ವೈದ್ಯರಲ್ಲಿ ಹೆಣ್ಣಿನ ಗುಣ ಇರಬೇಕು: ಡಾ. ಶಾಲಿನಿ ರಾಜನೀಶ್

WhatsApp
Telegram
Facebook
Twitter
LinkedIn

ಬೆಂಗಳೂರು: ಪ್ರೀತಿ, ಮಾನವೀಯತೆ, ಮಮಕಾರ, ಅಕ್ಕರೆ ಹಾಗೂ ಆರೈಕೆ ಇವು ಮಹಿಳೆಯರ ಸಹಜ ಗುಣಗಳು. ವೈದ್ಯಾಧಿಕಾರಿಗಳು ಮತ್ತು ವೈದ್ಯರು ಈ ಗುಣಗಳನ್ನು ಅಳವಡಿಸಿಕೊಂಡರೆ ಮಾತ್ರ ಅವರು ನಿಜವಾದ ಅರ್ಥದಲ್ಲಿ ವೈದ್ಯರಾಗಲು ಸಾಧ್ಯ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಾಜನೀಶ್ ಹೇಳಿದರು.

ಗುರುವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ರೋಗಿಯ ನೋವು, ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ವೈದ್ಯರಾದವರಿಗೆ ಹೆಣ್ಣಿನ ಮನಸ್ಸು ಇರಬೇಕು. ನೀವು ದಿನನಿತ್ಯ ಸಾವಿರಾರು ಪ್ರಕರಣಗಳನ್ನು ನೋಡುತ್ತೀರಿ. ಆದರೆ ರೋಗಿಗೆ ಹಾಗೂ ಅವರ ಮನೆಯವರಿಗೆ ಅದು ಬಹಳ ದೊಡ್ಡ ಕಳವಳದ ವಿಚಾರವಾಗಿರುತ್ತದೆ. ಹೀಗಾಗಿ, ಪ್ರತಿ ರೋಗಿಗಳನ್ನೂ ಅಷ್ಟೇ ಪ್ರೀತಿ-ಮುತುವರ್ಜಿಯಿಂದ ಕಾಣುವುದು ನಿಮ್ಮ ಧರ್ಮವಾಗಬೇಕು ಎಂದು ಹೇಳಿದರು.

ಮಹಿಳೆಯರ ಆರೋಗ್ಯದ ವಿಚಾರದಲ್ಲಿ ಇಂದು ನಾವು ಎದುರಿಸುತ್ತಿರುವ ಅತ್ಯಂತ ಗಂಭೀರ ಸವಾಲು ಎಂದರೆ ರಕ್ತಹೀನತೆ. ನಮ್ಮ ರಾಜ್ಯದಲ್ಲಿ ಶೇ. 67ಕ್ಕಿಂತ ಹೆಚ್ಚು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿರುವುದು ಆತಂಕಕಾರಿಯಾಗಿದೆ. ಜೈವಿಕವಾಗಿ ಪುರುಷರಿಗಿಂತ ಹೆಚ್ಚು ಶಕ್ತಿಶಾಲಿಗಳೆಂದು ಪರಿಗಣಿಸಲ್ಪಡುವ ಮಹಿಳೆಯರು, ಬೆಳೆಯುತ್ತಾ ರಕ್ತಹೀನತೆಯಂತಹ ಗಂಭೀರ ಸಮಸ್ಯೆಗೆ ಒಳಗಾಗುತ್ತಿರುವುದು ನಮ್ಮ ಸಮಾಜದ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ಇದರ ಹಿಂದೆ ಕೌಟುಂಬಿಕ ಹಾಗೂ ಸಾಮಾಜಿಕ ಕಾರಣಗಳು ಎದ್ದು ಕಾಣುತ್ತವೆ ಎಂದರು.

ರಕ್ತಹೀನತೆಯಿಂದ ಬಳಲುತ್ತಿರುವ ಈ ಮಹಿಳೆಯರಿಗೆ ಹುಟ್ಟುವ ಮಕ್ಕಳ ಆರೋಗ್ಯದ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ. ಆರೋಗ್ಯಕರ ಪೀಳಿಗೆಯನ್ನು ನಿರ್ಮಿಸುವ ಮೊದಲು ಮಹಿಳೆಯರ ಆರೋಗ್ಯವನ್ನು ಕಾಪಾಡುವುದು ನಮ್ಮ ಅಗತ್ಯವಾಗಬೇಕು. ಇಂತಹ ಪರಿಸ್ಥಿತಿಯಲ್ಲಿ, ರಕ್ತಹೀನತೆ ಸೇರಿದಂತೆ ಅನೇಕ ರೋಗಗಳನ್ನು ತಡೆಗಟ್ಟಲು ನಾವು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಆತ್ಮಪರಿಶೀಲನೆ ಅಗತ್ಯವಾಗಿದೆ. ಆರೋಗ್ಯ ವೃತ್ತಿಪರರಿಗೆ ರೋಗಗಳಿಗೆ ಚಿಕಿತ್ಸೆ ನೀಡುವುದನ್ನು ಕಲಿಸುತ್ತೇವೆ. ಆದರೆ ರೋಗ ತಡೆಗಟ್ಟುವಿಕೆಗೆ ಅಗತ್ಯವಾದ ಕೌಶಲಗಳು ಆರೋಗ್ಯ ವೃತ್ತಿಪರರಿಗೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮ ದೇಶದ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ ಸರಳ, ಸುಲಭ ಮತ್ತು ಪರಿಣಾಮಕಾರಿ ತಡೆಗಟ್ಟುವಿಕೆ ಹಾಗೂ ಚಿಕಿತ್ಸಾ ವಿಧಾನಗಳಿವೆ. ಅವುಗಳನ್ನು ನಾವು ಮರೆತಿರುವುದೇ ಇಂದಿನ ಅನೇಕ ಆರೋಗ್ಯ ಸಮಸ್ಯೆಗಳ ಮೂಲ ಕಾರಣವಾಗಿದೆ. ಇಂಟಿಗ್ರೇಟಿವ್ ಮೆಡಿಸಿನ್‌ನ್ನು ಉತ್ತೇಜಿಸುವುದು ಕಾಲದ ಅಗತ್ಯವಾಗಿದೆ. ಸಾವಿರಾರು ವರ್ಷಗಳಿಂದ ಸಾಬೀತಾಗಿರುವ ನಮ್ಮ ಸಾಂಪ್ರದಾಯಿಕ ವೈದ್ಯ ಪದ್ಧತಿಗಳನ್ನು ನಾವು ನಿರ್ಲಕ್ಷಿಸಬಾರದು. ಆಧುನಿಕ ವೈದ್ಯಕೀಯ ಪದ್ಧತಿಗಳ ಜೊತೆಗೆ ಇವುಗಳನ್ನು ಸಮನ್ವಯಗೊಳಿಸುವ ಮೂಲಕ ಸಮಗ್ರ ವೈದ್ಯಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಇಂತಹ ವ್ಯವಸ್ಥಿತ, ಶಿಸ್ತುಬದ್ಧ ವೈದ್ಯಪದ್ಧತಿಗಳ ಪರಿಚಲನೆಗೆ ರಾಜೀವ್ ಗಾಂಧಿ ಆರೋಗ್ಯ ವಿವಿಯಂತಹ ಸಂಸ್ಥೆಗಳು ಪುಷ್ಠಿ ನೀಡಬೇಕು. ಜ್ಞಾನ ಯಾವುದೇ ಮೂಲದಿಂದ ಬಂದರೂ ಅದು ಮಾನವಕುಲದ ಹಿತಕ್ಕಾಗಿ ಉಪಯೋಗವಾಗುವುದಾದರೆ, ಅದನ್ನು ಸ್ವೀಕರಿಸಿ ಅಳವಡಿಸಿಕೊಳ್ಳುವ ಮನೋಭಾವ ನಮ್ಮಲ್ಲಿರಬೇಕು ಎಂದು ಹೇಳಿದರು.

ರಾಗಾಆವಿವಿಯ ಕುಲಪತಿ ಡಾ. ಭಗವಾನ್ ಬಿ.ಸಿ ಮಾತನಾಡಿ, ಮಹಿಳೆಯರು ಪರಸ್ಪರ ಸ್ಪರ್ಧಿಸುವುದಕ್ಕಿಂತ ಪರಸ್ಪರ ಪ್ರೋತ್ಸಾಹಿಸಿದಾಗ ಸಮಾಜ ಇನ್ನಷ್ಟು ಬಲಗೊಳ್ಳುತ್ತದೆ. ಬದುಕಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾಧನೆಗೆ ಪೂರಕವಾಗುವಂತಹ ಕೆಲವು ಮನೋಭಾವಗಳನ್ನು ನೀವೆಲ್ಲಾ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ನಿಮ್ಮ ಸಾಮರ್ಥ್ಯವನ್ನು ಹಾಗೂ ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳಳ್ಳಿ. ನಿಮ್ಮನ್ನು ನೀವು ಕಾಳಜಿ ವಹಿಸಲು ಕಲಿಯಿರಿ. ಎಲ್ಲರೂ ಎಲ್ಲವನ್ನೂ ಒಂದೇ ಸಮಯದಲ್ಲಿ ನಿರ್ವಹಿಸಲು ಸಾಧ್ಯವಿಲ್ಲ. ಎಲ್ಲವನ್ನೂ ನಿಭಾಯಿಸಲು ಯತ್ನಿಸುವುದು ಒತ್ತಡ ಮತ್ತು ಅಸಮತೋಲನಕ್ಕೆ ಕಾರಣವಾಗುತ್ತದೆ. ಸೂಪರ್ ವುಮನ್ ಎನ್ನುವುದು ಒಂದು ಭ್ರಮೆ. ಅದೊಂದು ಅಸಾಧ್ಯ ನಿರೀಕ್ಷೆಗಳ ಭಾರ. ಅದಕ್ಕೆ ಈಡಾಗಬೇಡಿ. ನಾವು ಎಲ್ಲರೂ ನಮ್ಮದೇ ಆದ ಸಾಮರ್ಥ್ಯಗಳು ಮತ್ತು ಮಿತಿಗಳಿರುವ ಸಾಮಾನ್ಯ ಮನುಷ್ಯರು. ಈ ಸತ್ಯವನ್ನು ಒಪ್ಪಿಕೊಳ್ಳುವುದರಿಂದ ಜೀವನದಲ್ಲಿ ಸಮತೋಲನ ಮತ್ತು ಶಾಂತಿ ದೊರೆಯುತ್ತದೆ ಎಂದರು.

ಅಗತ್ಯವಿದ್ದಾಗ ಕೆಲವು ಕೆಲಸಗಳಿಗೆ, ಪರಿಸ್ಥಿತಿಗಳಿಗೆ, ಕೆಲವೊಮ್ಮೆ ಇಲ್ಲ ಎಂದು ಹೇಳುವುದನ್ನು ಕಲಿಯಿರಿ. ಇಲ್ಲ ಎನ್ನುವುದು ದೌರ್ಬಲ್ಯ ಅಲ್ಲ; ಅದು ನಿಮ್ಮ ಸ್ವಾಭಿಮಾನ ಮತ್ತು ಸ್ಪಷ್ಟತೆಯ ಸಂಕೇತ. ನಿಮ್ಮ ಜೀವನಕ್ಕೆ ಮೌಲ್ಯವನ್ನು ನೀಡದ ಚಿಂತೆಗಳು, ಒತ್ತಡಗಳು ಮತ್ತು ಅನಗತ್ಯ ನಿರೀಕ್ಷೆಗಳ ಕೈಬಿಡುವುದನ್ನು ಕಲಿಯಿರಿ. ಅದೇ ವೇಳೆ, ಕೆಲವನ್ನು ಎಂದೂ ಬಿಟ್ಟುಕೊಡಬೇಡಿ. ನಿಮ್ಮ ಕನಸುಗಳು, ಆಸಕ್ತಿ ಮತ್ತು ಜೀವನದ ಉದ್ದೇಶವನ್ನು ಎಂದಿಗೂ ಬಿಟ್ಟುಕೊಡಬೇಡಿ. ನಿಮ್ಮ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಶಕ್ತಿ ಮತ್ತು ಉತ್ಸಾಹವು ನಿಮ್ಮನ್ನಷ್ಟೇ ಅಲ್ಲ, ನಿಮ್ಮ ಸುತ್ತಲಿನ ಹಲವರ ಜೀವನಕ್ಕೂ ಆಧಾರವಾಗಿದೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ. ಬಿ. ಎಲ್. ಸುಜಾತಾ ರಾಥೋಡ್ ಮಾತನಾಡಿ, ಮಹಿಳೆಯರ ಸಮಗ್ರ ಅಭಿವೃದ್ಧಿ ಮತ್ತು ಏಳಿಗೆಗಾಗಿ ಕಾನೂನು-ಕಾಯ್ದೆಗಳು ಮಾತ್ರ ಸಾಕಾಗುವುದಿಲ್ಲ; ಪರಸ್ಪರ ಪ್ರೋತ್ಸಾಹ, ನೆರವು ಹಾಗೂ ಬೆಂಬಲವೂ ಅಗತ್ಯ. ಸಮಾನತೆ ಎನ್ನುವುದು ಕೇವಲ ಒಂದು ಆಲೋಚನೆ ಅಲ್ಲ, ಅದು ದೊಡ್ಡ ಜವಾಬ್ದಾರಿಯಾಗಿದೆ. ಮನೆಯೊಳಗೆ ಮಹಿಳೆಯರನ್ನು ಹೇಗೆ ನೋಡಲಾಗುತ್ತದೆ ಎಂಬುದು ಮಕ್ಕಳ ಮನೋಭಾವದ ಮೇಲೆ ನೇರ ಪರಿಣಾಮ ಬೀರುತ್ತದೆ. ಮಹಿಳೆಯರನ್ನು ಗೌರವದಿಂದ ಮತ್ತು ಆಧರದಿಂದ ಕಾಣುವ ಸಂಸ್ಕಾರ ಮನೆಯಿಂದಲೇ ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು.

ಹೆಣ್ಣುಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು, ಹೇಗೆ ಮಾತನಾಡಬೇಕು ಎಂಬುದನ್ನು ಗಂಡುಮಕ್ಕಳಿಗೆ ಬಾಲ್ಯದಿಂದಲೇ ಕಲಿಸುವುದು ಅತ್ಯಂತ ಮುಖ್ಯ. ಪ್ರತಿಹಂತದಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶ, ಸಮಾನ ಗೌರವ ಹಾಗೂ ಸಮಾನ ಸ್ಥಾನಮಾನಗಳನ್ನು ನೀಡಬೇಕು. ಇದರಿಂದ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಮಾತನಾಡಿ, ಮನೆಯೊಳಗೂ ಹೊರಗೂ ನಿಜವಾದ ನಾಯಕರಾಗಿ ಸಮಾಜವನ್ನು ಮುನ್ನಡೆಸುತ್ತಿರುವವರು ಮಹಿಳೆಯರೇ ಎಂದು ಅಭಿಪ್ರಾಯಪಟ್ಟರು.

ಪ್ಲಾಸ್ಟಿಕ್ ಮತ್ತು ರಿಕನ್‌ಸ್ಟ್ರಕ್ಟಿವ್ ಸರ್ಜನ್, ಪದ್ಮಶ್ರೀ ಪ್ರಶಸ್ತಿ ವಿಜೇತೆ ಡಾ. ಪ್ರೇಮ ಧನರಾಜ್ ಮಾತನಾಡಿ ತಮ್ಮ ಅನುಭವನ್ನು ಹಂಚಿಕೊಂಡರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಗಾಆವಿವಿ ಸಾಧಕಿಯರನ್ನು ಸನ್ಮಾನಿಸಲಾಯಿತು. ಕುಲಸಚಿವ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವ ಡಾ. ಎಸ್ ರಿಯಾಜ್ ಭಾಷ, ಹಣಕಾಸು ಅಧಿಕಾರಿ ಬಿ.ಕೆ. ಗಂಗಾಧರ ಉಪಸ್ಥಿತರಿದ್ದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon