33% ಮಹಿಳಾ ಮೀಸಲು ಸಂಸದೀಯ ಹೆಗ್ಗಳಿಕೆ ಹೆಚ್ಚಿಸಲಿದೆ: ಹೆಚ್.ಡಿ. ಕುಮಾರಸ್ವಾಮಿ

WhatsApp
Telegram
Facebook
Twitter
LinkedIn

ಬೆಂಗಳೂರು: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನೀಡಿರುವ ಶೇ.33% ಮೀಸಲು ಮುಂದಿನ ದಿನಗಳಲ್ಲಿನ ಸಂಸದೀಯ ವ್ಯವಸ್ಥೆಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ನನಗೆ ಇರುವ ಮಾಹಿತಿ ಪ್ರಕಾರ 2032-33ರಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಬರಬಹುದು ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಭಾನುವಾರ ನಗರದ ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 33% ಮಹಿಳಾ ಮೀಸಲಾತಿ ಜಾರಿಗೆ ಬಂದರೆ ವಿಧಾನಸಭೆಯಲ್ಲಿ 75 ಜನ ಮಹಿಳಾ ಶಾಸಕಿಯರು ಇರುತ್ತಾರೆ. ಎಲ್ಲ‌ ಪಕ್ಷಗಳ ಮಹಿಳೆಯರು ಮನಸು ಮಾಡಿದರೆ ಮಹಿಳಾ ಮುಖ್ಯಮಂತ್ರಿಯೇ ಆಗಬಹುದು. ಅಂಥ ಅವಕಾಶ‌ ಮೀಸಲಾತಿಯಿಂದ ಸಾಧ್ಯವಾಗುತ್ತದೆ ಎಂದರು.

ನರೇಂದ್ರ ಮೋದಿ ಅವರ ಸಂಕಲ್ಪದಿಂದ ಇವತ್ತು ರಾಷ್ಟ್ರದಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಬರುತ್ತಿದೆ. ಅದರ ಕನಸು ಕಂಡಿದ್ದವರು ದೇವೇಗೌಡರು. ಮಹಿಳೆಯರ ಪರವಾಗಿ ದೇವೇಗೌಡರು ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಈ ರಾಜ್ಯದಲ್ಲಿ ಪ್ರಥಮ ಬಾರಿಗೆ 70% ಮಹಿಳಾ ಶಿಕ್ಷಕರನ್ನು ನೇಮಿಸಿಕೊಂಡಿದ್ದು ದೇವೇಗೌಡರು ಎಂದು ನೆನೆದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳಾ‌ ಮೀಸಲಾತಿ 50%ರಷ್ಟು ನೀಡಿದ್ದು ದೇವೇಗೌಡರು. 1996ರಲ್ಲಿ ದೇವೇಗೌಡರು ಪ್ರಧಾನಿ ಆಗಿ ಹೋದಮೇಲೆ ರಾಜ್ಯಸಭೆಯಲ್ಲಿ ಮಹಿಳೆಯರಿಗೆ 33% ಮೀಸಲು ನೀಡುವ ವಿಧೇಯಕ ಮಂಡಿಸಿದ್ದರು. ಆದರೆ, ಸಮಾಜವಾದಿ ಪಕ್ಷ, ಆರ್ ಜೆಡಿ ಬೆಂಬಲ ನೀಡದ ಕಾರಣಕ್ಕೆ ಲೋಕಸಭೆಯಲ್ಲಿ ಆ ವಿಧೇಯಕ ಅಂಗೀಕಾರ ಆಗಲಿಲ್ಲ. ಆದರೆ, ದೈವ ಕೃಪೆ ಇತ್ತು. ನಾವು ಇಂದು ಎನ್.ಡಿ. ಎ ಮೈತ್ರಿಯಲ್ಲಿ ಇದ್ದೇವೆ. ದೇವೇಗೌಡರ ಕನಸನ್ನು ಮೋದಿಯವರು ಲೋಕಸಭೆಯಲ್ಲಿ ನನಸು ಮಾಡಿದರು ಎಂದು ಸಂತಸ ವ್ಯಕ್ತಪಡಿಸಿದರು.

ಮಹಿಳೆಯರು ಎತ್ತರಕ್ಕೆ ಬೆಳೆಯುವ ಅವಕಾಶವನ್ನು ಮೋದಿ ಅವರು ನೀಡಿದ್ದಾರೆ. ಆದರೆ, ನಿಮ್ಮ ಅಧಿಕಾರವನ್ನು ನಿಮ್ಮ ಮನೆಯವರು ಕಸಿಯುವ ಪರಿಸ್ಥಿತಿ ಬರಬಾರದು. ಮಹಿಳೆಯರು ಅಡುಗೆ ಮನೆಗೆ, ದನಕರು ಸಾಕೋದಕ್ಕೆ ಸೀಮಿತ ಅಂತ ಹಿಂದಿನ ದಿನಗಳಲ್ಲಿ ಭಾವಿಸಲಾಗಿತ್ತು. ಆಗ ಮಹಿಳೆಯರ ಹಕ್ಕುಗಳನ್ನು‌ ಮೊಟಕುಗೊಳಿಸಲಾಗಿತ್ತು. ಈಗ ಮಹಿಳೆಯರು ಎಲ್ಲಾ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ವಿಜ್ಞಾನ ತಂತ್ರಜ್ಞಾನ, ಬಾಹ್ಯಾಕಾಶ, ಸೇನೆ, ಉದ್ಯಮ ಸೇರಿದಂತೆ ಎಲ್ಲ ಕಡೆಯೂ ಮಹಿಳೆಯರು ಇದ್ದಾರೆ ಎಂದು ಶ್ಲಾಘಿಸಿದರು.

ಜಿಬಿಎನಲ್ಲಿ 50% ಮಹಿಳಾ ಮೀಸಲಾತಿ ಘೋಷಣೆ ಆಗಿದೆ. 170-180 ಮಹಿಳೆಯರು ಸ್ಪರ್ಧೆ ಮಾಡಬೇಕಾಗುತ್ತದೆ. ನಮ್ಮಲ್ಲಿ‌ ಮಹಿಳೆಯರಿಗೆ ಶಕ್ತಿ ತುಂಬುವುದು, ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು. ಈಗಿನಿಂದಲೇ ಚುನಾವಣೆಗೆ ತಯಾರಿ ನಡೆಸಬೇಕು. ಜಿಬಿಎ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಅದಕ್ಕೆ ಮಹಿಳಾ ಕಾರ್ಯಕರ್ತರು ಸಜ್ಜಾಗಬೇಕು ಎಂದು ಒತ್ತಿ ಹೇಳಿದರು.

ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ. ಇಂಥ ವ್ಯವಸ್ಥೆಗೆ ಯಾರು ಕಾರಣ ಅಂತ ನಗರದ ಜನತೆಗೆ ತಿಳಿಸಬೇಕು. ನಮ್ಮ ಪಕ್ಷದ ಮಹಿಳೆಯರು ಸಕ್ರಿಯರಾಗಿ ಕೆಲಸ ಮಾಡಬೇಕು. ನಮ್ಮಿಂದ, ನಮ್ಮ‌ ಮುಖಂಡರಿಂದ ಎಲ್ಲ ಸಹಕಾರ ಸಿಗಲಿದೆ. ಜೆಡಿಎಸ್‌ನಿಂದ ಹೆಚ್ಚಿನ ಮಹಿಳೆಯರು ಸ್ಪರ್ಧಿಸಬೇಕು, ಹೆಚ್ಚಿನ‌ ಮಹಿಳೆಯರು ಗೆದ್ದು ಬರಬೇಕು ಎಂದು ಕರೆ ನೀಡಿದರು

ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಜೆಡಿಎಸ್ ಜಿಬಿಎ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಜವರಾಯಿ ಗೌಡ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮುಂತಾದವರು ಹಾಜರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon