ಬೆಂಗಳೂರು: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಸ್ಥಾನ ಹೊಂದಬೇಕಾದರೆ ಶ್ರದ್ದೆ, ಏಕಾಗ್ರತೆ, ದೃಢತೆಯನ್ನು ಹೊಂದಬೇಕು ಅದರಿಂದಲೇ ಯಶಸ್ಸು ಸಾಧ್ಯ ಎಂದು ಜಿಬಿಎ ಕೇಂದ್ರ ಪಾಲಿಕೆ ಆಯುಕ್ತ ಜಿ.ಜಗದೀಶ್ ತಿಳಿಸಿದರು.
ಭಾನುವಾರ ಈಡಿಗರ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ, ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉನ್ನತ ಗುರಿಯನ್ನು ಇಟ್ಟುಕೊಂಡು ಅಧ್ಯಯನ ನಡೆಸಿದರೆ ಸಫಲರಾಗುತ್ತಿರಿ. ವಿಶೇಷವಾಗಿ ಈಡಿಗ ಸಮುದಾಯದಿಂದ ಐಎಎಸ್ ಅಧಿಕಾರಿಗಳ ಸಂಖ್ಯೆ ಕಡಿಮೆಯಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಉತ್ತಮ ಅಧ್ಯಯನ ನಡೆಸಿ ಅಧಿಕಾರಿಗಳಾಗಿ ಸಮಾಜದ ಉದ್ಧಾರಕ್ಕೆ ನೆರವಾಗಬೇಕು ಎಂದು ಕರೆ ನೀಡಿದರು.
ಇಂದು ವಿದ್ಯಾರ್ಥಿಗಳು ತಮ್ಮ ಪದವಿ ಜತೆಗೆ ವೃತ್ತಿ ಜೀವನಕ್ಕೆ ಪೂರಕವಾಗುವ ತಾಂತ್ರಿಕ ತರಬೇತಿ ಪಡೆದು ಉದ್ಯೋಗಾವಕಾಶಗಳನ್ನು ತೆರೆದುಕೊಳ್ಳುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಈಡಿಗರ ಹಳೆ ವಿದ್ಯಾರ್ಥಿಗಳ ಸಂಘ ಉತ್ತಮ ಕೆಲಸ ಮಾಡುತ್ತಿದೆ. ಸಂಘಕ್ಕೆ ಪ್ರೋತ್ಸಾಹಪೂರ್ವಕವಾಗಿ ಬರುವ ವರ್ಷದಿಂದ ಮೂವತ್ತು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರವನ್ನು ನನ್ನ ಕೈಯಿಂದ ಭರಿಸುತ್ತಿನೆ ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಈಡಿಗರ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ನಾಗರಾಜ್ ಮಾತನಾಡಿ, 2025-26ನೇ ಸಾಲಿಗೆ 141 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಇದಕ್ಕೆ ಒಟ್ಟು 343 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸುಮಾರು ಏಳು ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 141ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬೆಂಗಳೂರು ಈಡಿಗರ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನವನ್ನು ಕೂಡ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷೆ ಎಸ್. ಎಚ್.ಪದ್ಮ ರವೀಂದ್ರ, ಉಪಾಧ್ಯಕ್ಷ ನಾಗಪ್ಪ, ಕಾರ್ಯದರ್ಶಿ ಟಿ.ಎಲ್. ಹನುಮಂತರಾಯ, ಕೆ.ಎ.ರಾಮಕೃಷ್ಣ ಮೂರ್ತಿ, ಇ.ವಿ.ಸತ್ಯನಾರಾಯಣ, ಕೆ.ಎನ್ ಮುದ್ದುಕೃಷ್ಣಯ್ಯ, ರಾಜೇಶ್ ಮತ್ತಿತರರು ಭಾಗವಹಿಸಿದ್ದರು.














