ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಸರ್ಕಾರ ದೊಡ್ಡ ಕೊಡುಗೆ: ಡಿ.ಕೆ. ಶಿವಕುಮಾರ್

WhatsApp
Telegram
Facebook
Twitter
LinkedIn

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಮೂಲಕ ಕಾಂಗ್ರೆಸ್ ಸರ್ಕಾರ  ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಶನಿವಾರ ಬೆಂಗಳೂರಿನ ಸೂರ್ಯನಗರದ ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಹಳ್ಳಿಯಲ್ಲಿ ಒಂದು ಮಾತಿದೆ. ನೇಗಿಲಿನಲ್ಲಿ ಉಳುಮೆ ಮಾಡದೇ ಯಾವ ಭೂಮಿಯು ಫಲ ನೀಡುವುದಿಲ್ಲ, ಅದೇ ರೀತಿ ಡಿ.ಕೆ. ಸುರೇಶ್ ಹಾಗೂ ಶಾಸಕರಾದ ಶಿವಣ್ಣ ಈ ಭಾಗದ ಜನರ ಋಣ ತೀರಿಸಲು ಈ ಐತಿಹಾಸಿಕ ಕಾರ್ಯಕ್ರಮದ ಕನಸು ಕಂಡು, ಸಂಕಲ್ಪ ಮಾಡಿದ್ದರು. ಅದಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶಿಲಾನ್ಯಾಸ ಮಾಡಿದೆ ಎಂದು ತಿಳಿಸಿದರು.

ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಯಾರು ಜಮೀನು ಕಳೆದುಕೊಂಡಿದ್ದಾರೆ, ಅವರಿಗೂ ಒಳ್ಳೆಯದಾಗಬೇಕು, ಕ್ರೀಡಾಪಟುಗಳಿಗೂ ಉತ್ತಮ ಅನುಕೂಲ ಮಾಡಿಕೊಡಬೇಕು, ಈ ಭಾಗದ ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ತೀರ್ಮಾನ ಮಾಡಿದೆ. ನಾಳೆಯ ಬಗ್ಗೆ ನಮಗೆ ಗೊತ್ತಿಲ್ಲ, ನಿನ್ನೆ ಬಗ್ಗೆ ಚರ್ಚೆ ಮಾಡಿ ಪ್ರಯೋಜನವಿಲ್ಲ. ನಮ್ಮ ಕೈಯಲ್ಲಿರುವ ಇಂದಿನ ದಿನವನ್ನು ನಾವು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ನಿಮ್ಮ ಸ್ಥಳೀಯ ನಾಯಕ ಶಿವಣ್ಣ ಹಾಗೂ ಸುರೇಶ್ ಅವರುಗಳ ಕನಸಿನಂತೆ 2 ಸಾವಿರ ಕೋಟಿ ರೂ. ಮೊತ್ತದ ಅಂತರರಾಷ್ಟ್ರೀಯ ಕ್ರೀಡಾ ಸಂಕೀರ್ಣ ಕಟ್ಟಲಾಗುತ್ತಿದೆ ಎಂದರು.

ಈ ಭಾಗದ ಜನರಿಗೆ ಕಾವೇರಿ ನೀರು ಒದಗಿಸಲಾಗುತ್ತಿದೆ. ದಾರಿ ಇದ್ದ ಕಡೆ ನಡೆಯಬೇಕು, ದಾರಿ ಇಲ್ಲವಾದರೆ ದಾರಿ ಮಾಡಿಕೊಂಡು ನಡೆಯಬೇಕು. ಬೆಳಕು ಇಲ್ಲದಿದ್ದಾಗಲೂ ನಡೆಯಬಹುದು, ಆದರೆ ಕನಸೇ ಇಲ್ಲವಾದರೆ ನಡೆಯಲು ಸಾಧ್ಯವಿಲ್ಲ. ಶಾಸಕರಾದ ಶಿವಣ್ಣ ನನ್ನನ್ನು, ಮುಖ್ಯಮಂತ್ರಿಗಳನ್ನು ಹಾಗೂ ಸಚಿವರನ್ನು ಭೇಟಿ ಮಾಡಿದಾಗೆಲ್ಲಾ ಆನೇಕಲ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ. ಕ್ಷೇತ್ರದ ಎಲ್ಲಾ ಜಾತಿ, ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಅವರು ಸತತವಾಗಿ 5 ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾನು ಬಂಗಾರಪ್ಪ ಅವರ ಸರ್ಕಾರದಲ್ಲಿ ಸಚಿವನಾಗಿದ್ದಾಗ ಶಿವಣ್ಣ ಎನ್ಎಸ್ಯುಐ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿ ನಾಯಕರಾಗಿದ್ದುಕೊಂಡು ಜನಸೇವೆ ಮಾಡುತ್ತಿದ್ದರು. ಅಂದು ಅವರು ಮಹದೇವಪುರದಲ್ಲಿ ಸ್ಪರ್ಧಿಸದೇ ಆನೇಕಲ್ ನಲ್ಲಿ ಸ್ಪರ್ಧೆ ಮಾಡಿದ್ದರೆ, ಅಂದೇ ಅವರು ಶಾಸಕರಾಗುತ್ತಿದ್ದರು. ಇಂತಹ ಶಾಸಕರನ್ನು ಆಯ್ಕೆ ಮಾಡಿರುವುದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಚಿವ ಜಮೀರ್ ಅಹ್ಮದ್ ಖಾನ್, ಶಿವಲಿಂಗೇಗೌಡರು ಸೇರಿ ಗೃಹ ಮಂಡಳಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಐತಿಹಾಸಿಕ ಯೋಜನೆ ರೂಪಿಸಿದ್ದಾರೆ. ನಮ್ಮ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡಿದೆ. ನಮ್ಮ ವಸತಿ ಸಚಿವಾಲಯ ಹಾಗೂ ಗೃಹ ಮಂಡಳಿ ಕ್ರಾಂತಿಕಾರಿ ಬದಲಾವಣೆ ಮಾಡಿಕೊಂಡು ಬರುತ್ತಿದ್ದು, ಸೂರಿಲ್ಲದವರಿಗೆ ಸೂರು ಕಲ್ಪಿಸಿ, ಆಸ್ತಿ ದಾಖಲೆ ಇಲ್ಲದವರಿಗೆ ದಾಖಲೆ ನೀಡುತ್ತಿದ್ದೇವೆ. ದೇವರು ನಮಗೆ ಕೊಟ್ಟಿರುವುದು ಎರಡು ಆಯ್ಕೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ನಾವು ಅದೇ ರೀತಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದರು.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ನಾವು ಇಲ್ಲಿ ಕಟ್ಟಲು ಮುಂದಾಗಿರುವ ಕ್ರೀಡಾಂಗಣ ಶಾಶ್ವತವಾಗಿ ಉಳಿಯಲಿದೆ. ಬುದ್ಧ, ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸುಕ್ರಿಸ್ತನು ಶಿಲುಬೆಗೆ ಏರಿದ ಗಳಿಗೆಯಲ್ಲಿ, ಪೈಗಂಬರ್ ಅವರು ದಿವ್ಯವಾಣಿ ಕೇಳಿದ ಗಳಿಗೆಯಲ್ಲಿ, ಭೀಮಾಬಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ಗಳಿಗೆಯಲ್ಲಿ, ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದ ಗಳಿಗೆಯಲ್ಲಿ ನಾವು ಈ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ್ದೇವೆ. ಆ ಮೂಲಕ ಬೆಂಗಳೂರಿಗೆ ದೊಡ್ಡ ಸಾಕ್ಷಿಗುಡ್ಡೆ ಬಿಟ್ಟುಹೋಗುತ್ತಿದ್ದೇವೆ ಎಂದು ಹೇಳಿದರು.

ನಮ್ಮ ನಿಮ್ಮ ನಡುವಣ ಸಂಬಂಧ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ. ನೀವು ನಮ್ಮ ಕಷ್ಟ ಕಾಲದಲ್ಲಿ ನಮ್ಮ ಜತೆಯಲ್ಲಿದ್ದು, ಆಶೀರ್ವಾದ ಮಾಡಿಕೊಂಡು ಬಂದಿದ್ದೀರಿ. ಈ ಯೋಜನೆಗೆ ಭೂಮಿ ಕೊಟ್ಟ ರೈತರು, ಹಗಲು ರಾತ್ರಿ ಶ್ರಮಿಸಿದ ಅಧಿಕಾರಿಗಳಿಗೆ, ಶಾಸಕರಿಗೆ, ಮಾಜಿ ಸಂಸದರಿಗೆ ವಂದಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon