ಬೆಂಗಳೂರು: ತುಡುವೆ ಜೇನು ಮತ್ತು ಮಲೆನಾಡಿನ ಮರಗಂತಿ ಕಪ್ಪೆ ಅನ್ನು ಅನುಕ್ರಮವಾಗಿ ರಾಜ್ಯ ಕೀಟ ಮತ್ತು ರಾಜ್ಯ ಉಭಯಜೀವಿ ಎಂದು ಅಧಿಕೃತವಾಗಿ ಘೋಷಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ಶುಕ್ರವಾರ ಸಂಜೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ವಿಶ್ವ ಜೀವವೈವಿಧ್ಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವವೈವಿಧ್ಯತೆಯ ರಕ್ಷಣೆಯ ಮಹತ್ವವನ್ನು ಸಾರಲು ಹಲವು ದೇಶಗಳು ತನ್ನದೇ ಆದ ರಾಷ್ಟ್ರೀಯ ಪಕ್ಷಿ, ರಾಷ್ಟ್ರೀಯ ಪ್ರಾಣಿ ಮತ್ತು ರಾಷ್ಟ್ರೀಯ ವೃಕ್ಷವನ್ನು ಘೋಷಿಸುತ್ತವೆ. ರಾಜ್ಯ ಸರ್ಕಾರ ಕೂಡ ಶ್ರೀಗಂಧವನ್ನು ತನ್ನ ರಾಜ್ಯ ವೃಕ್ಷವೆಂದು, ಆನೆಯನ್ನು ರಾಜ್ಯ ಪ್ರಾಣಿ ಎಂದು ಹಾಗೂ ನಿಲಕಂಠ ಪಕ್ಷಿಯನ್ನು ರಾಜ್ಯ ಪಕ್ಷಿ ಎಂದು ಘೋಷಿಸಿದೆ, ಇದರ ಜೊತೆಗೆ ಹಳದಿ ಕೆಂಪು ಬಣ್ಣದ ರೆಕ್ಕೆಯ ದೊಡ್ಡ ಚಿಟ್ಟೆಯನ್ನು ರಾಜ್ಯ ಚಿಟ್ಟೆ ಎಂದು ಘೋಷಣೆ ಮಾಡಿದೆ ಎಂದು ತಿಳಿಸಿದರು.
ಎಚ್.ಎಂ.ಟಿ., ಭಾರತೀಯ ವಾಯುಪಡೆ, ಖಾಸಗಿ ರಬ್ಬರ್ ತೋಟ ಕಂಪನಿಗಳ ವಶದಲ್ಲಿರುವ ಸುಮಾರು 50 ಸಾವಿರ ಕೋಟಿ ರೂ.ಗೆ ಹೆಚ್ಚು ಬೆಲೆಬಾಳುವ ಅರಣ್ಯಭೂಮಿಯನ್ನು ಮರಳಿ ಪಡೆದು, ಹಸಿರು ಹೊದಿಕೆ ರಕ್ಷಿಸಲು, ಅರಣ್ಯ ಸಂವರ್ಧನೆ ಮಾಡಲು ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಪರಿಸರ ಸಮತೋಲನ ಕಾಪಾಡಲು ಜೀವವೈವಿಧ್ಯತೆಯ ರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಇದನ್ನು ಮನಗಂಡು ರಾಜ್ಯ ಸರ್ಕಾರ ಬೆಂಗಳೂರು ಹೆಸರುಘಟ್ಟ ಕೆರೆಯ ಸುತ್ತಮುತ್ತಲಿನ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದೆ. ಇದರ ಜೊತೆಗೆ ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ, 250 ಕೋಟಿ ರೂ. ವೆಚ್ಚದ ಈ ಉದ್ಯಾನಕ್ಕೆ ಮುಖ್ಯಮಂತ್ರಿಗಳು ಮೊದಲ ಹಂತದ ಕಾಮಗಾರಿಗೆ 50 ಕೋಟಿ ರೂ. ಹಂಚಿಕೆ ಮಾಡಿದ್ದಾರೆ ಎಂದರು.
ಮುಂದಿನ ಪೀಳಿಗೆ ನಮ್ಮನ್ನು ಶಪಿಸಬಾರದು ಎಂದರೆ, ನಾವು ಆರೋಗ್ಯಪೂರ್ಣ ಪ್ರಕೃತಿ ಪರಿಸರವನ್ನು ಬಿಟ್ಟು ಹೋಗಬೇಕು, ಇದಕ್ಕಾಗಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಮಾಡಬೇಕು. ಇನ್ನು ವನ್ಯಜೀವಿ- ಮಾನವ ಸಂಘರ್ಷವನ್ನು ತಡೆಗಟ್ಟುವುದು ಸರ್ಕಾರದ ಆದ್ಯತೆಯಾಗಿದೆ. ದುಬಾರೆಯಲ್ಲಿ ಇತ್ತೀಚೆಗೆ ನಡೆದ ದುರ್ಘಟನೆ ಅತ್ಯಂತ ಆಘಾತಕಾರಿತಾಗಿದೆ. ರಾಜ್ಯ ಕಂಡು ಕೇಳರಿಯದಂತಹ ಘಟನೆಗಳು ನಡೆಯುತ್ತಿದ್ದು, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳಕ್ಕೆ ಆನೆಗಳ ಕಾರಿಡಾರ್ ವಿಭಜನೆ, ಹುಲಿಗಳ ಪಥದಲ್ಲಿನ ಬದಲಾವಣೆ, ಹೆಚ್ಚುತ್ತಿರುವ ವನ್ಯಮೃಗಗಳ ಸಂಖ್ಯೆ ಹಾಗೂ ಕ್ಷೀಣಿಸುತ್ತಿರುವ ಅರಣ್ಯ ಕಾರಣವಾಗಿದೆ ಎಂದರು.
ಸರ್ಕಾರ ಅರಣ್ಯ ಒತ್ತುವರಿ ತೆರವಿಗೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಕಳೆದ 3 ವರ್ಷಗಳಲ್ಲಿ ಸುಮಾರು 12,204 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ. ಯಾವುದೇ ಹೊಸ ಒತ್ತುವರಿಗೆ ಅವಕಾಶ ನೀಡದಂತೆ ಸೂಚಿಸಲಾಗಿದೆ. ಆನೆ, ಹುಲಿ ಕಾರಿಡಾರ್ ವಿಭಜನೆ ಆಗಿರುವ ಕಡೆಯಲ್ಲಿ ಕಾರಿಡಾರ್ ಮರು ಸ್ಥಾಪನೆ ಕುರಿತಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ, 3 ವರ್ಷದಲ್ಲಿ ರಾಜ್ಯದಾದ್ಯಂತ 11 ಕೋಟಿ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಜೀವವೈವಿಧ್ಯ ಮಂಡಳಿ ವತಿಯಿಂದ ಬೀದರ್ ನಲ್ಲಿ ಪಾಪಂಪರಿಕ ವೈದ್ಯರ ಸಮ್ಮೇಳನವನ್ನೂ ಆಯೋಜಿಸಲಾಗಿತ್ತು. ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಈ ಪಾರಂಪರಿಕ ವೈದ್ಯಪದ್ಧತಿ ಇನ್ನೂ ಪರಿಣಾಮಕಾರಿಯಾಗಿದ್ದು, ಇವರ ಚಿಕಿತ್ಸೆಗೆ ಅನುಕೂಲ ಕಲ್ಪಿಸಲು ಗಿಡಮೂಲಿಕೆಗಳ ರಕ್ಷಣೆಗೆ ಸರ್ಕಾರ ಕ್ರಮವಹಿಸಿದೆ. ಗಿಡಮೂಲಿಕೆ ವನ ನಿರ್ವಹಣಾ ಸಮಿತಿಗಳನ್ನು ರಚಿಸಿದೆ ಎಂದರು.
ಐದು ಪಾಪಂಪರಿಕ ಜೀವವೈವಿಧ್ಯತೆಯ ತಾಣ ಘೋಷಣೆ :
ದೇವನಹಳ್ಳಿ ಬಳಿಯ ನಲ್ಲೂರು ಹುಣಸೆತೋಪು, ಬೆಂಗಳೂರಿನ ಗಾಂಧಿಕೃಷಿ ವಿಜ್ಞಾನ ಕೇಂದ್ರ ಪರಿಸರ, ಚಿಕ್ಕಮಗಳೂರು ಹೊಗರೆಖಾನ್, ಸಾಗರ ತಾಲೂಕಿನ ಅಂಬರಗುಡ್ಡ ಮತ್ತು ವಿಜಯಪುರ ಜಿಲ್ಲೆಯ ಮಮದಾಪುರದ ಸಸ್ಯಕಾಶಿಯನ್ನು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಣೆ ಮಾಡಲಾಗಿದೆ, ಇದರ ಜೊತೆಗೆ ದೇಶದ ಪ್ರಥಮ ವನ್ಯಜೀವಿ ಧಾಮ ಅಪ್ಸರಕೊಂಡ ಮುಗಳಿ ಎಂದು ಘೋಷಣೆ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜೀವವೈವಿಧ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ವಾರ್ಷಿಕ ಪ್ರಶಸ್ತಿ ಮತ್ತು ಪ್ರಬಂಧ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ರಾಜೇಗೌಡ, ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ವಡ್ನಾಳ್ ಜಗದೀಶ್, ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಮೊಹಮದ್ ತಬ್ರೇಜ್ ಷರೀಫ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.














