ಬೆಂಗಳೂರು: ರಂಗಭೂಮಿಯಲ್ಲಿ ಸಾಂಸ್ಕೃತಿಕ ನೃತ್ಯಗಳ ಬಹಳ ಮೊದಲು ಇರಲಿಲ್ಲ ಆದರೆ ಇದೀಗ ಅದರ ಹಲವು ಆಯಾಮಗಳಲ್ಲಿ ಬಳಕೆಯಲ್ಲಿ ತರಲಾಗುತ್ತಿದೆ. ಈ ಪ್ರಕಾರದ ನೃತ್ಯಗಳಲ್ಲಿನ ಮುಖ ಭಾವಗಳು ಪ್ರೇಕ್ಷಕರನ್ನು ಅತಿ ಹೆಚ್ಚು ಸೆಳೆಯುತ್ತಿವೆ ಎಂದು ಹಿರಿಯ ಚಲನಚಿತ್ರ ನಟ ಸುಂದರಾಜ್ ಅಭಿಪ್ರಾಯಪಟ್ಟರು.
ನಗರದ ಗಾಯನಸಮಾಜದಲ್ಲಿ ಮನ್ವಿತಾ ಎಸ್.ಎಂ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಿನ ಡಿಜಿಟಲ್ ಅದರಲ್ಲೂ ಕೃತಕ ಬುದ್ಧಿಮತ್ತೆಯ ಕಾಲಮಾನದಲ್ಲಿ ಈ ರೀತಿಯ ಭಾರತೀಯ ನೃತ್ಯ ಗಳನ್ನು ಅಭ್ಯಸಿಸಿ ಪ್ರದರ್ಶನಗಳನ್ನು ನೀಡುತ್ತಿರುವ ಎಲ್ಲಾ ಗುರುಗಳು, ನೃತ್ಯ ಕಲಾವಿದರು, ಕಲಾ ವಿದ್ಯಾರ್ಥಿಗಳ ಶ್ರಮ ಅತ್ಯಂತ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಕಲಾವಿದರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಎಲ್ಲಾ ಸಹಕಾರಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಹಿರಿಯ ಪತ್ರಕರ್ತ, ವಿದ್ವಾಂಸ ನಂಜುಂಡ ರಾವ್ ಮಾತನಾಡಿ ನರ್ಸರಿ ಯಿಂದ ಪಿ.ಹೆಚ್.ಡಿ ಓದಿನ ಪ್ರಯಾಣವಾಗಿದೆ ಆದರೆ ನೃತ್ಯ, ಸಂಗೀತದ ಕಲಿಕೆಗೆ ಅಂತ್ಯವೆನ್ನುವುದೇ ಇಲ್ಲ. ಇದು ರಿಲೇ ಓಟದ ರೀತಿಯಲ್ಲಿ ಗುರುಗಳಿಂದ ಶಿಷ್ಯೆಗೆ ಹೀಗೆ ಮುಂದುವರೆಯುತ್ತಾ ಹೋಗುತ್ತದೆ. ಆದ್ದರಿಂದ ಓದಿಗಿಂತ ಭಾರತೀಯ ಪ್ರದರ್ಶನ ಕಲೆಗಳ ಕಲಿಕೆ ನಿತ್ಯ ನೂತನ ಮತ್ತು ನಿರಂತರವಾಗಿದೆ ಎಂದು ಅಭಿಪ್ರಾಯಿಸಿದರು.
ಭ್ರಮರಿ ಡ್ಯಾನ್ಸ್ ರೆಪಟರಿ ನಿರ್ದೇಶಕಿ ವಿದುಷಿ ಸ್ನೇಹಾ ಕಪ್ಪಣ್ಣ ಮಾತನಾಡಿ, ನೃತ್ಯ ಕಲೆಗಳು ಪರಾಭವಾಗಿದ್ದು ದೇವಾಲಯಗಳಲ್ಲಿ ಅದೇ ಮಾದರಿಯ ವೇದಿಕೆಯಲ್ಲಿ ಮನ್ವಿತಾ ಎಸ್.ಎಂ ದೇವಲೋಕವನ್ನು ಧರೆಗೆ ತಂದಿದ್ದಾರೆ. ದೇವರ ಆರಾಧನೆಯನ್ನು ಕೂತಲ್ಲಿಯೇ ಸವಿಯುವ ಅವಕಾಶ ಸೃಷ್ಟಿಯಾಗಿದೆ. ಇದೇ ಮಾದರಿಯಲ್ಲಿ ತುಂಬಾ ವರ್ಷಗಳ ಕಾಲ ತರಬೇತಿ ಪಡೆದ ನೃತ್ಯಗಾರರು ಜಗತ್ತಿನ ಮೂಲೆ ಮೂಲೆಗಳಲ್ಲಿ ಇದ್ದರೂ ಯಾವುದೇ ಕೆಲಸ ಕಾರ್ಯದಲ್ಲಿ ತೊಡಗಿದ್ದರೂ ಇದೇ ಮಾದರಿಯಲ್ಲಿ ಪ್ರದರ್ಶಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಿನ ಕಾಲಮಾನದಲ್ಲಿ ಮತ್ತೆ ಭಾರತೀಯ ಕಲಾ ಪ್ರದರ್ಶನಗಳು ಪ್ರಖ್ಯಾತಿ ಪಡೆಯುತ್ತಿರುವುದು ಸಂತಸದ ವಿಚಾರ ಎಂದು ನುಡಿದರು.
ಗುರುಗಳು ಹಾಗೂ ನೃತ್ಯ ಸಂಹಿತೆ ಅಕಾಡೆಮಿಯ ವಿದುಷಿ ಸಂಹಿತ ರಾಜ್ ಮಾತನಾಡಿ, ಮನ್ವಿತಾ 13 ವರ್ಷಕ್ಕೆ ತುಂಬಾ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಿರುವುದು ತುಂಬಾ ಸಂತಸ ತಂದಿದೆ. ಓದಿನಲ್ಲೂ ಅಷ್ಟೇ ಮುಂದಿರುವುದು ಸಹ ಮೆಚ್ಚುಗೆಯ ವಿಚಾರವಾಗಿದೆ ಎಂದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್ ರಮೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.















