ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಪ್ರಧಾನ ಸೇವಕನೆಂಬ ಭಾವನೆಯೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಭಾರತವು 2047ನೇ ಇಸವಿಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಹೊಂದಲು ಪುರುಷರ ಜೊತೆಜೊತೆಯಲ್ಲಿ ಮಹಿಳೆಯರ ಪಾತ್ರವೂ ಬಹಳ ಮಹತ್ವವನ್ನು ಹೊಂದಿದೆ ಎಂಬ ನಂಬಿಕೆ ಅವರದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮಂಗಳವಾರ ಬೆಂಗಳೂರು ಮಹಾನಗರ ಮಹಿಳಾ ಮೋರ್ಚಾ ವತಿಯಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಬಡವರ ಮನೆಯ ಹೆಣ್ಣುಮಗು ಶಾಪ ಎಂದು ತಿರಸ್ಕರಿಸುವ ಕಾಲಘಟ್ಟವಿತ್ತು. ಆ ಮಗು ಶಾಪವಲ್ಲ; ಭಾಗ್ಯಲಕ್ಷ್ಮಿ ಎಂದು ತಿಳಿಸಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ್ದರು. ಆ ಮಗುವಿಗೆ ಬದುಕು ಕಟ್ಟಿಕೊಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿತ್ತು ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ, ಅನಾನುಕೂಲತೆ ಕಾರಣದಿಂದ 5, 6 ಅಥವಾ 7ನೇ ತರಗತಿ ಬಳಿಕ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಮನೆಯಲ್ಲೇ ಉಳಿಯುವ ಸ್ಥಿತಿ ಇತ್ತು. ಯಡಿಯೂರಪ್ಪನವರ ಬಿಜೆಪಿ ಸರ್ಕಾರದ ಬೈಸಿಕಲ್ ಯೋಜನೆ ಮೂಲಕ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ತಪ್ಪಿತು ಎಂದು ವ್ಯಾಖ್ಯಾನಿಸಿದರು.
ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿದ ಘಟನೆ:
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿತ್ತು. ಮುಖ್ಯಮಂತ್ರಿ, ಗೃಹ ಸಚಿವರು, ಎಲ್ಲ ಸಚಿವರು ಬೆಳಗಾವಿಯಲ್ಲಿದ್ದರು. ಬೆಳಗಾವಿಯ ಸುವರ್ಣಸೌಧದ ಕೇವಲ 10 ಕಿಮೀ ದೂರದಲ್ಲಿ ಹಾಡಹಗಲೇ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ನಡೆದಿದೆ; ಆದರೆ ಮುಖ್ಯಮಂತ್ರಿಗಳು ಕೈಚೆಲ್ಲಿ ಕೂತಿದ್ದರು. ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡಿರಲಿಲ್ಲ; ಬಿಜೆಪಿ ರಾಜ್ಯ ಅಧ್ಯಕ್ಷನಾಗಿ ನಾನು, ಆ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿದ್ದೇ ಎಂದು ವಿವರಿಸಿದರು.
ಮಹಿಳೆಯರಲ್ಲಿ ಜಾಗೃತಿ ಹೆಚ್ಚಾಗಬೇಕು:
ಮಹಿಳೆಯರಲ್ಲಿ ಜಾಗೃತಿ ಹೆಚ್ಚಾಗಬೇಕಿದೆ, ತಾಯಂದಿರು ಕೇವಲ ಅಡುಗೆಮನೆಗೆ ಸೀಮಿತಾಗಿ ಇರಬಾರದು; ಸಮಾಜದ ಮುಂಚೂಣಿಯಲ್ಲಿ ಬರಬೇಕೆಂಬ ಇಚ್ಛಾಶಕ್ತಿ ಇರಬೇಕು. ಅದರ ಪರಿಣಾಮವೇ ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ನೇತೃತ್ವ ವಹಿಸುವಂಥ ಸಾಧನೆ ಆಗುತ್ತಿದೆ. ಮೋದಿಜೀ ಅವರು ಮಹಿಳಾ ಮೀಸಲಾತಿಯ ವಿಚಾರದಲ್ಲಿ ಪ್ರಾಮಾಣಿಕ ಕಳಕಳಿ ತೋರಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆ ದ್ರೌಪದಿ ಮುರ್ಮು ಅವರನ್ನು ಗೌರವಾನ್ವಿತ ರಾಷ್ಟ್ರಪತಿಗಳಾಗಿ ಮಾಡಿ ತಮ್ಮ ಇಚ್ಛಾಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಭಾರತದಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ಗೌರವ:
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೇಶಾದ್ಯಂತ ಮತ್ತು ವಿವಿಧ ದೇಶಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಮಹಿಳೆಯರು ಮಾಡಿದ ಸಾಧನೆಯನ್ನು ಗೌರವಿಸುವುದು ಒಂದು ಕಡೆ ನಡೆದರೆ, ಲಿಂಗ ಸಮಾನತೆಗೆ ಒತ್ತು ಕೊಡುವುದು, ಮಹಿಳಾ ಹಕ್ಕುಗಳ ಜಾಗೃತಿಯ ಕೆಲಸವೂ ಈ ದಿನ ನಡೆಯುತ್ತದೆ. ಭಾರತದಲ್ಲಿ ಹಿಂದಿನಿಂದಲೂ ಮಹಿಳೆಯರನ್ನು ಬಹಳ ಗೌರವದಿಂದ ಕಾಣಲಾಗುತ್ತಿತ್ತು. ಇಡೀ ಜಗತ್ತಿನಲ್ಲಿ ತಾಯಿಯನ್ನು ದೇವರ ಸ್ಥಾನದಲ್ಲಿ ನೋಡುವ ಪುಣ್ಯಭೂಮಿ ಭಾರತ. ಶರಣೆ ಅಕ್ಕಮಹಾದೇವಿಗೆ ಜನ್ಮ ಕೊಟ್ಟ ಈ ಕನ್ನಡನಾಡು, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಸೇರಿ ಅನೇಕ ಸಾಧಕರನ್ನು ನಾಡಿಗೆ ನೀಡಿದೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಸಿ.ಮಂಜುಳಾ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಭಾರತಿ ಮುಗ್ದಂ, ಮಹಿಳಾ ಮೋರ್ಚಾ ನಿಕಟಪೂರ್ವ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಆಯೋಗದ ನಿಕಟಪೂರ್ವ ರಾಜ್ಯ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.















