ಕರಕುಶಲ ವಸ್ತು ಉತ್ಪಾದಕರಿಗೆ ಎಕ್ಸಿಮ್ ಬ್ಯಾಂಕ್ ಸಹಾಯ ಹಸ್ತ: ರಾಹುಲ್ ಶಿಂಧೆ

WhatsApp
Telegram
Facebook
Twitter
LinkedIn

ಬೆಳಗಾವಿ: ಜಿಲ್ಲೆಯ ಕರಕುಶಲಕರ್ಮಿಗಳು, ರೈತರು, ನೇಕಾರರು, ಕುಂಬಾರರು ಮತ್ತು ಇತರ ಸಣ್ಣ ಗೃಹಕೈಗಾರಿಕೆಗಳ ವ್ಯಾಪಾರ-ವಹಿವಾಟು ವೃದ್ಧಿಯಾಗುವ ನಿಟ್ಟಿನಲ್ಲಿ ಸಹಾಯಧನ ಹಾಗೂ ಸಾಲಸೌಲಭ್ಯ ಒದಗಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ ಹಾಗೂ ಸರ್ಕಾರಿ ಸಂಸ್ಥೆಯಾದ ಇಂಡಿಯಾ ಎಕ್ಸಿಮ್ ಬ್ಯಾಂಕ್ ಜೊತೆಗೂಡಿ ವೇದಿಕೆ ಕಲ್ಪಿಸಿದ್ದು, ಕರಕುಶಲಕರ್ಮಿಗಳ ಗುಂಪುಗಳು ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹೇಳಿದರು.

ಜಿಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ ಹಾಗೂ ಇಂಡಿಯಾ ಎಕ್ಸಿಮ್ ಬ್ಯಾಂಕ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಖಾನಾಪೂರದ ಕುಂಬಾರಿಕೆ, ಅಥಣಿ ಕೊಲ್ಲಾಪುರಿ ಪಾದರಕ್ಷೆ, ಹುಕ್ಕೇರಿಯ ಚಿಕ್ಕಾಲಗುಡ್ಡ ಕೌದಿ ತಯಾರಿಕೆ, ಬೆಳಗಾವಿ ಸಂಜೀವಿನಿ ಶಾವಿಗೆ ಸೇರಿ ಜಿಲ್ಲೆಯಲ್ಲಿ ವೈವಿಧ್ಯಮಯ ವಸ್ತು ಹಾಗೂ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆದರೆ, ಕರಕುಶಲಕರ್ಮಿಗಳಿಗೆ ತಮ್ಮ ವಸ್ತು-ಉತ್ಪನ್ನಗಳನ್ನು ವಿಭಿನ್ನವಾಗಿ ತಯಾರಿಸಲು ಹಾಗೂ ಬೇರೆ ರಾಜ್ಯ ಮತ್ತು ಹೊರದೇಶಗಳಿಗೆ ಮಾರಾಟ ಮಾಡಲು ತರಬೇತಿ ಹಾಗೂ ಆರ್ಥಿಕ ಸಹಾಯವನ್ನು ಎಕ್ಸಿಮ್ ಬ್ಯಾಂಕ್ ಮಾಡಲಿದೆ ಎಂದು ಮಾಹಿತಿ ನೀಡಿದರು.

ಕರಕುಶಲಕರ್ಮಿಗಳಿಗೆ ನೆರವು:

ಮಹಿಳಾ ಸಂಘಗಳು, ಕರಕುಶಲಕರ್ಮಿಗಳು, ನೇಕಾರರು, ಕುಂಬಾರರು ಹಾಗೂ ರೈತರು ಗುಂಪು ಮಾದರಿಯಲ್ಲಿ ಉದ್ದಿಮೆಗಳನ್ನು ವಿಭಿನ್ನವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ತರಬೇತಿ ನೀಡುವುದು ಹಾಗೂ ಸಾಲಸೌಲಭ್ಯ ಒದಗಿಸುವ ಮೂಲಕ ಎಕ್ಸಿಮ್ ಬ್ಯಾಂಕ್ ಸಹಕಾರ ನೀಡುತ್ತಿದೆ. ಈಗಾಗಲೇ ದೇಶದ ವಿವಿಧೆಡೆ ಅನೇಕರಿಗೆ ನೆರವಾಗಿದೆ. ಜಿಲ್ಲೆಯ ಕರಕುಶಲಕರ್ಮಿಗಳು ಇದರ ಸೌಲಭ್ಯ ಪಡೆಯಬೇಕು ಹಾಗೂ ಬೇರೆ ಬ್ಯಾಂಕ್ ಗಳು ಕೂಡ ಎಕ್ಸಿಮ್ ಬ್ಯಾಂಕ್ ರೀತಿಯಲ್ಲಿ ನೆರವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಅಭಿಪ್ರಾಯ ವ್ಯಕ್ತಪಡಿಸಿದರು.

ತರಬೇತಿ-ಸಾಲಸೌಲಭ್ಯ:

ಎಕ್ಸಿಮ್ ಬ್ಯಾಂಕ್ ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ರವಿದಾಸ ಪ್ಯಾಗೆ ಮಾತನಾಡಿ, ಎಕ್ಸಿಮ್ ಬ್ಯಾಂಕ್ ಚಿಕ್ಕ ಉದ್ದಿಮೆದಾರರಿಂದ ದೊಡ್ಡಮಟ್ಟದ ಉದ್ಯಮಿಗಳಿಗೂ ಕೂಡ ನೆರವು ನೀಡುತ್ತಿದೆ. ಕೇವಲ ವ್ಯಕ್ತಿಗಳಿಗೆ ನೆರವು ನೀಡುವ ಬದಲಾಗಿ, ಸಂಘ ಅಥವಾ ಒಂದು ಗುಂಪಿಗೆ ಬ್ಯಾಂಕ್ ಸಾಲಸೌಲಭ್ಯ ಹಾಗೂ ತರಬೇತಿ ನೀಡುತ್ತಿದೆ. ಆಸಕ್ತ ಕರಕುಶಲಕರ್ಮಿಗಳು ತಮ್ಮ ಸಂಘ ಅಥವಾ ಉತ್ಪನ್ನದ ಮಾಹಿತಿಯೊಂದಿಗೆ ನೇರವಾಗಿ ಬ್ಯಾಂಕ್ ಗೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಎಪ್ರಿಲ್ ನಂತರ ಪರಿಶೀಲಿಸಿ, ಅರ್ಹ ಸಂಘ-ಸಂಸ್ಥೆಗಳಿಗೆ ಸಾಲಸೌಲಭ್ಯದ ನೆರವು ನೀಡಲಾಗುವುದು. ಅಗತ್ಯ ತರಬೇತಿಯನ್ನು ಕೂಡ ನೀಡಲಾಗುವುದು ಎಂದು ತಿಳಿಸಿದರು.

ಬಿದ್ರಿ ಕಲೆಗೆ ಎಕ್ಸಿಮ್ ಬ್ಯಾಂಕ್ ನೆರವು:

ಹಿರಿಯ ಪತ್ರಕರ್ತರಾದ ಹೃಷಿಕೇಶಬಹದ್ದೂರ ದೇಸಾಯಿ ಅವರು ಮಾತನಾಡಿ, ಎಕ್ಸಿಮ್ ಬ್ಯಾಂಕ್ ದೇಶದ ವಿವಿಧ ವಸ್ತು-ಉತ್ಪನ್ನಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ನೆರವಾಗಿದೆ. ಅದೇ ರೀತಿ ಬೀದರ್ ನ ಬಿದ್ರಿ ಕಲೆ ವಸ್ತುಗಳು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಎಕ್ಸಿಮ್ ಬ್ಯಾಂಕ್ ಕೊಡುಗೆ ಅಪಾರವಾಗಿದೆ. ಅಲ್ಲಿನ ಕರಕುಶಲಕರ್ಮಿಗಳಿಗೆ ಬಿದ್ರಿ ಕಲೆಯಿಂದ ವಿಭಿನ್ನವಾಗಿ ವಸ್ತುಗಳನ್ನು ಸಿದ್ಧಪಡಿಸಲು ತರಬೇತಿ ನೀಡುವುದರ ಜೊತೆಗೆ ಅವರಿಗೆ ಆರ್ಥಿಕವಾಗಿ ನೆರವಾಗಿ, ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಎಕ್ಸಿಮ್ ಬ್ಯಾಂಕ್ ನೆರವು ನೀಡಿತ್ತು ಎಂದು ನೆನೆದರು.

ಕರಕುಶಲಕರ್ಮಿಗಳೊಂದಿಗೆ ಸಂವಾದ:

ಸಭೆಯ ನಂತರ ಖಾನಾಪುರ, ಹುಕ್ಕೇರಿ, ರಾಮದುರ್ಗ, ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕ ಸೇರಿ ವಿವಿಧ ತಾಲೂಕುಗಳಿಂದ ಭಾಗವಹಿಸಿದ್ದ ಸ್ವಸಹಾಯ ಸಂಘದ ಸದಸ್ಯರು, ರೈತರು, ನೇಕಾರರು, ಕುಂಬಾರರು ಹಾಗೂ ಇನ್ನಿತರ ಕರಕುಶಲಕರ್ಮಿಗಳೊಂದಿಗೆ ಎಕ್ಸಿಮ್ ಬ್ಯಾಂಕ್ ಅಧಿಕಾರಿಗಳು ಸಂವಾದ ನಡೆಸಿ ಯಾವ ರೀತಿಯಲ್ಲಿ ಬ್ಯಾಂಕ್ ನೆರವು ನೀಡಲಿದೆ ಎಂಬುದರ ಮಾಹಿತಿ ನೀಡಿದರು.

ಈ ವೇಳೆ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ್, ಸಹಾಯಕ ಯೋಜನಾಧಿಕಾರಿ ಭಾಗ್ಯಶ್ರೀ ಜಹಾಗೀರದಾರ, ಎಕ್ಸಿಮ್ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಗಳಾದ ಗಣೇಶ ರಾಮ್, ಪ್ರಿನ್ಸ್ ಮೆಹರಾ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ಸ್ವಸಹಾಯ ಸಂಘದ ಸದಸ್ಯರು, ಕರಕುಶಲಕರ್ಮಿಗಳು, ರೈತರು, ಇನ್ನಿತರರು ಭಾಗವಹಿಸಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon