ಬೆಂಗಳೂರು: ಪದೇಪದೇ ಮರುಕಳಿಸುತ್ತಿದ್ದ ಅಪರೂಪದ ಅಂಡಾಶಯದ ಗೆಡ್ಡೆ, ಎರಡು ಬಾರಿ ಶಸ್ತ್ರಚಿಕಿತ್ಸೆ ಹಾಗೂ ಅಂಡಾಣುಗಳ ತೀವ್ರ ಕೊರತೆಯ ನಡುವೆಯೂ 32 ವರ್ಷದ ಮಹಿಳೆಯೊಬ್ಬರು ವೈಯಕ್ತೀಕರಿಸಿದ ಇನ್ ವಿಟ್ರೊ ರ್ಟಿಲೈಸೇಷನ್ (ಐವಿಎಫ್) ಮತ್ತು ಲವತ್ತತೆ ಸಂರಕ್ಷಣಾ ಚಿಕಿತ್ಸೆಯ ಮೂಲಕ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.
ನಗರದ ಮಿಲನ್ ರ್ಟಿಲಿಟಿ ಮತ್ತು ಬರ್ತಿಂಗ್ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ಸಂಕೀರ್ಣ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಮಹಿಳೆಯ ಜೈವಿಕ ತಾಯ್ತನದ ಕನಸನ್ನು ಸಾಕಾರಗೊಳಿಸಿದೆ.
ಈ ಕುರಿತು ಮಿಲನ್ ಆಸ್ಪತ್ರೆಯ ರಿಪ್ರೊಡಕ್ಟಿವ್ ಮೆಡಿಸಿನ್ ಮತ್ತು ಸ್ತ್ರೀರೋಗ ತಜ್ಞೆ ಡಾ. ಟಿ. ಶಿಲ್ಪಾ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಾರ್ಮೋನುಗಳ ಪರಿಣಾಮವನ್ನು ಕನಿಷ್ಠ ಮಟ್ಟದಲ್ಲಿರಿಸಿಕೊಂಡು ಮಹಿಳೆಯ ಲವತ್ತತೆಯನ್ನು ಸಂರಕ್ಷಿಸುವುದು ಚಿಕಿತ್ಸೆಯ ಪ್ರಮುಖ ಉದ್ದೇಶವಾಗಿತ್ತು. ವೈಯಕ್ತೀಕರಿಸಿದ ಐವಿಎಫ್ ವಿಧಾನ ಮತ್ತು ನೈಸರ್ಗಿಕ ಚಕ್ರದ ಬ್ರೂಣ ವರ್ಗಾವಣೆಯಿಂದ ಯಶಸ್ವಿ ಗರ್ಭಧಾರಣೆ ಸಾಧ್ಯವಾಯಿತು ಎಂದು ತಿಳಿಸಿದರು.
ಮಹಿಳೆ ಈ ಹಿಂದೆಯೇ ಬೇರೊಂದು ಆಸ್ಪತ್ರೆಯಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ, ಅಂಡಾಶಯದ ಅಂಗಾಂಶ ಗಣನೀಯವಾಗಿ ಕ್ಷೀಣಿಸಿತ್ತು ಹಾಗೂ ಅಂಡಾಣುಗಳ ಸಂಖ್ಯೆಯೂ ತೀರಾ ಇಳಿಮುಖವಾಗಿತ್ತು. ಇಷ್ಟೆಲ್ಲಾ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ, ತನ್ನದೇ ಅಂಡಾಣುಗಳ ಮೂಲಕ ಮಗು ಪಡೆಯಬೇಕೆಂಬ ಆಕೆಯ ಅದಮ್ಯ ಇಚ್ಛಾಶಕ್ತಿಯನ್ನು ನಮ್ಮ ವೈದ್ಯರ ತಂಡ ಸಾಕಾರಗೊಳಿಸಿದೆ ಎಂದು ಹೇಳಿದರು.
ವಿಭಾಗದ ಜೂನಿಯರ್ ಕನ್ಸಲ್ಟೆಂಟ್ ಡಾ. ಮೋನಿಷಾ ರವಿ ಮಾತನಾಡಿ, ಸಂಕೀರ್ಣ ಕಾಯಿಲೆ ಮತ್ತು ಅಂಡಾಣುಗಳ ತೀವ್ರ ಕೊರತೆಯ ನಡುವೆಯೂ ರೋಗಿಯ ಸುರಕ್ಷತೆಗೆ ಆದ್ಯತೆ ನೀಡಿ, ಆಕೆಯ ಜೈವಿಕ ತಾಯ್ತನದ ಕನಸನ್ನು ನನಸಾಗಿಸಲು ಸಾಧ್ಯವಾಗಿದೆ. ವಿಶೇಷವಾಗಿ ಅಂಡಾಶಯದ ಗಂಭೀರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವಾಗ ಭವಿಷ್ಯದ ಸಂತಾನೋತ್ಪತ್ತಿಯ ಮೇಲಾಗುವ ಪರಿಣಾಮಗಳನ್ನು ಅವಲೋಕಿಸಿ, ಫಲವತ್ತತೆ ಸಂರಕ್ಷಣೆಯ ಬಗ್ಗೆ ಮುಂಚಿತವಾಗಿಯೇ ನಿರ್ಧರಿಸುವುದು ಅತ್ಯಗತ್ಯ ಎಂಬುದನ್ನು ಈ ಪ್ರಕರಣ ಸಾಬೀತುಪಡಿಸಿದೆ ಎಂದರು.
ಗುಣಮಟ್ಟದ ಫರ್ಟಿಲಿಟಿ ಆರೈಕೆ ಎಂದರೆ ಕೇವಲ ಸದ್ಯದ ಸಮಸ್ಯೆಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಭವಿಷ್ಯದ ಸಾಧ್ಯತೆಗಳನ್ನು ತೆರೆದಿಡುವುದು ಎಂದು ಮಿಲನ್ನಲ್ಲಿ ನಾವು ದೃಢವಾಗಿ ನಂಬಿದ್ದೇವೆ. ಪ್ರತಿಯೊಂದು ಪ್ರಕರಣವೂ ತನ್ನದೇ ಆದ ಸವಾಲುಗಳನ್ನು ಹೊಂದಿದ್ದರೂ, ಪರಿಣತರ ಸೂಕ್ತ ಮಾರ್ಗದರ್ಶನ, ಸಕಾಲಿಕ ನಿರ್ಧಾರಗಳು ಮತ್ತು ವೈಯಕ್ತಿಕರಿಸಿದ ಚಿಕಿತ್ಸಾ ವಿಧಾನವು ಅತ್ಯದ್ಭುತ ಫಲಿತಾಂಶ ನೀಡಬಲ್ಲದು. ಮಹಿಳೆಯರು ತಮ್ಮ ಸುರಕ್ಷತೆ ಅಥವಾ ಅಗತ್ಯ ಚಿಕಿತ್ಸೆಯಲ್ಲಿ ರಾಜಿ ಮಾಡಿಕೊಳ್ಳದೆ, ತಮ್ಮ ಫಲವತ್ತತೆಯ ಬಗ್ಗೆ ನಿಖರವಾದ ಹಾಗೂ ಜಾಗೃತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಈ ಪ್ರಕರಣ ಸಾಬೀತುಪಡಿಸಿದೆ ಎಂದರು.
ಮಿಲನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ ಕನ್ಸಲ್ವೆಂಟ್ ಡಾ. ವಾರಿಣಿ ಎನ್., ಎಂಬ್ರಿಯಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಸೈಂಟಿಫಿಕ್ ಡೈರೆಕ್ಟರ್ ಡಾ. ಮೊಹಮ್ಮದ್ ಅಶ್ರಫ್ ಸಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.














