ಬೆಂಗಳೂರು: ರಾಷ್ಟ್ರೋತನದ ಪ್ರಬಂಧ ಸ್ಪರ್ಧೆಗಳು ಅದರದ್ದೇ ಆದ ಮೌಲ್ಯಗಳನು ಒಳಗೊಂಡಿದೆ. ಯುವ ಜನರಿಗಾಗಿ ಏರ್ಪಡಿಸುವ ಈ ರೀತಿಯ ಪ್ರಬಂಧ ಸ್ಪರ್ಧೆಗಳು ಇಂದಿನ ಸಮಾಜಕ್ಕೆ ತುಂಬಾ ಅವಶ್ಯವಾಗಿದ್ದು, ಸಮಾಜದಲ್ಲಿ ಮರೆಯಾಗುತ್ತಿರುವ ಮೌಲ್ಯಗಳನ್ನು ತಿಳಿಸಲು ಇದು ಅವಶ್ಯಕ. ಈ ಕೆಲಸವನ್ನು ಉತ್ಥಾನ ಮಾಸಪತ್ರಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಮಹಾಬಲ ಸೀತಾಳಬಾವಿ ತಿಳಿಸಿದರು.
ಶನಿವಾರ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಾರ್ಷಿಕ ಉತ್ಥಾನ ಪ್ರಬಂಧ ಸ್ಪರ್ಧೆ ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವ ಶಿಲ್ಪ ಸಭಾಂಗಣದಲ್ಲಿ ನಡೆಯಿತು. ಬಹುಮಾನಗಳನ್ನು ವಿತರಿಸಿ ಮಾತನಾಡಿದ ಮಹಾಬಲ ಸೀತಾಳಬಾವಿ ಅವರು, ರಾಷ್ಟ್ರೋತ್ಥಾನ ಮತ್ತು ಉತ್ಥಾನ ಸಂಸ್ಥೆಗಳ ಜೊತೆಗೆ ನಂಗೂ ತುಂಬ ಹಳೆಯ ನಂಟಿದೆ. ಇಲ್ಲಿಯ ಗ್ರಂಥಾಲಯಕ್ಕೆ ಭೇಟಿ ನೀಡಿದ ಅನುಭವಗಳು ಸಾಕಷ್ಟಿವೆ. ಬೇರೆಲ್ಲೂ ಸಿಗದ ಹಲವಾರು ಪುಸ್ತಕಗಳು ಇಲ್ಲಿ ದೊರೆಯುತ್ತವೆ ಎಂದು ತಮ್ಮ ನೆನಪುಗಳನ್ನು ಮೆಲಕು ಹಾಕಿದರು.
ಎಲ್ಲಾ ಪತ್ರಿಕೆಗಳು ಇಂದು ಮಾರುಕಟ್ಟೆಯ ಮಾರ್ಗದಲ್ಲಿ ನಡೆಯುತ್ತಿವೆ. ಆದರೆ 60 ವರ್ಷಕ್ಕೂ ಹೆಚ್ಚಿನ ಕಾಲ ಉತ್ಥಾನ ಪತ್ರಿಕೆ ತನ್ನ ಮಾರ್ಗವನ್ನು ಬದಲಾಯಿಸಿಲ್ಲ. ಯಾವ ಆಶಯಕ್ಕೆ ಆರಂಭವಾಯಿತೋ ಅದೇ ಆಶಯವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಸಾಮಾಜಿಕ ಮೌಲ್ಯ, ದೇಶ ಪ್ರೇಮ ಹಾಗೂ ಜೀವನದ ಆದರ್ಶಗಳನ್ನು ಉತ್ಥಾನ ಜನರಿಗೆ ತಲುಪಿಸುತ್ತಿದೆ. ಸಂಸ್ಕೃತಿಯ ತತ್ವ ವನ್ನು ಇನ್ನೂ ಉಳಿಸಿಕೊಂಡಿದೆ. ಆದರೆ ಇದೇ ಸಮಯವನ್ನು ದಾಟಿದ ಹಲವು ಪತ್ರಿಕೆಗಳು ತಮ್ಮ ತತ್ವಗಳನ್ನು ಮರೆಯುತ್ತಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದಿನ ದಿನಮಾನದಲ್ಲಿ ಪತ್ರಿಕೆಗಳು ಸಂದಿಗ್ಧ ಪರಿಸ್ಥಿಯಲ್ಲಿವೆ. ಪತ್ರಿಕೋದ್ಯಮ ಇಂದು ಸಂಪೂರ್ಣ ಮಾರುಕಟ್ಟೆಯ ದಾರಿಯಲ್ಲಿ ಸಾಗುತ್ತಿದೆ. ಪುಟಗಳ ಸಂಖ್ಯೆ ಕಡಿಮೆಯಾಗಿದೆ, ಎಲ್ಲ ಪ್ರತಿಕೆಗಳು ಜಾಹೀರಾತುಗಳ ಸುಳಿಯಲ್ಲಿ ಸಿಕ್ಕಿ ಹಾಕಿ ಕೊಂಡಿರುವುದು ವಿಷಾಧನೀಯ ಎಂದು ದುಃಖ ವ್ಯಕ್ತಪಡಿಸಿದರು.
ಸಮಾಜಸೇವಕರು ಹಾಗೂ ಉಪನ್ಯಾಸಕರಾದ ರಾಜೇಶ್ ಪದ್ಮಾರ್ ಮಾತನಾಡಿ, ನಮ್ಮಲ್ಲಿ ಇರುವ ಬರವಣಿಗೆಯ ಪ್ರತಿಭೆಯನ್ನು ಇನ್ನಷ್ಟು ವಿಸ್ತಾರಗೊಳಿಸುವುದು ಪ್ರಬಂಧ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ. ಒಂದು ವಿಚಾರವನ್ನು ಗ್ರಹಿಸಿ, ಅದನ್ನು ಬರವಣಿಗೆ ರೂಪಕ್ಕೆ ತರುವ ಸಾಮರ್ಥ್ಯ ಎಲ್ಲರಲ್ಲಿ ಇರುತ್ತದೆ. ಝೆನ್ಸ ಝೀ ಸಂವಹನದ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸುತ್ತದೆ. ಯಾವುದೇ ವೃತ್ತಿಗೆ ಹೋದರೂ ಬರವಣಿಗೆಯನ್ನು ತಮ್ಮೊಟ್ಟಿಗೆ ಕರೆದುಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಯಾವ ದೇವರನ್ನು ಪೂಜಿಸಲಾಗುತ್ತದೆ ಎನ್ನುವುದರ ಮೇಲೆ ಹಿಂದುತ್ವ ನಿಂತಿಲ್ಲ. ಭಾರತ ದೇಶದಲ್ಲಿ ಇರುವವರು ಎಲ್ಲರೂ ಹಿಂದೂಗಳೇ. ಹಿಂದೂ ಎನ್ನುವುದು ಒಂದು ಜೀವನದ ದೃಷ್ಟಿಯಾಗಿದೆ, ಜೀವ ಪದ್ಧತಿಯಾಗಿದೆ. ಜೀವನವನ್ನು ಹೀಗೆ ನಡೆಸುತ್ತೇವೆ ಎನ್ನುವುದೇ ಹಿಂದುತ್ವವಾಗಿದೆ. ಸಂಘ ಸರ್ವಯಾಪ್ತಿ ಮತ್ತು ಸರ್ವ ಸ್ಪರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಎಂಬ ವಿಷಯವನ್ನು ಅಖಿಲ ಭಾರತೀಯ ದೃಷ್ಟಿಕೋನವನ್ನು ಸಂಘ ಒಳಗೊಂಡಿದೆ ಎಂದು ವ್ಯಾಖ್ಯಾನಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಖಜಾಂಚಿ ಕೆ. ಎಸ್ ನಾರಾಯಣ್ ಉಪಸ್ಥಿತರಿದ್ದರು.















