ಯುವ ನಾಯಕರನ್ನು ಹುಟ್ಟು ಹಾಕುವ ಸಂಘಟನೆ ಸಹಕಾರ ಕ್ಷೇತ್ರವಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

WhatsApp
Telegram
Facebook
Twitter
LinkedIn

ಬೆಂಗಳೂರು: ಹೊಸ ಹಾಗೂ ಯುವ ನಾಯಕರನ್ನು ಹುಟ್ಟುಹಾಕುವ ಪ್ರಾಥಮಿಕ ಸಂಘಟನೆ ಸಹಕಾರ ಕ್ಷೇತ್ರ. ಇದೊಂದು ರಾಜಕೀಯ ಸಂಘಟನೆ. ನಾಯಕರನ್ನು ಹುಟ್ಟು ಹಾಕುವ ಶಕ್ತಿಯಿದೆ, ಎಳೆದು ಹಾಕುವ ಶಕ್ತಿಯೂ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಶುಕ್ರವಾರ ಬೆಂಗಳೂರಿನಲ್ಲಿ ಸಹಕಾರ ಸಂಘಗಳ ನಿಬಂಧಕರ ನೂತನ ಆಡಳಿತ ಕಚೇರಿ ಸಹಕಾರ ಸಮೃದ್ಧಿ ಸೌಧ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮಾತನಾಡಿದರು. ವಿ.ಎಸ್.ಎಸ್ ಎನ್.ಎಲ್, ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಅನೇಕ ಸಹಕಾರಿ ಸಂಘದಲ್ಲಿ ಬೆಳೆದು ಶಾಸಕರಾಗಿ, ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದಿದ್ದಾರೆ ಎಂದರು.

ಎಚ್. ಕೆ ಪಾಟೀಲ್ ಅವರು ಸಹಕಾರಿ ಫೆಡರೇಶನ್ ಅಲ್ಲಿ ಕಳೆದ 40- 45 ಗಳಿಂದ ಖುರ್ಚಿಯಲ್ಲಿ ಕುಳಿತಿದ್ದಾರೆ. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೆ. ಆಗ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದರು. ಜನರಲ್ ಸ್ಥಾನಕ್ಕೆ ನನ್ನನ್ನು ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಗೆ ನಿಲ್ಲಿಸಿದ್ದರು. ನಾನು ನಿರ್ದೇಶಕನಾಗಿದ್ದೆ. ಇದಾದ ನಂತರ ಸಹಕಾರ ಮಂತ್ರಿಯಾದೆ. ಅಲ್ಲಿಂದ ಇಲ್ಲಿಯ ತನಕ ಬೆಳೆದಿದ್ದೇನೆ ಎಂದು ತಿಳಿಸಿದರು.

ಹಾಲು ಸಹಕಾರ ಸಂಘದ ಚುನಾವಣೆ ವೇಳೆ ಒಂದು ಮತದಿಂದ ಸೋತ ಅಭ್ಯರ್ಥಿಯೊಬ್ಬ ಮತಪತ್ರವನ್ನೇ ನುಂಗಿದ್ದ. ಈಗ ಚುನಾವಣೆ ನಡೆಸಲು ಹೊಸ ಅಥಾರಿಟಿ ಮಾಡಲಾಗಿದೆ, ನೂತನ ಗೈಡ್ ಲೈನ್ ಬಂದಿದೆ. ಸಹಕಾರಿ ಕ್ಷೇತ್ರದಿಂದ ಪರ್ಯಾಯವಾಗಿ ಉದ್ಯೋಗ ಸೃಷ್ಟಿಯಾಗಿದೆ. ಆರ್ಥಿಕ ಸ್ವಾತಂತ್ರ್ಯ ಬಂದಿದೆ. ಸಹಕಾರಿ ಬ್ಯಾಂಕ್ ಗಳಲ್ಲಿ ರಾಷ್ಟ್ರೀಯ ಬ್ಯಾಂಕ್ ಗಳಿಗಿಂತ ತ್ವರಿತವಾಗಿ ಜನಸಾಮಾನ್ಯರಿಗೆ ಸಾಲ ದೊರೆಯುತ್ತದೆ. ಡಿಸಿಸಿ ಬ್ಯಾಂಕ್ ಇದ್ದ ಕಾರಣಕ್ಕೆ 25 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಬೆಳೆದಿವೆ. ಇದರಿಂದ ರೈತ ಬೆಳೆದಿದ್ದಾನೆ ಎಂದು ವ್ಯಾಖ್ಯಾನಿಸಿದರು.

ಒಂದು ಲೀಟರ್ ನೀರಿನ ಬೆಲೆ 28-30 ರೂಪಾಯಿ ಆಗಿದೆ. ಹಾಲಿನ ಬೆಲೆ 40 ರೂಪಾಯಿ ಆಗಿದೆ. ನಾವು ಈ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದೇವೆ. 5 ಲಕ್ಷದ ವರೆಗೆ ಶೂನ್ಯ ಬಡ್ಡಿದರದಲ್ಲಿ  ಸಾಲ ನೀಡಲಾಗುತ್ತಿದೆ. ವಿ.ಎಸ್.ಎಸ್.ಎನ್.ಎಲ್ ಅಲ್ಲಿ ಇರುವ ಕಾರ್ಯದರ್ಶಿಗಳು ಪ್ರಭಾವ ಇರುವವರಿಗೆ ಸಾಲ ನೀಡಿ ಮಿಕ್ಕ ಹಣವನ್ನು ಅವರವರ ಹೆಸರಿಗೆ ಮಾಡಿಕೊಳ್ಳುತ್ತಾರೆ. ಅದನ್ನು ಎರಡು ಪರ್ಸೆಂಟ್ ಸೇರಿದಂತೆ ಹೆಚ್ಚಿನ ಹಣಕ್ಕೆ ಬಡ್ಡಿಗೆ ಬಿಡುತ್ತಾರೆ. ಇದು ರೈತರಿಗೆ ಗೊತ್ತಾಗುವುದಿಲ್ಲ. ಅನೇಕರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಯೂ ಇದೆ. ಇದರ ಬಗ್ಗೆ ಮುಖ್ಯಮಂತ್ರಿಯವರು ಗಮನಹರಿಸಬೇಕು ಎಂದರು.

ವಿ.ಎಸ್.ಎಸ್.ಎನ್.ಎಲ್ ಅಲ್ಲಿರುವ ಡಿಆರ್, ಜೆಆರ್ ಗಳು ಇದರ ಬಗ್ಗೆ ಸೂಕ್ಷ್ಮವಾಗಿ ಇರಬೇಕು. ಮಂತ್ರಿಗಳಿಗಿಂತ ಈ ಸಂಘದ ಕಾರ್ಯದರ್ಶಿಗಳೇ ದೊಡ್ಡದಾಗಿ ಮನೆ ಕಟ್ಟಿಕೊಂಡು ಇರುತ್ತಾರೆ. ಹಾಲಿನ ಸಂಘದವರು ಸಹ ಹಾಲಿನ ಅಳತೆ, ಕೊಬ್ಬಿನ ಅಂಶ ವಿಚಾರದಲ್ಲಿ ಮೋಸ ಮಾಡುತ್ತಾರೆ. ನೇಕಾರರದ್ದು ಸೇರಿದಂತೆ ಅನೇಕ ಸಂಘಗಳು ಮುಚ್ಚಿ ಹೋದವು ಎಂದು ಹೇಳಿದರು.

ದುಡ್ಡು ಸಂಗ್ರಹವಾದರೆ ಐಟಿ, ಇಡಿಯವರು ಬರುತ್ತಾರೆ. ರಕ್ತ ಚಲಿಸದಿದ್ದರೆ ಬಿಪಿ, ಶುಗರ್ ಬಂದು ಬಿಡುತ್ತದೆ. ಅದೇ ರೀತಿ ಸಮಾಜದಲ್ಲಿ ಹಣ ಚಲಾವಣೆಯಲ್ಲಿ ಇರಬೇಕಾದರೆ ಸಹಕಾರಿ ಸಂಘಗಳು ಚೆನ್ನಾಗಿರಬೇಕು. ಸಹಕಾರಿ ಸಂಘಗಳು ನಡೆಯುವುದೇ ನಂಬಿಕೆಯ ಮೇಲೆ. ರಾಘವೇಂದ್ರ ಸಹಕಾರಿ ಬ್ಯಾಂಕ್ ಅಲ್ಲಿ ಕೋಟ್ಯಂತರ ಅವ್ಯವಹಾರ ಆಗಿದೆ. ಅಲ್ಲಿನ ನಾಯಕರು ಮಾತೆತ್ತಿದರೆ ದೇವರು ಎಂದು ಮಾತನಾಡುತ್ತಾರೆ. ಆದರೆ ಸಾವಿರಾರು ಜನರಿಗೆ ತೊಂದರೆಯಾಯಿತು. ಇಂತಹ ಕಡೆ ಅಧಿಕಾರಿಗಳು ಗಮನವಿಡಬೇಕು ಎಂದರು.

ರೆಹಮಾನ್ ಖಾನ್ ಅವರ ಮಾತಿನ ಮೇಲೆ ಅಮಾನತ್ ಸಹಕಾರಿ ಬ್ಯಾಂಕ್ ಅನ್ನು ಶೆ ಡ್ಯೂಲ್ಡ್ ಬ್ಯಾಂಕ್ ಮಾಡಲಾಯಿತು. ಆದರೆ ಅಲ್ಲಿಯೂ ಸಹ ಅನ್ಯಾಯವಾಯಿತು. ಕಳಂಕ ಉಂಟಾಯಿತು. ಆದ್ದರಿಂದ ನಿಬಂಧಕರು ಜನರ ಪರವಾಗಿ ಕೆಲಸ ಮಾಡಬೇಕು. ಇಂತಹ ಮೋಸಗಳು ಕಂಡು ಬಂದರೆ ಸರ್ಕಾರದ ಮತ್ತು ರಿಜರ್ವ್ ಬ್ಯಾಂಕ್ ಗಮನಕ್ಕೆ ತರಬೇಕು ಎಂದು ಹೇಳಿದರು.

ಸಹಕಾರಿ ನಿಬಂದಕರಲ್ಲಿ ಕೆಲವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಶಾಸಕರೇ ಸಹಕಾರಿ ಸಂಘಗಳ ನಿರ್ದೇಶಕರಾಗುತ್ತಿದ್ದಾರೆ. ಶಾಸಕರಾಗಿದ್ದರೂ ಸ್ಥಾನ ಬಿಡುತ್ತಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗುತ್ತಿದ್ದಾರೆ. ಈ ಹಿಂದೆ ನಾನು ಸಚಿವನಾಗಿದ್ದಾಗ ಹಳೆ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ಕಟ್ಟಬೇಕು ಎಂದು ಯೋಜನೆ ಹಾಕಿದ್ದೆ. ಆದರೆ ಪಾರಂಪರಿಕ ಕಟ್ಟಡ ಎಂದು ಘೋಷಣೆ ಆದ ಕಾರಣಕ್ಕೆ ಸಾಧ್ಯವಾಗಲಿಲ್ಲ. ಈಗ ಸಿದ್ದರಾಮಯ್ಯ ಅವರ ಕಾಲದಲ್ಲಿ ಸಾಧ್ಯವಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon