ರಾಷ್ಟ್ರೀಯ ಹೆದ್ದಾರಿ ಟೋಲ್ ನೀತಿಯ ಮರುಪರಿಶೀಲನೆ, ಪಾರದರ್ಶಕತೆ ಅತ್ಯವಶ್ಯ

WhatsApp
Telegram
Facebook
Twitter
LinkedIn

ಕೆ. ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ ಮಾಲಿಕರ ಸಂಘ

ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯವು ಕಳೆದ ಎರಡು ದಶಕಗಳಲ್ಲಿ ವೇಗವಾಗಿ ವಿಸ್ತಾರಗೊಂಡಿದ್ದು, ದೇಶದ ಒಟ್ಟು ರಾಷ್ಟ್ರೀಯ ಹೆದ್ದಾರಿ ಜಾಲವು ಸುಮಾರು 1.46 ಲಕ್ಷ ಕಿ.ಮೀ. ಕ್ಕೂ ಹೆಚ್ಚು ವಿಸ್ತರಿಸಿದೆ. ಈ ಹೆದ್ದಾರಿಗಳಲ್ಲಿ ಸುಮಾರು 1,175 ಕ್ಕೂ ಹೆಚ್ಚು ಟೋಲ್ ಪ್ಲಾಸಾಗಳ ಮೂಲಕ ಸಾರ್ವಜನಿಕರಿಂದ ಟೋಲ್ ಶುಲ್ಕವನ್ನು 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳ ಆಧಾರದ ಮೇಲೆ ವಸೂಲಿ ಮಾಡಲಾಗುತ್ತಿದೆ. ಆದರೆ ಸುಮಾರು ಎರಡು ದಶಕಗಳ ಹಿಂದೆ ರೂಪಿಸಲಾದ ಈ ನಿಯಮಗಳು ಇಂದಿನ ಆರ್ಥಿಕ ಹಾಗೂ ಸಂಚಾರದ ಪರಿಸ್ಥಿತಿಗೆ ಹೊಂದಿಕೆಯಾಗುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ದೇಶದಾದ್ಯಂತ ಟೋಲ್ ಸಂಗ್ರಹವು ಗಣನೀಯವಾಗಿ ಹೆಚ್ಚಾಗಿದೆ. ಅಂದಾಜುಗಳ ಪ್ರಕಾರ ಪ್ರತಿದಿನ 180 ರಿಂದ 200 ಕೋಟಿಯವರೆಗೆ ಟೋಲ್ ಸಂಗ್ರಹವಾಗುತ್ತಿದೆ, ಇದು ವರ್ಷದಿಂದ ವರ್ಷಕ್ಕೆ ಸರಾಸರಿ 19% ರಷ್ಟು ಏರಿಕೆಯನ್ನು ಸೂಚಿಸುತ್ತದೆ. ಪ್ರಸ್ತುತ 65,000 ಕಿ.ಮೀ. ಕ್ಕೂ ಹೆಚ್ಚು ಹೆದ್ದಾರಿಗಳಲ್ಲಿ ಟೋಲ್ ವಸೂಲಿ ನಡೆಯುತ್ತಿದ್ದು, ಸುಮಾರು 2.5% ರಿಂದ 5% ರಷ್ಟು ದರ ಏರಿಕೆ ಜಾರಿಯಾಗುತ್ತಿದೆ. ಆದರೆ ಈ ಲೆಕ್ಕಾಚಾರ ವಿಧಾನ ಸಾಮಾನ್ಯ ರಸ್ತೆ ಬಳಕೆದಾರರಿಗೆ ಗೊಂದಲಕಾರಿಯಾಗಿದ್ದು, ಇಂದಿನ ಆರ್ಥಿಕ ಪರಿಸ್ಥಿತಿಗೆ ಹೊಂದುವಂತೆ ಮರುಪರಿಶೀಲನೆ ಅಗತ್ಯವಾಗಿದೆ.

ಹೆಚ್ಚಿನ ಹೆದ್ದಾರಿ ಯೋಜನೆಗಳಲ್ಲಿ ರಸ್ತೆ ನಿರ್ಮಾಣಕ್ಕೆ ಹೂಡಿಕೆಯಾದ ಮೊತ್ತವನ್ನು ಈಗಾಗಲೇ ವಸೂಲಿ ಮಾಡಲಾಗಿದೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವಾಹನಗಳ ಸಂಖ್ಯೆ ಹಾಗೂ ಸಂಚಾರದ ದಟ್ಟಣೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ಟೋಲ್ ಆದಾಯವು ಸಹ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇವಲ 2008ರ ನಿಯಮಗಳನ್ನು ಆಧರಿಸಿ ಯಾಂತ್ರಿಕವಾಗಿ ದರ ಏರಿಕೆ ಮುಂದುವರಿಸುವುದು ಸಾರಿಗೆ ಉದ್ಯಮಿಗಳ ಮೇಲೆ ಹೆಚ್ಚುವರಿ ಆರ್ಥಿಕ ಭಾರವನ್ನು ಉಂಟುಮಾಡುತ್ತದೆ. ಪ್ರಸ್ತುತ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕೊರತೆ ಇದೆ ಎಂಬ ಅಭಿಪ್ರಾಯವನ್ನು ರಸ್ತೆ ಬಳಕೆದಾರರು ಹಾಗೂ ಸಾರಿಗೆ ಉದ್ಯಮಿಗಳು ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ನಿರ್ಮಾಣ ವೆಚ್ಚ, ಈಗಾಗಲೇ ವಸೂಲಿ ಆಗಿರುವ ಒಟ್ಟು ಟೋಲ್ ಮೊತ್ತ, ಟೋಲ್ ಅವಧಿಯ ವಿಸ್ತರಣೆ, ದರ ಏರಿಕೆ ಇವುಗಳ ಬಗ್ಗೆ ಸ್ಪಷ್ಟ ಹಾಗೂ ಸಾರ್ವಜನಿಕವಾಗಿ ಲಭ್ಯವಾಗುವ ಮಾಹಿತಿಯ ಕೊರತೆ ಕಂಡು ಬರುತ್ತಿದೆ. ಯೋಜನೆಯ ನಿಜವಾದ ವೆಚ್ಚ ಎಷ್ಟು? ಎಷ್ಟು ಮೊತ್ತ ವಸೂಲಿ ಆಗಿದೆ? ಇನ್ನೆಷ್ಟು ವರ್ಷ ಟೋಲ್ ಮುಂದುವರಿಯಲಿದೆ? ಎಂಬ ಮೂಲಭೂತ ಮಾಹಿತಿಗಳು ಸಾಮಾನ್ಯ ನಾಗರಿಕರಿಗೆ ಸುಲಭವಾಗಿ ಲಭ್ಯವಾಗುವುದಿಲ್ಲ.

ವಾಹನಗಳ ಸಂಖ್ಯೆ ಹೆಚ್ಚಾಗುತ್ತಾ, ಸಂಚಾರದ ಪ್ರಮಾಣವೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಟೋಲ್ ಆದಾಯವೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಆದಾಗ್ಯೂ ಈ ವಿಷಯದಲ್ಲಿ ವ್ಯಾಪಕವಾಗಿ ಧ್ವನಿ ಎತ್ತುವವರ ಸಂಖ್ಯೆ ಕಡಿಮೆ ಇರುವುದೂ ಗಮನಾರ್ಹವಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕವಾದರೂ, ಅದೇ ಸಮಯದಲ್ಲಿ ಪಾರದರ್ಶಕ, ಸಮತೋಲನದ ಹಾಗೂ ನ್ಯಾಯಸಮ್ಮತ ಟೋಲ್ ನೀತಿ ರೂಪಿಸುವುದು ಅಗತ್ಯವಾಗಿದೆ.

ಇದಲ್ಲದೆ ಪ್ರಸ್ತುತ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಯುದ್ಧದ ಭೀತಿ ಉಂಟಾಗಿರುವ ಹಿನ್ನೆಲೆ ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಇಳಿಕೆ ಕಂಡುಬರುತ್ತಿದೆ. ಅಂತರರಾಷ್ಟ್ರೀಯ ಸಭೆಗಳು, ಸಮಾವೇಶಗಳು, ಪ್ರದರ್ಶನಗಳು ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬರುವ ವಿದೇಶಿ ಪ್ರಯಾಣಿಕರ ಸಂಖ್ಯೆಯೂ ಕುಂಠಿತವಾಗಿದೆ. ಇದರಿಂದ ಪ್ರವಾಸೋದ್ಯಮ, ಹೋಟೆಲ್, ಸಾರಿಗೆ ಹಾಗೂ ಸಂಬಂಧಿತ ಸೇವಾ ವಲಯಗಳು ಆರ್ಥಿಕವಾಗಿ ಹೊಡೆತ ಅನುಭವಿಸುತ್ತಿವೆ. ಅದರ ಜೊತೆಗೆ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಇಳಿಮುಖವಾಗುತ್ತಿರುವುದು, ಇಂಧನ ವೆಚ್ಚಗಳ ಏರಿಕೆ, ಸರಕು ಸಾಗಣೆ ವೆಚ್ಚದ ಹೆಚ್ಚಳ ಹಾಗೂ ಕಾರ್ಯಾಚರಣಾ ವೆಚ್ಚಗಳ ಹೆಚ್ಚಳದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವ್ಯಾಪಾರ ಅವಕಾಶಗಳು ಕುಂಠಿತವಾಗುತ್ತಿವೆ. ಪರಿಣಾಮವಾಗಿ ಸಾರಿಗೆ, ಪ್ರವಾಸೋದ್ಯಮ ಮತ್ತು ಸೇವಾ ವಲಯಗಳ ಉದ್ಯಮಿಗಳು ಸರ್ಕಾರದ ಬೆಂಬಲದತ್ತ ನಿರೀಕ್ಷೆಯಿಂದ ನೋಡುತ್ತಿದ್ದಾರೆ.

ಇಂತಹ ಸವಾಲಿನ ಸಂದರ್ಭದಲ್ಲಿ ಸರ್ಕಾರವು ಆರ್ಥಿಕ ಸ್ಥಿರತೆ ಕಾಪಾಡಲು ನೆರವಾಗುವ ನೀತಿಗಳನ್ನು ರೂಪಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಡಬ್ಲ್ಯೂ. ಪಿ. ಐ ಆಧಾರಿತ ಟೋಲ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ಮುಂದೂಡುವುದು ಅಥವಾ ಮರುಪರಿಶೀಲಿಸುವುದು, ಹಾಗೂ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಆರ್ಥಿಕ ಸಹಾಯ ಕ್ರಮಗಳನ್ನು ಕೈಗೊಳ್ಳುವುದು ಕಾಲದ ಅವಶ್ಯಕತೆಯಾಗಿದೆ. ಇದರೊಂದಿಗೆ ಸರ್ಕಾರದ ವಿವಿಧ ಆದೇಶಗಳು, ಸುತ್ತೋಲೆಗಳು ಮತ್ತು ಹೆಚ್ಚುವರಿ ವೆಚ್ಚ ಉಂಟುಮಾಡುವ ನಿಯಮಗಳ ಜಾರಿಗೆ ಕನಿಷ್ಠ ಮೂರು ತಿಂಗಳಾವಧಿಗೆ ವಿಸ್ತರಣೆ ನೀಡುವುದನ್ನು ಪರಿಗಣಿಸುವುದು ಸೂಕ್ತವಾಗಿರುತ್ತದೆ. ಇದು ಉದ್ಯಮಗಳಿಗೆ ಆರ್ಥಿಕ ಒತ್ತಡವನ್ನು ನಿರ್ವಹಿಸಲು, ಉದ್ಯೋಗವನ್ನು ಕಾಪಾಡಿಕೊಳ್ಳಲು ಹಾಗೂ ಸೇವೆಗಳನ್ನು ನಿರಂತರವಾಗಿ ಒದಗಿಸಲು ಸಹಾಯಕವಾಗುತ್ತದೆ.

ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು – 2008 ಅನ್ನು ಸಮಗ್ರವಾಗಿ ಮರುಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವುದು ಅಗತ್ಯವಾಗಿದೆ. 2008ರ ಹಿಂದಿನ ವಾಹನಗಳ ಸಂಖ್ಯೆ ಹಾಗೂ 2026ರವರೆಗೆ ಹೆಚ್ಚಿರುವ ವಾಹನಗಳ ಅಂಕಿಅಂಶಗಳನ್ನು ಪರಿಗಣಿಸಿ ಟೋಲ್ ನೀತಿಯನ್ನು ಮರು ವಿನ್ಯಾಸಗೊಳಿಸುವುದು ಸಮಂಜಸವಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ರಸ್ತೆ ಬಳಕೆದಾರರು, ಸಾರಿಗೆ ಉದ್ಯಮಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಹಿತಾಸಕ್ತಿಯನ್ನು ಕಾಪಾಡುವ ಪಾರದರ್ಶಕ ಮತ್ತು ಸಮತೋಲನದ ಟೋಲ್ ನೀತಿ ರೂಪಿಸುವುದು ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon