ಬೆಂಗಳೂರು: ಜಾಗತೀಕರಣ, ಉದಾರಿಕರಣದ ಕಾಲಘಟ್ಟದಲ್ಲಿ ದೇಶದ ಆರ್ಥಿಕ ಸುಧಾರಣೆಗೆ ಮಾಜಿ ಸಂಸದ ಪ್ರೊ. ವೆಂಕಟಗಿರಿಗೌಡ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅಮೇಟಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ ಟಿ. ಆರ್ ವೆಂಕಟೇಶ್ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಡಾ. ಕೆ ವಿ ವೆಂಕಟಗಿರಿಗೌಡ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕೃಷಿಯ ಆಧುನಿಕರಣಕ್ಕೆ ಸರ್ಕಾರದ ಪಾತ್ರ ಎನ್ನುವ ದತ್ತಿ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಪ್ರಧಾನಿ ಡಾಕ್ಟರ್ ಮನಮೋಹನ್ ಸಿಂಗ್ ಅವರು ಕೆಲ ಆರ್ಥಿಕ ಯೋಜನೆಗಳನ್ನು ಜಾರಿಗೆ ತರಬೇಕಾದರೆ ವೆಂಕಟಗಿರಿಗೌಡ ಅವರ ಸಲಹೆಗಳನ್ನು ಪಡೆಯುತ್ತಿದ್ದರು. ಅವರು ಭ್ರಷ್ಟಾಚಾರದ ವಿರೋಧಿಗಳಾಗಿದ್ದರು. ಸರ್ಕಾರದ ಎಲ್ಲಾ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು ಎನ್ನುವುದು ಅವರ ಆಶಯವಾಗಿತ್ತು ಎಂದು ತಿಳಿಸಿದರು.
ಅವರು ಎಷ್ಟೇ ಮೇಲಕ್ಕೆರಿದರೂ ತಾವು ಹುಟ್ಟಿದ ಮಣ್ಣನ್ನು ಮರೆಯಲಿಲ್ಲ. ಇನ್ನೂ ಭ್ರಷ್ಟಾಚಾರವನ್ನು ಅತಿಯಾಗಿ ವಿರೋಧಿಸುತ್ತಿದ್ದವರು ಕಿಂಗ್ ಆಫ್ ಕರಪ್ಶನ್ ಎನ್ನುವ ಪುಸ್ತಕವನ್ನು ಬರೆದಿದ್ದರು, ಅದು ಅಂದಿನ ಕಾಲದಲ್ಲಿ ಸಾಕಷ್ಟು ಸದ್ದನ್ನು ಸಹ ಮಾಡಿತ್ತು. ಭಾರತದ ಆರ್ಥಿಕ ಸುಧಾರಣೆಯ ಕುರಿತು ಅವರ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದು, ಅದರ ಕುರಿತು ಸಹ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಆಂಧ್ರಪ್ರದೇಶದ ವಿಶಾಖಪಟ್ಟಣಂ ವಿಶ್ವವಿದ್ಯಾಲಯದ ನಿವೃತ್ತ ಪ್ರೊ. ಡಾ ಕೆ ಪರಮೇಶ್ವರ್ ರಾವ್ ಮಾತನಾಡಿ, ಡಾ. ಕೆ ವಿ ವೆಂಕಟಗಿರಿಗೌಡ ಮೆಮೋರಿಯಲ್ ಟ್ರಸ್ಟ್ ನನ್ನನ್ನು ಈ ಪ್ರತಿಷ್ಠಿತ ದತ್ತಿ ಉಪನ್ಯಾಸಕ್ಕೆ ಆಹ್ವಾನಿಸಿರುವುದು ಸಂತಸ ತಂದಿದೆ. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಆಧುನಿಕರಣಗೊಳಿಸಲು ಆ ಕಾಲದಲ್ಲಿಯೇ ವೆಂಕಟಗಿರಿಗೌಡ ಸಾಕಷ್ಟು ಶ್ರಮ ವಹಿಸಿದ್ದರು ಎನ್ನುವುದು ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ನ್ಯಾಷನಲ್ ಪಾಲಿಸಿಗಳಲ್ಲಿ ಸಹ ಕೃಷಿಗೆ ಒತ್ತನ್ನು ನೀಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಉಲ್ಲೇಖಿಸಿದರು.
ರೈತರ ಜೀವನ ಮಟ್ಟ ಉತ್ತಮಗೊಳ್ಳಬೇಕು, ಅವರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಆಶಯ ಅವರದ್ದಾಗಿತ್ತು. ಸುಸ್ಥಿರ ಕೃಷಿಯ ಪ್ರಬಲ ಪ್ರತಿಪಾದಕರು ಅವರಾಗಿದ್ದರು. ಜಲ ಸಂರಕ್ಷಣೆಯ ಕುರಿತು ಕೂಡ ಕಾಳಜಿಯನ್ನು ಹೊಂದಿದ್ದರು. ಅವರ ಸುಧಾರಣಾ ನೀತಿಗಳನ್ನು ಇಂದಿನ ಸರ್ಕಾರ ಜಾರಿಗೆ ತಂದರೂ ಕರ್ನಾಟಕ ದೇಶದ ಕೃಷಿ ಕ್ಷೇತ್ರದ ನೇತೃತ್ವ ವಹಿಸುವ ಹಂತಕ್ಕೆ ಬೆಳೆಯಲಿದೆ ಎಂದು ಅಭಿಪ್ರಾಯಿಸಿದರು.
ಉಪನ್ಯಾಸದ ಅಧ್ಯಕ್ಷತೆಯನ್ನು ಕೆ.ಎಸ್.ಟಿ.ಎ ಹಿರಿಯ ವೈಜ್ಞಾನಿಕ ಅಧಿಕಾರಿ ಕೆ.ವಿ ಶ್ರೀನಿವಾಸು ವಹಿಸಿದ್ದರು. ಡಾ ಮಣಿ ಮೇಘಲಾಲ್, ಮೇರಿ ನಿರ್ಮಲಾ, ಕೆವಿಜಿ ಟ್ರಸ್ಟ್ ಅಧ್ಯಕ್ಷ ಡಾ ರಾಮು, ಕಾರ್ಯದರ್ಶಿ ಡಾ ರಾಮಲಿಂಗ ಗೌಡ ನಿಸರ್ಗ, ಟ್ರಸ್ಟಿ ಡಾ ರೇಖಾ ಜಗನ್ನಾಥ್ ಸೇರಿದಂತೆ ಟ್ರಸ್ಟ್ ನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.















