ಅಪ್ರತಿಮ ಸಾಧಕರಿಗೆ ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯಿಂದ ಸನ್ಮಾನ

WhatsApp
Telegram
Facebook
Twitter
LinkedIn

ಬೆಂಗಳೂರು: ಪ್ಯಾರಾಲಿಂಪಿಕ್ಸ್‌ ಸೇರಿ ಪ್ಯಾರಾ ಕ್ರೀಡೆಗಳಲ್ಲಿ ಅಪ್ರತಿಮ ಸಾಧನೆ ತೋರಿದ, ಪ್ಯಾರಾ ಕ್ರೀಡೆಗೆ ಬೆನ್ನೆಲುಬಾಗಿ ನಿಂತ ಸಾಧಕರಿಗೆ ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ) ಲಿಮಿಟ್‌ಲೆಸ್‌ ಇಂಪ್ಯಾಕ್ಟ್‌ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ಯಾರಾಲಿಂಪಿಕ್ ಸಂಸ್ಥೆ ಅದ್ಯಕ್ಷ ಡಾ.‌ಸಿ.ಎನ್ ಅಶ್ವಥ್ ನಾರಾಯಣ, ಭಾರತೀಯ ಪ್ಯಾರಾ ಅಥ್ಲೆಟಿಕ್‌ ಫೆಡರೇಶನ್‌ ಅಧ್ಯಕ್ಷ ಡಾ.ನರೇಂದ್ರ ಸಿಂಗ್‌, ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿ ಕಾರ್ಯದರ್ಶಿ ಜಯವಂತ್‌ ಜಿ.ಎಚ್‌ 7 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯ ಮುಖ್ಯಸ್ಥ ಡಾ.ಸತ್ಯನಾರಾಯಣ್‌ ಸೇರಿ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ವಿಜೇತರ ಪಟ್ಟಿ:

ಪ್ರಮೋದ್‌ ಭಗತ್‌: 2026ರ ವರ್ಷದ ಪ್ಯಾರಾ ಅಥ್ಲೀಟ್‌ ಪ್ರಶಸ್ತಿ ವಿಜೇತ ಮತ್ತು ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಅತಿ ಜನಪ್ರಿಯ ಹೆಸರು ಪ್ರಮೋದ್‌ ಭಗತ್‌. ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಸಾಧಕ ಇವರು. 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ ಎಸ್‌ಎಲ್‌ 3 ವಿಭಾಗದಲ್ಲಿ ಪ್ರಮೋದ್‌ ಚಿನ್ನ ಜಯಿಸಿದರು. ಹಲವು ಬಾರಿ ವಿಶ್ವ ಚಾಂಪಿಯನ್‌ ಆಗಿರುವ ಪ್ರಮೋದ್‌, ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಹಲವು ದಿನಗಳ ಕಾಲ ನಂ.1 ಸ್ಥಾನದಲ್ಲೂ ಇದ್ದರು. ಪ್ರತಿಷ್ಠಿತ ಪದ್ಮಶ್ರೀ, ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ವಿಜೇತರು ಇವರಾಗಿದ್ದಾರೆ.

ದೀಪ್ತಿ ಜೀವನ್‌ಜಿ: 2026ರ ವರ್ಷದ ಪ್ಯಾರಾ ಅಥ್ಲೀಟ್‌ ಪ್ರಶಸ್ತಿ ವಿಜೇತೆ ಮತ್ತು ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಸಾಧಕಿ ಇವರಾಗಿದ್ದಾರೆ. ಟಿ20 ವಿಭಾಗದಲ್ಲಿ ಮಹಿಳೆಯರ 400 ಮೀ. ಸ್ಪರ್ಧೆಯಲ್ಲಿ ಏಷ್ಯನ್‌ ದಾಖಲೆ ಸಹ ಬರೆದಿದ್ದರು. 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ 400 ಮೀ. ಓಟದಲ್ಲಿ ಕಂಚು ಜಯಿಸಿದ್ದ ದೀಪ್ತಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸಹ ದೊರೆತಿದೆ.

ಅಭಿಲಾಶಾ ಚೌಧರಿ: 2026ರ ವರ್ಷದ ಪ್ಯಾರಾ ಕ್ರೀಡಾ ಕೋಚ್‌ ಮತ್ತು ಭಾರತೀಯ ಪ್ಯಾರಾ ಆರ್ಚರಿಯಲ್ಲಿ ಖ್ಯಾತ ಹೆಸರು ಅಭಿಲಾಶಾ ಚೌಧರಿ ಅವರದ್ದಾಗಿದೆ. ಪ್ಯಾರಾಲಿಂಪಿಕ್‌ ಹಾಗೂ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಪದಕ ಗೆದ್ದ ಹಲವು ಆರ್ಚರಿ ಪಟುಗಳಿಗೆ ಅಭಿಲಾಶಾ ಮಾರ್ಗದರ್ಶನ ನೀಡಿದ್ದಾರೆ. ಮಾತಾ ವೈಷ್ಣೋದೇವಿ ಅಕಾಡೆಮಿಯಲ್ಲಿ ಹಾಗೂ ಭಾರತ ಪ್ಯಾರಾ ಆರ್ಚರಿ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿರುವ ಅಭಿಲಾಶಾ, ಶೀತಲ್‌ ದೇವಿ, ರಾಕೇಶ್‌ ಕುಮಾರ್‌ ರಂತಹ ವಿಶ್ವ ವಿಖ್ಯಾತ ಸಾಧಕರಿಗೆ ಕೋಚ್‌ ಆಗಿ ಕೆಲಸ ಮಾಡಿದ್ದಾರೆ.

ಇಂಡಿಯನ್‌ ಆಯಿಲ್: 2026ರ ವರ್ಷದ ಸಂಸ್ಥೆ ಪ್ರಶಸ್ತಿ ಪಡೆದಿದೆ. ಪ್ಯಾರಾ ಕ್ರೀಡೆಗೆ ನಿರಂತರ ಬೆಂಬಲ ನೀಡುತ್ತಿರುವ, ಹಲವು ಕೂಟ ಹಾಗೂ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವ ನೀಡುತ್ತಿರುವ ಇಂಡಿಯನ್‌ ಆಯಿಲ್‌ ಸಂಸ್ಥೆ, ದೇಶದಲ್ಲಿ ಪ್ಯಾರಾ ಕ್ರೀಡೆ ವೇಗವಾಗಿ ಬೆಳೆಯಲು ಅಸಾಧಾರಣ ಕೊಡುಗೆ ನೀಡುತ್ತಿದೆ.

ದೀಪ್ತಿ ಬೋಪಯ್ಯ: ಪ್ಯಾರಾ ಕ್ರೀಡೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ ವ್ಯಕ್ತಿ ಮತ್ತು ಗೋಸ್ಪೋರ್ಟ್ಸ್‌ ಫೌಂಡೇಶನ್‌ನ ಸಿಇಒ ದೀಪ್ತಿ ಬೋಪಯ್ಯ ದೇಶದ ಹೆಸರಾಂತ ಕ್ರೀಡಾ ಆಡಳಿತಾಧಿಕಾರಿಯಾಗಿದ್ದಾರೆ. ಗೋಸ್ಪೋರ್ಟ್ಸ್‌ ದೇಶದಲ್ಲಿ ಹಲವು ಪ್ಯಾರಾಲಿಂಪಿಕ್‌ ಹಾಗೂ ಒಲಿಂಪಿಕ್‌ ಅಥ್ಲೀಟ್‌ಗಳನ್ನು ಬೆಂಬಲಿಸುತ್ತಿರುವ ಸಂಸ್ಥೆಯಾಗಿದೆ. ತಮ್ಮ ಪ್ಯಾರಾ ಚಾಂಪಿಯನ್ಸ್‌ ಯೋಜನೆ ಮೂಲಕ ಹಲವು ಭಾರತೀಯ ಪ್ಯಾರಾ ಅಥ್ಲೀಟ್‌ಗಳು, ಪ್ಯಾರಾಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ ಮಾಡಲು ನೆರವಾಗಿದ್ದಾರೆ.

ಪಾಯಲ್‌ ನಾಗ್‌: 2026ರ ವರ್ಷದ ಉದಯೋನ್ಮುಖ ಪ್ಯಾರಾ ಕ್ರೀಡಾಪಟು ಪಾಯಲ್‌ ನಾಗ್‌, ದೇಶದ ಹೆಮ್ಮೆಯ ಪ್ಯಾರಾ ಆರ್ಚರ್‌ ಆಗಿದ್ದಾರೆ. ಎರಡು ಕೈ, ಎರಡು ಕಾಲುಗಳಿಲ್ಲದಿದ್ದರೂ ಆರ್ಚರಿಯಲ್ಲಿ ಪಾಲ್ಗೊಳ್ಳುವ ವಿಶ್ವದ ಮೊದಲ ಕ್ರೀಡಾಪಟು ಆಗಿದ್ದಾರೆ. ಇತ್ತೀಚೆಗಷ್ಟೇ ಅವರು ವಿಶ್ವ ಪ್ಯಾರಾ ಆರ್ಚರಿ ಸೀರೀಸ್‌ನಲ್ಲಿ, ವಿಶ್ವ ಚಾಂಪಿಯನ್‌ ಶೀಥಲ್‌ ದೇವಿಯನ್ನು ಸೋಲಿಸಿ ಚಿನ್ನದ ಪದಕ ಗೆದಿದ್ದಾರೆ.

ಸತ್ಯಪ್ರಕಾಶ್‌ ಸಾಂಗ್ವಾನ್‌: ಪ್ಯಾರಾ ಕ್ರೀಡೆಗೆ ಬೆಂಬಲ ನೀಡಿದ ಚಾಂಪಿಯನ್‌ ಪ್ರಶಸ್ತಿ ಪಡೆದಿದ್ದಾರೆ. ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯ ಉಪಾಧ್ಯಕ್ಷ ಆಗಿರುವ ಇವರು ದೇಶದಲ್ಲಿ ಪ್ಯಾರಾ ಕ್ರೀಡೆ ಉತ್ತುಂಗಕ್ಕೇರಲು ಹಗಲಿರುಳು ಶ್ರಮಿಸಿದ್ದಾರೆ. 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತಂಡದ ಮುಖ್ಯಸ್ಥರಾಗಿದ್ದರು. ಅವರ ಮುಂದಾಳತ್ವದಲ್ಲಿ ಭಾರತ 7 ಚಿನ್ನ ಸೇರಿ 29 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.

ಮಹಾವೀರ್‌ ಸಿಂಗ್‌ ರಾವತ್‌: ವರ್ಷದ ಮಾಧ್ಯಮ ವ್ಯಕ್ತಿ ಪ್ರಶಸ್ತಿ ಪಡೆದಿದ್ದಾರೆ. ಇವರು ಪ್ರತಿಷ್ಠಿತ ಕ್ರೀಡಾ ನಿರೂಪಕರಗಿದ್ದಾರೆ. ಹತ್ತು ಹಲವು ಪ್ಯಾರಾ ಕ್ರೀಡಾಕೂಟಗಳಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವು ಪ್ಯಾರಾ ಅಥ್ಲೀಟ್‌ಗಳ ವಿಶೇಷ ಸಂದರ್ಶನ ನಡೆಸಿ, ಜಗತ್ತಿಗೆ ಅವರ ಪರಿಚಯ ಮಾಡಿಕೊಟ್ಟಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon