ದಾವಣಗೆರೆ: ರಾಜ್ಯದಲ್ಲಿ ಉಪ ಚುನಾವಣೆ ಬಂದಿದೆ ಅಂತ ಕುರ್ಚಿ ಕದನಕ್ಕೆ ವಿರಾಮ ಸಿಕ್ಕಿದೆ. ಮೇ ತಿಂಗಳಲ್ಲಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ದಾವಣಗೆರೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ನಗರದ ಡಿ.ಸಿ.ಎಂ ಟೌನ್ ನಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಸಮಾಜದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಶ್ರೀನಿವಾಸ ದಾಸಕರಿಯಪ್ಪ ಅವರ ಪರವಾಗಿ ಮತಯಾಚನೆ ಮಾಡಿದರು. ಆರ್ಯ ವೈಶ್ಯ ಸಮಾಜ ಒಂದು ಶಿಸ್ತಿನ ಸಮಾಜ ಮತ್ರು ಎಲ್ಲರನ್ನೂ ಕೂಡ ಪರ್ಪೆಕ್ಟ್ ಲೆಕ್ಕಾಚಾರ ಹಾಕಿ ತೀರ್ಮಾನ ಮಾಡುವ ಸಮಾಜ. ಇಲ್ಲಿ ಬಿಜೆಪಿಯ ಜಯಭೇರಿ 30 ವರ್ಷದಿಂದ ಸಿಕ್ಕಿಲ್ಲ. ನಿಮ್ಮ ಲೆಕ್ಕಾಚಾರದಿಂದ ಜಯ ಸಿಗಲಿದೆ ಎಂದು ಜೈಕಾರ ಹಾಕಿ ಎಂದರು.
ನಿಮ್ಮ ಲೆಕ್ಕ ನೀವೆ ಬರೆದು ಕಠಿಣ ಪರಿಶ್ರಮದಿಂದ ಬದುಕನ್ನು ರೂಪಿಸಿಕೊಳ್ಳಲುತ್ತೀರಿ. ಮೊದಲು ದುಡ್ಡೆ ದೊಡ್ಡಪ್ಪ ಅಂತ ಇತ್ತು ಆದರೆ, ಶ್ರೀನಿವಾಸನನ್ನು ಪೂಜೆ ಮಾಡುವವರು ನೀವು ದುಡಿಮೆಯೇ ದೊಡ್ಡಪ್ಪ ಅಂತ ನಂಬಿದ್ದೀರಿ. ನಿಮ್ಮ ಆರಾಧ್ಯ ಧೈವ ಶ್ರಿನಿವಾಸ ಹೆಸರಿನ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಅವರಿಗೆ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದರು.
ಹಿಂದುಳಿದವರಿಗೆ ಮೋಸ:
ರಾಜ್ಯದ ಹಣೆ ಬರಹ ಬದಲಾವಣೆ ಮಾಡುವ ಚುನಾವಣೆ ಇದು. ಕಾಂಗ್ರೆಸ್ ಅಧಿಕಾರದ ಅಹಂಕಾರದಲ್ಲಿ ತೇಲಾಡುತ್ತಿದೆ. ಅವರಿಗೆ ಯಾರೂ ಕಣ್ಣಿಗೆ ಕಾಣಿಸುತ್ತಿಲ್ಲ. ಯಾವ ಸಮಾಜದ ಬಗ್ಗೆಯೂ ಗೌರವ ಇಲ್ಲ. ಅಹಿಂದಾ ಸಮಾಜಕ್ಕೆ ಅವಮಾನ ಮಾಡಿರುವುದು ಕಾಂಗ್ರೆಸ್ ಪಕ್ಷ. ಕಳೆದ ವರ್ಷ 410 ಕೋಟಿ ಹಿಂದುಳಿದ ವರ್ಗಗಳ ಸಮಾಜದ ಅಭಿವೃದ್ಧಿಗೆ ಇಟ್ಟಿದ್ದರು. ಆ ಹಣವನ್ನು ಜಾತಿ ಗಣತಿಗೆ ನೀಡಿ, ಹಿಂದುಳಿದ ವರ್ಗಗಳ ನಿಗಮಗಳಿಗೆ ಶೂನ್ಯ ನೀಡಿದರು. ಚುನಾವಣೆ ಬಂದಾಗ ಅಹಿಂದಾ ವರ್ಗದವರು ನೀವು ಮುಂದೆ ಬನ್ನಿ ಅಂತಾರೆ, ಅಧಿಕಾರಕ್ಕೆ ಬಂದಾಗ ನೀವು ಹಿಂದೆ ಉಳಿಯಿರಿ ನಾವು ಮುಂದೆ ಹೋಗುತ್ತೇವೆ ಎನ್ನುತ್ತಾರೆ ಎಂದರು.
ಲೂಟಿಗೆ ಪೈಪೋಟಿ:
ನಮ್ಮ ಅವಧಿಯಲ್ಲಿ ಆರ್ಯ ವೈಶ್ಯ ನಿಗಮಕ್ಕೆ ಹಣ ಕೊಟ್ಟಾಗ ವಿಧಾನ ಪರಿಷತ್ ಸದಸ್ಯದಾರ ಅರುಣ್ ಅದನ್ನು ಸರಿಯಾಗಿ ಬಳಕೆ ಮಾಡಿ ಶೇ 95% ರಷ್ಡು ರಿಕವರಿ ಮಾಡಿ ಯಶಸ್ಬಿಯಾಗಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷದಲ್ಲಿ ಹಣ ನೀಡಿಲ್ಲ. ಎಸ್.ಸಿ. ಪಿ, ಟಿ.ಎಸ್.ಪಿ ಹಣವನ್ನು 40 ಸಾವಿರ ಕೋಟಿ ಹಣವನ್ನು ಗ್ಯಾರೆಂಟಿ ಯೋಜನೆಗೆ ನೀಡಿದ್ದಾರೆ. ಎಲ್ಲ ಕಡೆ ಭ್ರಷ್ಟಾಚಾರ ಇದೆ. ಮುಖ್ಯಮಂತ್ರಿಗಳ ಮೂಗಿನ ಕೆಳಗಡೆ ನಡೆಯುತ್ತಿದೆ. ಯಾರು ಹೆಚ್ಚು ಲೂಟಿ ಮಾಡುತ್ತಾರೆ ಎನ್ನುವ ಪೈಪೋಟಿ ನಡೆಯುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಿಎಂ ಉತ್ತರ ಕೊಟ್ಟಿದ್ದಾರೆ. ಆರ್ಥಿಕವಾಗಿ ಸುಭದ್ರವಾಗಿದ್ದರೆ 15 ಸಾವಿರ ಕೋಟಿ ಹಣ ಯಾಕೆ ಖರ್ಚು ಮಾಡಿಲ್ಲ. ಸುಳ್ಳನ್ನು ನೂರು ಸಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ ಎಂದು ಕುಟುಕಿದರು.
ಕುರ್ಚಿಗಾಗಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ:
ರಾಜಕೀಯವಾಗಿ ಸುಭದ್ರವಾಗಿದ್ದರೆ ಪ್ರತಿ ದಿನ ಯಾಕೆ ಕುರ್ಚಿ ಸಲುವಾಗಿ ಪೈಪೋಟಿ ನಡೆಯುತ್ತಿದೆ. ಈಗ ಚುನಾವಣೆ ಬಂದಿದೆ ಅಂತ ವಿರಾಮ ಸಿಕ್ಕಿದೆ. ಮೇ ತಿಂಗಳಲ್ಲಿ ಕುರ್ಚಿಗಾಗಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ ನಡೆಯಲಿದೆ. ದಾವಣಗೆರೆ ಮತದಾರರಿಗೆ ಸದವಕಾಶ ಬಂದಿದೆ ಈ ಭ್ರಷ್ಟ ಸರ್ಕಾರ ಕಿತ್ತು ಹಾಕಿ ಮತ್ತೊಮ್ಮೆ ಜನಪರವಾದ ಬಿಜೆಪಿ ಅಧಿಕಾರಕ್ಕೆ ಬರಲು ಮತ ನೀಡಬೇಕು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಬಡ ಕುಟುಂಬದಿಂದ ಬಂದಿದ್ದಾರೆ. ಅತ್ಯಂತ ಸರಳ ವ್ಯಕ್ತಿ. ಕಾಂಗ್ರೆಸ್ ನವರು ಸಾದಿಕ್ ಪೈಲ್ವಾನ್ ಮೇಲೆ ಜಾದು ಮಾಡಿಸಿ ಕುಸ್ತಿ ನಡೆಯುವ ಮುಂಚೆ ಸೊಲು ಒಪ್ಪಿಕೊಂಡರು. ನಮ್ಮ ಪೈಲ್ವಾನ ಶ್ರೀನಿವಾಸ್ ದಾವಣಗೆರೆಯಲ್ಲಿ ಜಂಗಿನಿಕಾಲಿ ಕುಸ್ತಿಯಲ್ಲಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಶಾಸಕ ಸಿ.ಸಿ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ, ಭಾರತಿ ಶೆಟ್ಟಿ, ಅಭ್ಯರ್ಥಿಯಾದ ಶ್ರೀನಿವಾಸ ದಾಸಕರಿಯಪ್ಪ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ರಾಜಶೇಖರ, ಮುಖಂಡರುಗಳಾದ ಯಶವಂತರಾವ್ ಜಾಧವ, ಅಜಯ ಕುಮಾರ್ , ಡಾ ನಾಗಪ್ರಕಾಶ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು















