ಬೆಂಗಳೂರು: ಆರೋಗ್ಯವೆಂದರೆ ಕೇವಲ ರೋಗರಹಿತ ಸ್ಥಿತಿಯಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನದ ಸ್ಥಿತಿ. ಪ್ರತಿಯೊಬ್ಬ ವ್ಯಕ್ತಿಯ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ ಎಲ್ಲರ ಆರೋಗ್ಯವನ್ನು ಒಂದೇ ಅಳತೆಗೋಲಿನಿಂದ ಅಳೆಯಲು ಸಾಧ್ಯವಿಲ್ಲ. ಆರೋಗ್ಯದ ಸಮಗ್ರ ಪರಿಕಲ್ಪನೆಗೆ ಯೋಗವೇ ಮಾರ್ಗವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಾ. ವಿ. ಶ್ರೀಶಾನಂದ ಅಭಿಪ್ರಾಯಪಟ್ಟರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಆಯುರ್ವೇದದ ಪ್ರಕಾರ ಮನುಷ್ಯನ ದೇಹವು ವಾತ, ಪಿತ್ತ ಮತ್ತು ಕಫ ಎಂಬ ಮೂರು ಮೂಲ ಧಾತುಗಳ ಮೇಲೆ ನಿಂತಿದೆ. ಈ ಧಾತುಗಳ ಸಮತೋಲನವೇ ಆರೋಗ್ಯದ ಮೂಲ ಲಕ್ಷಣವಾಗಿದ್ದು, ಅವುಗಳ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾದಾಗ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯ ದೈಹಿಕ ಸ್ವಭಾವ ಮತ್ತೊಬ್ಬರಂತಿರದು. ಒಂದೇ ಕುಟುಂಬದಲ್ಲಿಯೂ ಸಹ ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುತ್ತದೆ. ಹೀಗಾಗಿ ಆರೋಗ್ಯವನ್ನು ಕೇವಲ ಯಾಂತ್ರಿಕ ಮಾನದಂಡಗಳಿಂದ ಅಳೆಯುವುದು ಸೂಕ್ತವಲ್ಲ ಎಂದರು.
ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ಋಷಿಮುನಿಗಳು ಯೋಗವನ್ನು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಾಧನವಾಗಿ ಬಳಸಿಕೊಂಡಿದ್ದರು. ಮಹರ್ಷಿ ಪತಂಜಲಿಗಳು ಯೋಗಕ್ಕೆ ವೈಜ್ಞಾನಿಕ ಮತ್ತು ವ್ಯವಸ್ಥಿತ ರೂಪವನ್ನು ನೀಡಿದ್ದು, ಇಂದಿಗೂ ಅದು ಮಾನವಕುಲಕ್ಕೆ ದಾರಿದೀಪವಾಗಿದೆ. ವಿಶ್ವದಾದ್ಯಂತ ಯೋಗದತ್ತ ಜನರ ಒಲವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಂತಸದ ಬೆಳವಣಿಗೆಯಾಗಿದೆ. ಯೋಗವನ್ನು ಕೇವಲ ಆಸನಗಳಿಗೆ ಸೀಮಿತಗೊಳಿಸದೆ ಜೀವನ ಮೌಲ್ಯಗಳಾಗಿ ಅಳವಡಿಸಿಕೊಳ್ಳ ಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಪದ್ಮಶ್ರೀ ಡಾ. ಶುಭ ವೆಂಕಟೇಶ ಅಯ್ಯಂಗಾರ್ ಮಾತನಾಡಿ, ನನ್ನ ಜೀವನದ ವಿವಿಧ ಹಂತಗಳಲ್ಲಿ ಮಾರ್ಗದರ್ಶನ ನೀಡಿದ ತೀರ್ಥಸ್ವರೂಪರಾದ ನಾಲ್ವರು ಹಿರಿಯರನ್ನು ಕೃತಜ್ಞತೆಯಿಂದ ನೆನಪಿಸಿ ಕೊಳ್ಳುತ್ತೇನೆ. ನನಗೆ ದೊರೆತ ಸಾಧನೆ ಮತ್ತು ಗೌರವಗಳ ಹಿಂದೆ ಗುರುಗಳು, ಪೋಷಕರು ಮತ್ತು ಮಾರ್ಗದರ್ಶಕರ ಆಶೀರ್ವಾದ ಹಾಗೂ ಪ್ರೇರಣೆ ಇದೆ ಎಂದು ಹೇಳಿದರು















