ಬೆಳಗಾವಿ: ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲು ಹಾಗೂ ಅವರ ಭವಿಷ್ಯಕ್ಕೆ ನೇರವಾಗಲು ಕುಮಾರಿ ಸಮೃದ್ಧಿ ಯೋಜನೆಯ ಹೆಸರಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮ ಪಂಚಾಯತಿ ಇತರ ಆಡಳಿತಗಳಿಗೆ ಮಾದರಿಯಾದ ಹಾಗೂ ಅನುಕರಣೀಯವಾಗಿರುವ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿದೆ.
ಹೂಲಿ ಗ್ರಾಮದಲ್ಲಿ ಜನಿಸುವ ಪ್ರತಿ ಹೆಣ್ಣು ಮಕ್ಕಳ ಹೆಸರಲ್ಲಿ ಪಂಚಾಯತಿ ಕಡೆಯಿಂದ 5,500 ರೂ. ಠೇವಣಿ ಇರಿಸುವ ಮೂಲಕ, ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವ ಯೋಜನೆಯನ್ನು ರೂಪಿಸಿದ್ದು, ಕರ್ನಾಟಕದಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದೆ.
ಈ ಕುರಿತು ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸ್ವಯಂ ಸರ್ಕಾರಗಳಾದ ಗ್ರಾಮ ಪಂಚಾಯತಿಗಳು ರಾಜ್ಯದಲ್ಲಿ ಕ್ರಿಯಾಶೀಲವಾಗಿ ತಮ್ಮದೇ ಆದ ವಿಶಿಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರೇರಣಾತ್ಮಕವಾಗಿ ಕೆಲಸ ಮಾಡುತ್ತಿವೆ, ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇರುವ ಪೂರ್ವಗ್ರಹವನ್ನು ನಿವಾರಿಸಲು ಹಾಗೂ ಹೆಣ್ಣುಮಕ್ಕಳ ಪೋಷಕರಲ್ಲಿ ಆತ್ಮಸ್ಥೈರ್ಯ ತುಂಬಲು ಹೂಲಿ ಗ್ರಾಮ ಪಂಚಾಯತಿ ತೆಗೆದುಕೊಂಡಿರುವ ಈ ಐತಿಹಾಸಿಕ ನಿರ್ಧಾರ ರಾಜ್ಯದ ಇತರ ಗ್ರಾಮ ಪಂಚಾಯತಿಗಳಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದ್ದಾರೆ.















