಮಾತನಾಡಿ, ನಮ್ಮ ಗ್ಯಾಲರಿಯಲ್ಲಿ ಅನೇಕ ವರ್ಷಗಳಿಂದ ವಿವಿಧ ಚಿತ್ರ ಕಲಾವಿದರ ಚಿತ್ರಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ, ಈ ಪ್ರದರ್ಶನದಲ್ಲಿ ಬಟ್ಟೆಗಳಿಂದ ತಯಾರಿಸಿದ ಚಿತ್ರಪಟಗಳನ್ನು ವಿಶೇಷವಾಗಿ ಕಾಣಬಹುದಾಗಿದೆ. ಮೊದಲ ಹಂತವಾಗಿ 13 ಮಂದಿ ಚಿತ್ರ ಕಲಾವಿದರ ಪ್ರದರ್ಶನ ನಡೆಯಲಿದ್ದು, ಮೇ17ರಿಂದ 24ರವರೆಗೆ ಎರಡನೇ ಹಂತದ ಪ್ರದರ್ಶನ ಶೇಡ್ಸ್ ಕ್ರಿಯೇಟಿವ್ ಗ್ಯಾಲರಿಯಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು.















