ಬೆಂಗಳೂರು: ಮಡಿವಾಳದ ಕೃಪಾನಿಧಿ ಕಾಲೇಜಿನ ಸಿ.ಇ.ಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಂದ ಜನಿವಾರ ಬಲವಂತವಾಗಿ ತೆಗಸಿದ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪೀಡಿತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಮಾಧ್ಯಮಗಳ ಜೊತೆ ಮಾತನಾಡಿದ ಮಹಸಂಘದ ರಾಜ್ಯಾಧ್ಯಕ್ಷ ಜಿ.ಆರ್ ಪ್ರದೀಪ್, ಬೆಂಗಳೂರು ನಗರದ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ ಸಿ.ಇ.ಟಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಬಲವಂತವಾಗಿ ತೆಗೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ಉಂಟಾಗಿದೆ. ಜನಿವಾರವು ಬ್ರಾಹ್ಮಣ ಸಮುದಾಯದವರಿಗೆ ಕೇವಲ ದಾರವಲ್ಲ ಇದು ಧಾರ್ಮಿಕ ನಂಬಿಕೆ, ಸಂಸ್ಕೃತಿ, ಸಂಪ್ರದಾಯ, ಆಚರಣೆ ಹಾಗೂ ಆತ್ಮಗೌರವದ ಪ್ರತೀಕವಾಗಿದೆ. ಇಂತಹ ಧಾರ್ಮಿಕ ಗುರುತನ್ನು ಬಲವಂತವಾಗಿ ತೆಗೆಸುವುದು ಭಾರತದ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ, ವೈಯಕ್ತಿಕ ಗೌರವ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯ ಸಂದರ್ಭದಲ್ಲಿ ಜನಿವಾರ ತೆಗೆದುಹಾಕುವಂತ ಒತ್ತಡ ಹೇರಿದ ಪರಿಣಾಮ ಕೆಲ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕೆಲವರು ಪರೀಕ್ಷೆಯನ್ನು ಸಮರ್ಪಕವಾಗಿ ಬರೆಯಲು ಸಾಧ್ಯವಾಗಿಲ್ಲ ಎಂಬ ಮಾಹಿತಿಯೂ ನಮಗೆ ಲಭಿಸಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಭವಿಷ್ಯ ಹಾಗೂ ವೃತ್ತಿ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ವರ್ಷಪೂರ್ತಿ ಶ್ರಮಪಟ್ಟು ಸಿದ್ಧತೆ ಮಾಡಿಕೊಂಡಿರುವ ಪರೀಕ್ಷೆಯಲ್ಲಿ ಇಂತಹ ಅನ್ಯಾಯ ನಡೆದಿರುವುದು ಅತ್ಯಂತ ಖಂಡನೀಯವಾಗಿದೆ. ಆದ್ದರಿಂದ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಗಳನ್ನು ಸರ್ಕಾರ ತಕ್ಷಣ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಡಿವಾಳದ ಕೃಪಾನಿಧಿ ಕಾಲೇಜಿನ ಸಿ.ಇ.ಟಿ ಪರೀಕ್ಷಾ ಕೇಂದ್ರದ ಮಾನ್ಯತೆಯನ್ನು ರದ್ದುಪಡಿಸಿ, ಭವಿಷ್ಯದಲ್ಲಿ ಇಂತಹ ಕೇಂದ್ರವಾಗಿ ಪರಿಗಣಿಸಬಾರದು. ಘಟನೆಯ ಹೊಣೆಗಾರಿಕೆಗೆ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರು, ಪರೀಕ್ಷಾ ಮೇಲ್ವಿಚಾರಕರು, ಭದ್ರತಾ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ತನಿಖೆಗೆ ಒಳಪಡಿಸಬೇಕು. ನ್ಯಾಯಸಮ್ಮತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಜಿ.ಆರ್ ಪ್ರದೀಪ್ ಆಗ್ರಹ ವ್ಯಕ್ತಪಡಿಸಿದರು.
ಮಹಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಜೋಶಿ ಮಾತನಾಡಿ, ತಪ್ಪಿತಸ್ಥ ಸಿಬ್ಬಂದಿ, ಆಡಳಿತ ಮಂಡಳಿ ಅಥವಾ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಾನೂನುಬದ್ಧ ಹಾಗೂ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಪರೀಕ್ಷೆ ಬರೆಯಲು ತೊಂದರೆ ಅನುಭವಿಸಿದ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರದ ಕ್ರಮವಾಗಿ, ಅವರ ಇಚ್ಛೆಯ ಕಾಲೇಜುಗಳಲ್ಲಿ, ಅವರ ಅರ್ಹತೆ ಹಾಗೂ ಆಯ್ಕೆಯ ಅನುಸಾರ ನೇರ ದಾಖಲಾತಿ ಒದಗಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಯುಕ್ತರನ್ನು ತಕ್ಷಣ ಅಮಾನತು ಮಾಡಿ, ಅವರ ಸ್ಥಾನಕ್ಕೆ ಜವಾಬ್ದಾರಿಯುತ ಹಾಗೂ ಅರ್ಹ ಹೊಸ ಅಧಿಕಾರಿಯನ್ನು ನೇಮಕ ಮಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಗುರುತು, ಸಂಸ್ಕೃತಿ ಅಥವಾ ವೈಯಕ್ತಿಕ ನಂಬಿಕೆಗಳಿಗೆ ಧಕ್ಕೆ ಉಂಟಾಗದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿ, ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಈ ಪ್ರಕರಣದ ತನಿಖಾ ವರದಿಯನ್ನು ಸಾರ್ವಜನಿಕರಿಗೆ ತಿಳಿಸಿ, ಸರ್ಕಾರ ನ್ಯಾಯಯುತವಾಗಿ ನಡೆದುಕೊಂಡಿದೆ ಎನ್ನುವುದನ್ನು ಸಾಬೀತುಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಬ್ರಹ್ಮ ಉದ್ಯೋಗ ವಿಭಾಗದ ರಾಜ್ಯಾಧ್ಯಕ್ಷ ಶ್ರೀಧರ್, ಯುವರಾಜ ರಾಜ್ಯಾಧ್ಯಕ್ಷ ಕಾರ್ತಿಕ್ ಸೋಮಯಾಜಿ ಸೇರಿದಂತೆ ಸಮುದಾಯದ ಹಲವು ಮುಖಂಡರು ಉಪಸ್ಥಿತರಿದ್ದರು.













