ಬೆಂಗಳೂರು: ಶೋಷಿತ ಸಮಾಜದ ಹಕ್ಕುಗಳಿಗಾಗಿ ಹಾಗೂ ಅಧಿಕಾರಕ್ಕಾಗಿ ರಾಜಕೀಯದಲ್ಲಿದ್ದೇನೆ. ನಿಷಾದ್, ಕೋಲಿ, ಮಲ್ಲಾಹ್ ಸೇರಿದಂತೆ ದೇಶಾದ್ಯಂತ ನೂರಾರು ಹೆಸರುಗಳಿಂದ ಕರೆಯಲ್ಪಡುವ ಮೀನುಗಾರ ಹಾಗೂ ಹಿಂದುಳಿದ ಸಮುದಾಯಗಳಿಗೆ ಸೂಕ್ತ ಮೀಸಲಾತಿ ಮತ್ತು ಪ್ರಾತಿನಿಧ್ಯ ಸಿಗುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಬಿಹಾರದ ಮಾಜಿ ಸಚಿವ ಹಾಗೂ ವಿಕಾಸಶೀಲ ಇನ್ಸಾನ್ ಪಾರ್ಟಿಯ ಸಂಸ್ಥಾಪಕ ಮುಕೇಶ್ ಸಹಾನಿ ಸ್ಪಷ್ಟಪಡಿಸಿದರು.
ಭಾನುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ವಿಕಾಸಶೀಲ ಇನ್ಸಾನ್ ಪಾರ್ಟಿಯ ಕರ್ನಾಟಕ ರಾಜ್ಯ ಘಟಕಕ್ಕೆ ಅಧಿಕೃತ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶೋಷಿತರು, ಹಿಂದುಳಿದ ವರ್ಗಗಳು ಹಾಗೂ ಅಲೆಮಾರಿ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯದ ಗುರಿಯೊಂದಿಗೆ ವಿಕಾಸಶೀಲ ಇನ್ಸಾನ್ ಪಾರ್ಟಿ ಕರ್ನಾಟಕ ರಾಜಕಾರಣಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ. ಮುಂಬರುವ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಮೀನುಗಾರರ ಕುಟುಂಬದಲ್ಲಿ ಜನಿಸಿ, ದಿನಕ್ಕೆ ಕೇವಲ ಮೂವತ್ತು ರೂಪಾಯಿ ಕೂಲಿಗೆ ಮುಂಬೈನಲ್ಲಿ ದುಡಿದು ಬೆಳೆದೆ. ಶೋಷಿತ ಸಮಾಜದ ಹಕ್ಕುಗಳಿಗಾಗಿ ಹಾಗೂ ಅಧಿಕಾರಕ್ಕಾಗಿ ರಾಜಕೀಯ ಪ್ರವೇಶಿಸಿದೆ. ಅಧಿಕಾರಕ್ಕಾಗಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಸಚಿವ ಸ್ಥಾನ ಕಳೆದುಕೊಂಡರೂ ಬಿಜೆಪಿಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಗುಡಿಸಲಿನಲ್ಲಿದ್ದರೂ ಬಾದಷಹರಾಗಿರುತ್ತೇವೆಯೇ ಹೊರತು, ಅಧಿಕಾರಕ್ಕಾಗಿ ಯಾರದೋ ಅರಮನೆಯಲ್ಲಿ ಗುಲಾಮರಾಗಿರುವುದಿಲ್ಲ ಎಂದು ಮಾರ್ಮಿಕ ನುಡಿಗಳನ್ನು ಆಡಿದರು.
ರಾಷ್ಟ್ರಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದೇವೆ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಮತ್ತು ಅಧಿಕಾರ ಹಂಚಿಕೆಯಾಗಬೇಕು ಎನ್ನುವ ರಾಹುಲ್ ಗಾಂಧಿ ಅವರ ವಿಚಾರಧಾರೆಯನ್ನು ಬೆಂಬಲಿಸಿದ್ದೇವೆ. ಮುಂಬರುವ ಉತ್ತರ ಪ್ರದೇಶದ ಚುನಾವಣೆಯ ಬಳಿಕ ಕರ್ನಾಟಕದಾದ್ಯಂತ ಸಂಕಲ್ಪ ಯಾತ್ರೆ ಕೈಗೊಂಡು, ರಾಜ್ಯದ ಮೂಲೆ ಮೂಲೆಯಲ್ಲಿರುವ ಶೋಷಿತ ಸಮುದಾಯಗಳನ್ನು ಒಗ್ಗೂಡಿಸಲಿದ್ದೇವೆ. ರಾಜ್ಯದಲ್ಲಿ ಪಕ್ಷದ ಉಪಾಧ್ಯಕ್ಷ ಬಿ.ಕೆ. ಮೋಹನ್ ಕುಮಾರ್ ನಾಯಕತ್ವದಲ್ಲಿ ಎಲ್ಲ ಜಾತಿ, ಧರ್ಮದವರನ್ನು ಒಳಗೊಂಡ ಬಲಿಷ್ಠ ಸಂಘಟನೆ ಕಟ್ಟಿದ್ದೇವೆ ಎಂದು ಘೋಷಿಸಿದರು.
ಬಿ.ಕೆ. ಮೋಹನ್ ಕುಮಾರ್ ಮಾತನಾಡಿ, ಕೇವಲ ವೋಟ್ ಬ್ಯಾಂಕ್ ಆಗಿ ಬಳಕೆಯಾಗುತ್ತಿರುವ ಹಿಂದುಳಿದ ಸಮುದಾಯಗಳಿಗೆ ವಿಐಪಿ ಪಕ್ಷವು ಆಶಾಕಿರಣವಾಗಲಿದೆ. ಪಕ್ಷ ಪ್ರಮುಖ ಐದು ಭರವಸೆಗಳನ್ನು ನೀಡಲಿದೆ. ಅತಿ ಹಿಂದುಳಿದ ಹಾಗೂ ಅಲೆಮಾರಿ ಜಾತಿಗಳ ಬಡತನ ನಿರ್ಮೂಲನೆಗಾಗಿ ವಸತಿ ಮತ್ತು ಉದ್ಯೋಗ ಯೋಜನೆ ರೂಪಿಸುವುದು, ಕಡ್ಡಾಯ ಶಿಕ್ಷಣ ಮತ್ತು ಆರೋಗ್ಯ ಖಾತ್ರಿ ಯೋಜನೆ ನೀಡುವುದು, ಅವಕಾಶ ವಂಚಿತ ಸಮುದಾಯಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಸಂಸತ್ತಿನವರೆಗೆ ಕಡ್ಡಾಯ ರಾಜಕೀಯ ಪ್ರಾತಿನಿಧ್ಯ ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.
ಶೋಷಿತರ ವಾಸ್ತವ್ಯದ ಪ್ರದೇಶಗಳ ಅಭಿವೃದ್ಧಿಯ ಮೂಲಕ ಅವರ ಜೀವನಮಟ್ಟ ಸುಧಾರಣೆ ಮಾಡುವುದು ಹಾಗೂ ಸಮುದಾಯಗಳ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮಠ-ಪೀಠಗಳ ಸ್ಥಾಪನೆ ಮತ್ತು ಅಭಿವೃದ್ಧಿಗೊಳಿಸುವುದು ಪಕ್ಷದ ಸಂಕಲ್ಪವಾಗಿದೆ ಎಂದರು.
ಉದ್ಘಾಟನಾ ಸಮಾವೇಶದಲ್ಲಿ ರಾಜ್ಯದ ವಿವಿಧ ಮಠಾಧೀಶರು, ಸಾಧು-ಸಂತರು, ದೆಹಲಿಯ ನಿವೃತ್ತ ಕಮಿಷನರ್ ಬಿ.ಕೆ. ಸಿಂಗ್, ಬಿಹಾರದಿಂದ ಆಗಮಿಸಿದ್ದ ರಾಷ್ಟ್ರೀಯ ನಾಯಕರು ಉಪಸ್ಥಿತರಿದ್ದರು.














