ಬೆಂಗಳೂರು: ಒಳ ಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಾವಣಗೆರೆಯ ಸೂರಗೊಂಡನಕೊಪ್ಪದಲ್ಲಿನ ಸೇವಾಲಾಲ್ ಜಯಂತಿ ವೇಳೆ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಣ್ಣ ಸಮುದಾಯಗಳ ಬಗ್ಗೆ ಅಪಾರವಾದ ಕಾಳಜಿ ಇದೆ. ಹೀಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಮಿತಿಯೊಂದನ್ನು ಮಾಡಿದ್ದು, ಅದು ಕಾರ್ಯನ್ಮೋಕವಾಗಿದೆ ಎಂದು ತಿಳಿಸಿದರು.
ನಾವು- ನೀವು ಒಂದೇ ತಕ್ಕಡಿಯಲ್ಲಿದ್ದೇವೆ. ಯಾವುದೇ ಕಾರಣಕ್ಕೂ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಇದಕ್ಕೆ ಯಾರು ಹೆದುರುವ ಅಗತ್ಯವಿಲ್ಲ. ರಾಜ್ಯದಲ್ಲಿನ ಪ್ರತಿಯೊಂದು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಆ ಕೆಲಸ ಪ್ರಾರಂಭಗೊಂಡಿದೆ. ಹತ್ತಾರು ವರ್ಷಗಳಿಂದ ವಾಸವಿರುವವರಿಗೆ ಹಕ್ಕು ಪತ್ರವನ್ನು ಕೂಡ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಯಚೂರಿನ ಆಶಾ ತಾಂಡದಲ್ಲಿನ ಪ್ರತಿಯೊಂದು ಮನೆಯಲ್ಲೂ ಡಿ ಗ್ರೂಪ್ ನಿಂದ ಹಿಡಿದು ಐಎಎಸ್ ಅಧಿಕಾರಿ ಮಟ್ಟದ ಅಧಿಕಾರಿ ಇರುವುದು ಈ ಸಮುದಾಯದ ಹೆಮ್ಮೆಯಾಗಿದೆ. ಅದೇ ರೀತಿ ಪ್ರತಿಯೊಂದು ತಾಂಡಾವಾಗಬೇಕು. ಹಿಂದುಳಿದ ಸಮುದಾಯಗಳು ಶಿಕ್ಷಣ, ಹೋರಾಟ ಮತ್ತು ಸಂಘಟನೆಯಾಗಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಯಾವುದೇ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಪ್ರತಿಯೊಂದು ಮನೆಯಲ್ಲಿ ಶಿಕ್ಷಣವಂತರಿರಬೇಕು ಎಂದು ಕಿವಿಮಾತು ಹೇಳಿದರು.
ಇನ್ನು ಸಾಧು- ಸಂತರ ಸಾಲಿನಲ್ಲಿ ಸೇವಾಲಾಲ್ ಅವರು ಅಗ್ರಪಂಥಿಯಲ್ಲಿ ನಿಲ್ಲುತ್ತಾರೆ. ಅಂದಿನ ಕಾಲದಲ್ಲೇ ಸಮುದಾಯದ ಏಳ್ಗೆಗಾಗಿ ದುಡಿದು ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸುತ್ತಾ, ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿ ಮಾತುಗಳನ್ನು ಹೇಳಿದ್ದರು ಎಂದರು.
ಕೇಂದ್ರಕ್ಕೆ ಶಿಫಾರಸ್ಸು:
ಬಂಜಾರ ಭಾಷೆಯನ್ನು ದೇಶದ 8ನೇ ಅನುಚ್ಚೇದಕ್ಕೆ ಸೇರಿಸಬೇಕೆಂಬ ಸಮುದಾಯದ ಮುಖಂಡರ ಬೇಡಿಕೆಗೆ ಸ್ಪಂದಿಸಲಾಗುತ್ತಿದೆ, ಈ ಹಿಂದೆ ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತಾದರೂ ಅದನ್ನು ತಿರಸ್ಕಾರ ಮಾಡಿದೆ. ಮತ್ತೊಮ್ಮೆ ಬಂಜಾರ ಭಾಷೆಯನ್ನು ಸಂವಿಧಾನದ 8ನೇ ಅನುಚ್ಛೇದಕ್ಕೆ ಸೇರಿಸಲು ಸರ್ಕಾರದಿಂದ ಶಿಫಾರಸ್ಸು ಮಾಡಲಾಗುವುದು ಎಂದು ಶಿವರಾಜ್ ತಂಗಡಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ್ ಚವ್ಹಾಣ್, ಜಾನಪದ ವಿದ್ವಾಂಸ ಡಾ.ಯು.ಎಂ.ರವಿ, ವೃತ್ತಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ್ ಕಡಕೋಳ, ಸಮುದಾಯದ ಮುಖಂಡ ಅನಂತ್ ನಾಯಕ್, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.














