ಬೆಳಗಾವಿ: ಮಹಾತ್ಮಾಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು, ಸ್ವರೂಪ ಬದಲಾಯಿಸಿರುವ ಕೇಂದ್ರ ಸರ್ಕಾರ ಬಡವರ ವಿರೋಧಿಯಷ್ಟೇ ಅಲ್ಲ, ಒಕ್ಕೂಟ ವ್ಯವಸ್ಥೆಯ ವಿರೋಧಿಯೂ ಆಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಕಿಡಿಕಾರಿದರು.
ಬೆಳಗಾವಿ ಸುವರ್ಣ ಸೌಧದ ಗಾಂಧೀ ಪ್ರತಿಮೆಯ ಬಳಿ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹಾಗೂ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಕೈಗೆ ಉದ್ಯೋಗ ನೀಡಲು ಆರಂಭಿಸಿದ ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶವನ್ನೇ ಹಾಳು ಮಾಡಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕಾರ್ಯ ಮಾಡಿದೆ ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹಾತ್ಮಾ ಗಾಂಧೀ ಅವರ ಹೆಸರನ್ನೇ ತೆಗೆಯುವ ದುಸ್ಸಾಹಸ ಮಾಡಿರುವ ಮೋದಿ ಸರ್ಕಾರ ಬಾಪೂಜಿಗೆ ಅವಮಾನ ಮಾಡಿದೆ, ಜೊತೆಗೆ ರಾಜ್ಯ ಸರ್ಕಾರಗಳ ಮೇಲೆ ಹೆಚ್ಚುವರಿ ಹೊರೆ ಹೊರಿಸಿದೆ ಎಂದರು.
ಜಿ.ಎಸ್.ಟಿ ಜಾರಿ ಬಳಿಕ ರಾಜ್ಯಗಳಿಗೆ ಬರುತ್ತಿದ್ದ ತೆರಿಗೆಯ ಪಾಲೂ ಕಡಿಮೆಯಾಗಿದೆ, ಇದರ ಜೊತೆಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ದೊರಕುವ ಅನುದಾನದಲ್ಲೂ ಕಡಿತ ಆಗಿದೆ. ಈಗ 60-40 ಅನುಪಾತ ತರುವ ಮೂಲಕ ರಾಜ್ಯಗಳಿಗೆ ಆರ್ಥಿಕ ಹೊರೆ ಹೊರಿಸಿ ಒಕ್ಕೂಟ ವ್ಯವಸ್ಥೆಗೇ ಘಾಸಿ ಮಾಡುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರುಗಳಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಸುಳ್ಳು ಕೇಸ್ ಹಾಕಿಸಿದೆ. ಈಗ ನ್ಯಾಯಾಲಯದಲ್ಲಿ ಇದು ಸುಳ್ಳು ಪ್ರಕರಣ ಎಂಬುದು ಬಯಲಾಗುತ್ತಿದೆ. ಮತ ಕಳವು ಮಾಡಿ ಪ್ರಜಾಪ್ರಭುತ್ವದ ಬುಡವನ್ನೇ ಬಿಜೆಪಿ ಅಲುಗಾಡಿಸುತ್ತಿದೆ. ಈಗ ಮಹಾತ್ಮಾಗಾಂಧೀ ಹೆಸರು ತೆಗೆಯುವುದರ ಜೊತೆಗೆ ಬಡವರ ಹೊಟ್ಟೆಯ ಮೇಲೂ ಹೊಡೆಯುವ ಕೆಲಸ ಮಾಡುತ್ತಿದೆ. ಇದು ಅತಿರೇಕದ ಪರಮಾವಧಿಯಾಗಿದೆ. ಕೇಂದ್ರದ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.















