ಬೆಂಗಳೂರು: ಯಾಕೆ ಕಲ್ಯಾಣ ಕರ್ನಾಟಕವು ಶಿಕ್ಷಕರಿಂದ, ಅಭಿವೃದ್ಧಿಯಿಂದ ವಂಚಿತವಾಗಿದೆ? ಮಕ್ಕಳಿಗೆ ಅನ್ಯಾಯ ಮಾಡುವುದೇಕೆ? ಸ್ವತಃ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರು ಗುಲ್ಬರ್ಗದಲ್ಲೇ ಕಳೆದ ವರ್ಷ ಈ ಪ್ರಶ್ನೆ ಎತ್ತಿದ್ದರು. ಕಲ್ಯಾಣ ಕರ್ನಾಟಕವು ಇಷ್ಟು ಹಿಂದುಳಿದ ಬಗ್ಗೆ ಪ್ರಿಯಾಂಕ್ ಖರ್ಗೆ ಬೆಳಕು ಚೆಲ್ಲಲು ಸಾಧ್ಯವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ಸೋಮವಾರ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಸಚಿವ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್ ವಿರುದ್ಧದ ದ್ವೇಷದಿಂದ, ಹತಾಶರಾಗಿ ಅಥವಾ ಬಾಲಿಶತನದಿಂದ ಹೇಳಿಕೆ ಕೊಡುತ್ತಿದ್ದಾರೆ ಎನ್ನಿಸುತ್ತಿದೆ. ಇದನ್ನು ಅವಿವೇಕತನದ ಹೇಳಿಕೆ ಎಂದು ಕರೆಯಬಹುದಾಗಿದೆ. ಇದನ್ನು ಜನರು ಗ್ರಾಮೀಣ ಭಾಷೆಯಲ್ಲಿ ತಲೆಹರಟೆ, ಉಡಾಫೆ ಎನ್ನುತ್ತಾರೆ ಎಂದು ನುಡಿದರು.
ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್ ನ 100 ವರ್ಷದ ಸಾಧನೆ, ಸಮಾಜ ಕಟ್ಟುವ ನಿಟ್ಟಿನಲ್ಲಿ ಆರ್.ಎಸ್.ಎಸ್ ನ ಸಮರ್ಪಣಾ ಮನೋಭಾವ, ದೇಶ ಕಟ್ಟುವ ನಿಟ್ಟಿನಲ್ಲಿ ಆರ್.ಎಸ್.ಎಸ್ ಪಾತ್ರ. ಇದ್ಯಾವುದನ್ನೂ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದೆ ಮಾತಿನ ಚಪಲಕ್ಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಆಗಬೇಕೆಂದು ಹೀಗೆ ಮಾತನಾಡಿದಂತಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ನಡೆದಿದ್ದು, ಅವರು ಇದರಲ್ಲಿ ಆಕಾಂಕ್ಷಿಯೇ ಎನ್ನುವುದು ಕೂಡ ತಿಳಿದಿಲ್ಲ ಎಂದರು.
ಪ್ರಿಯಾಂಕ್ ಖರ್ಗೆ ಕಣ್ಣಿದ್ದೂ ಕುರುಡರಂತೆ, ಕಿವಿ ಇದ್ದೂ ಕಿವುಡರಂತೆ ನಟಿಸುತ್ತಿದ್ದಾರಾ ಎಂಬ ಅನುಮಾನ ನನ್ನದು. ಕಳೆದ ಎರಡೂವರೆ ವರ್ಷಗಳಲ್ಲಿ ತಾವು ಜವಾಬ್ದಾರಿ ಹೊತ್ತ ಇಲಾಖೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಮಾಹಿತಿ ಸಿಗುತ್ತಿಲ್ಲ. ಇಲಾಖೆಯ ಸಾಧನೆ, ಸುಧಾರಣೆ ಕುರಿತು ಅವರು ಪತ್ರಿಕಾಗೋಷ್ಠಿ ನಡೆಸುವುದಿಲ್ಲ. ಆದರೆ, ಅವರು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ವಿಚಾರಗಳನ್ನಷ್ಟೇ ಚರ್ಚಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ತಂದೆ ಮಲ್ಲಿಕಾರ್ಜುನ ಖರ್ಗೆಯವರು ಇವತ್ತು ಎಐಸಿಸಿ ಅಧ್ಯಕ್ಷರಾಗಿದ್ದಾರೆ. 50 ವರ್ಷಗಳಿಂದ ಇಡೀ ಗುಲ್ಬರ್ಗ, ಕಲ್ಯಾಣ ಕರ್ನಾಟಕದ ಹಿಡಿತ ಅವರ ಕೈಯಲ್ಲಿದೆ. ನಿರಂತರವಾಗಿ ಅಧಿಕಾರ ಅನುಭವಿಸುತ್ತ ಬರುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೂ ಎರಡನೇ ಬಾರಿಗೆ ಸಚಿವರಾಗಿದ್ದಾರೆ. ಇಷ್ಟು ಸುದೀರ್ಘವಾಗಿ ರಾಜಕೀಯ ಅನುಭವ ಇರುವ ಮತ್ತು ಎಲ್ಲ ರಾಜಕೀಯ ಸ್ಥಾನಮಾನ ಅನುಭವಿಸಿದ ಕುಟುಂಬದವರಾಗಿದ್ದು, ಗುಲ್ಬರ್ಗ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆ ಯಾಕೆ ಎಂಬುದಕ್ಕೆ ಅವರಿಂದ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಗುಲ್ಬರ್ಗ, ಕಲ್ಯಾಣ ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಫಲಿತಾಂಶ ಕಡಿಮೆಯಿರುವ ಬಗ್ಗೆ ಅವರು ಚಕಾರ ಎತ್ತುತ್ತಿಲ್ಲ. ಆರೋಗ್ಯ, ಅಭಿವೃದ್ಧಿ ವಿಚಾರದಲ್ಲಿ ಯಾವತ್ತೂ ಪ್ರಿಯಾಂಕ್ ಅವರು ಧ್ವನಿ ಎತ್ತುವುದಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಡಾ. ಗೋವಿಂದ ರಾವ್ ಸಮಿತಿಯು ಪ್ರಾದೇಶಿಕ ಅಸಮಾನತೆಯ ಬಗ್ಗೆ ಮತ್ತೊಂದು ವರದಿ ನೀಡಿದೆ. ಪ್ರಿಯಾಂಕ್ ಅವರಿಗೆ ಅದರ ಪ್ರತಿಯನ್ನು ಓದಲು ಸಮಯ ಸಿಕ್ಕಿದೆಯೇ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದ 59 ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳೆಲ್ಲವೂ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲೇ ಇವೆ ಎಂದು ವರದಿ ತಿಳಿಸಿದೆ. ಇದರ ಕುರಿತು ಪ್ರಿಯಾಂಕ್ ಖರ್ಗೆ ಸದನದಲ್ಲಿ ಅಥವಾ ಪತ್ರಿಕಾಗೋಷ್ಠಿ ಮಾಡಿ ಈ ಪ್ರದೇಶಗಳ ಜನರ ಗಮನಕ್ಕೆ ತರುತ್ತಾರಾ?ಹಿಂದುಳಿದಿರುವಿಕೆ ಪ್ರಮಾಣ ಶೇ 65ರಿಂದ ಶೇ 72.8ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿಯಾಗಿದ್ದರು. 8 ವರ್ಷ ಕಾಂಗ್ರೆಸ್ ಸರ್ಕಾರವೇ ಇದದ್ದು ಎನ್ನುವುದನ್ನು ಮರೆಯಬಾರದು ಎಂದರು.
9 ಬಡಾವಣೆಗಳಲ್ಲಿ ಕುಡಿಯುವ ನೀರಿಲ್ಲ:
ಪ್ರಿಯಾಂಕ್ ಖರ್ಗೆ ಅವರಿಗೆ ಗುಲ್ಬರ್ಗ ಜಿಲ್ಲೆ ಬಗ್ಗೆ ಅವಲೋಕನ ಮಾಡುವ ಸಮಯವೂ ಇಲ್ಲ; 12 ದಿನಗಳಿಂದ 9 ಬಡಾವಣೆಗಳಲ್ಲಿ ಕುಡಿಯುವ ನೀರನ್ನು ಕೊಡಲು ಸಾಧ್ಯವಾಗಿಲ್ಲ. ಜಿಲ್ಲಾ ಅಭಿವೃದ್ಧಿ ಸಭೆಯನ್ನು ಕಳೆದ ಎರಡೂವರೆ ವರ್ಷದಲ್ಲಿ ಕರೆದಿಲ್ಲ. ಎಷ್ಟು ಕೆಡಿಪಿ ಸಭೆ ಮಾಡಿದ್ದೀರೆಂದು ಅವರೇ ಬೆಳಕು ಚೆಲ್ಲಲ್ಲಿ. ಅದಕ್ಕೂ ಅವರಿಗೆ ಸಮಯ ಸಿಕ್ಕಿಲ್ಲ. ಆದರೆ ಉದ್ದುದ್ದ ಭಾಷಣ ಮಾಡುವುದಕ್ಕೆ ಆರೋಪ, ಅಪಪ್ರಚಾರ ಮಾಡುವುದಕ್ಕೆ ಸಮಯವಿದೆ ಎಂದು ಟೀಕಿಸಿದರು.
ಅಭಿವೃದ್ಧಿಯ ಚರ್ಚೆಗೆ ಸಿದ್ದ:
50 ವರ್ಷದಲ್ಲಿ ಕಲ್ಯಾಣ ಕರ್ನಾಟಕ ಯಾವ ರೀತಿ ಅಭಿವೃದ್ಧಿ ಆಗಿದೆ? ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಎಷ್ಟು ಅಭಿವೃದ್ಧಿ ಆಗಿದೆ? ಬಿಜೆಪಿ ಸರ್ಕಾರ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಗುಲ್ಬರ್ಗ ಜಿಲ್ಲೆಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಬ ಬಗ್ಗೆ ಚರ್ಚಿಸಲು ನಾನು ಸಿದ್ಧ ಎಂದು ಸವಾಲು ಹಾಕಿದರು.
ಆರ್.ಎಸ್.ಎಸ್ ಕುರಿತು ಅಧ್ಯಯನ ಮಾಡಲಿ:
ಸುದೀರ್ಘ ಆಡಳಿತ ನಡೆಸುತ್ತ ಇದ್ದೀರಿ. ಅನುಭವೂ ನಿಮಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಅವಕಾಶ ಲಭಿಸಿದೆ. ಹುಡುಗಾಟಿಕೆ ಮಾತನ್ನು ಬದಿಗಿಡಿ; ಅವಕಾಶ ಬಳಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಚಿಂತನೆ ಮಾಡಿ. ಇಲ್ಲವೇ ನಾಗಪುರಕ್ಕೆ ಆರು ತಿಂಗಳು ಬಂದು ಆರ್.ಎಸ್.ಎಸ್ ಕುರಿತು ಅಧ್ಯಯನ ಮಾಡಿ. ಆಗಲೂ ನಿಮಗೆ ಮನವರಿಕೆ ಆಗದಿದ್ದರೆ ಆಮೇಲೆ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
ಚುನಾವಣೆ ನಡೆಸಲು ಧೈರ್ಯ ಇಲ್ಲ:
ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿದರೆ ಅಧಿಕಾರಕ್ಕೆ ಬಂದುದು ಸಾರ್ಥಕ ಆಗಲಿದೆ. ಅಭಿವೃದ್ಧಿ ಮಾಡಿದರೆ, ಪಂಚ ಗ್ಯಾರಂಟಿಗಳು ಜನರನ್ನು ತಲುಪಿಸದ್ದರೆ ನೀವು ಇಷ್ಟರಲ್ಲೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುತ್ತಿದ್ದಿರಿ. ಚುನಾವಣೆ ನಡೆಸಲು ಧೈರ್ಯ ಇಲ್ಲ. ಆದರೆ ಪುಗ್ಸಟ್ಟೆ ಮಾತಿಗೇನು ಕಡಿಮೆಯಿಲ್ಲ ಎಂದು ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ನಂದೀಶ್ ರೆಡ್ಡಿ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಬುದ್ನ ಸಿದ್ದಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ನಿರಂಜನ್ ಕುಮಾರ್ ಉಪಸ್ಥಿತರಿದ್ದರು.














