ಬೆಂಗಳೂರು: ಸುಮಾರು 4 ಲಕ್ಷ ಜನರಿರುವ ಹವ್ಯಕ ಸಮಾಜ ಅಷ್ಟು ದೊಡ್ಡ ಸಮುದಾಯವಲ್ಲ. ಆದರೆ ಅವರುಗಳ ಸಾಧನೆ ಮಾತ್ರ ಗಗನಮುಖಿಯಾಗಿದೆ ಎಂದು ಕವಿ ವಿಮರ್ಶಕ ಚಿಂತಾಮಣಿ ಕೊಡ್ಲೆಕೆರೆ ಹೇಳಿದರು.
ಭಾನುವಾರ ಹವ್ಯಕ ಮಾಸ ಪತ್ರಿಕೆಯ ವಜ್ರ ಮಹೋತ್ಸವ ಮತ್ತು ವಿಶೇಷಾಂಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಡು ಬಡತನವನ್ನು ಕಂಡ, ಅತಿ ಸಣ್ಣ ಸಮುದವಾದ ಹವ್ಯಕರು ರಾಜಕೀಯವಾಗಿ ನಿರ್ಣಾಯಕವಲ್ಲ ಆದರೂ ಹಲವು ನಾಯಕರು ನಮ್ಮ ಸಮಾಜದಿಂದ ಬಂದಿದ್ದಾರೆ. ಕ್ರೀಡೆ, ಕಲಾ ಪ್ರಕಾರಗಳಲ್ಲಿ, ಯಕ್ಷಗಾನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆಯನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಿದರು.
ಹವ್ಯಕರದ್ದು ಮೂಲತಃ ಕೃಷಿ ಪ್ರಧಾನ ಸಮಾಜವಾಗಿದೆ. ಅತ್ಯಂತರ ಹಳೆಯ ಕನ್ನಡವಾದ ಹವಿಗನ್ನಡವನ್ನು ಪೋಷಿಸಿಕೊಂಡು ಬಂದವರಾಗಿದ್ದೇವೆ. ನಮ್ಮ ಹಿರೀಕರು ಪೋಷಿಸಿಕೊಂಡು ಬಂದ ಭಾಷೆ ಇದಾಗಿದೆ. ಬದುಕಿನ ಅನುಭವದ ಭಾಷೆ ಇದಾಗಿದೆ. ಗಾದೆ ಮಾತುಗಳನ್ನು ಅಳವಡಿಸಿಕೊಂಡು ಮಾತನಾಡುವ ವಿಶೇಷ ಭಾಷೆ ಇದಾಗಿದೆ. ಸರ್ಕಾರ ಈ ವಿಶಿಷ್ಟ ಭಾಷೆಯನ್ನು ಉಳಿಸಿ ಬೆಳೆಸಲು ಅಕಾಡೆಮಿ ಸ್ಥಾಪಿಸಿರುವುದು ಸ್ವಾಗತಾರ್ಹವಾಗಿದೆ ಎಂದು ವಿಶ್ಲೇಷಿಸಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಸಂಪ್ರದಾಯ ಇಲ್ಲವಾಗಿದೆ. ಸಂಸ್ಕೃತಿಯನ್ನು ತಿಳಿಹೇಳಲು ಹೊರಟರೆ ಜಾತಿವಾದಿಗಳು ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕಿದೆ. ಇತ್ತೀಚೆಗೆ ಹವಿಗನ್ನಡವನ್ನು ಅಧಿಕೃತವಾಗಿ ಸರ್ಕಾರ ಗುರುತಿಸಿ ಅಕಾಡೆಮಿ ಸ್ಥಾಪಿಸಲು ಹೊರಟಿರುವುದು ಸಮಾಧಾನಕರವಾಗಿದ್ದರೂ, ಒಟ್ಟಾರೆ ಹಿಂದೂ ಸಮಾಜದ ಆಶಯವನ್ನು ಕಡೆಗಣಿಸಿರುವುದು ವಿಷಾಧಾನಿಯವಾಗಿದೆ ಎಂದು ಮಹಾಲಕ್ಷ್ಮಿ ಲೇಔಟ್ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಾಘವೇಂದ್ರ ಭಟ್ ವಿಷಾಧ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ ಗಿರಿಧರ್ ಖಜೆ, ಕರ್ನಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್ ರಾಜ, ಆರ್ಥಿಕ ತಜ್ಞ ಗೋಪಾಲಕೃಷ್ಣ ಹೆಗಡೆ ಉಪಸ್ಥಿತರಿದ್ದರು.















