ಬೆಂಗಳೂರು ಪಶ್ಚಿಮದ ಅಭಿವೃದ್ಧಿಗಾಗಿ 4733 ಕೋಟಿ ರೂಪಾಯಿಗಳ ಬಜೆಟ್‌ ಮಂಡನೆ

WhatsApp
Telegram
Facebook
Twitter
LinkedIn

ಬೆಂಗಳೂರು: ಸ್ವಂತ ಆದಾಯ ಹೆಚ್ಚಿಸುವುದು, ವಿವಿಧ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಹಾಗೂ ಮುನ್ಸಿಪಲ್‌ ಬಾಂಡ್‌ಗಳ ಮೂಲಕ ಹೆಚ್ಚುವರಿ ಹಣ ಸಂಗ್ರಹಿಸುವ ಗುರಿಯೊಂದಿಗೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯು 2026-27ನೇ ಸಾಲಿಗೆ ಅನ್ವಯಿಸುವಂತೆ  4732.72 ಕೋಟಿ ರೂ. ಮೊತ್ತದ ಭರ್ಜರಿ ಬಜೆಟ್‌ ಮಂಡಿಸಿದೆ.

ಶನಿವಾರ ಜಲಮಂಡಳಿಯ ಸುವರ್ಣಭವನದಲ್ಲಿ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಬಜೆಟ್‌ ಪ್ರಸ್ತುತಪಡಿಸಿದರು. ಮುಖ್ಯವಾಗಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳನ್ನು ಗುರುತಿಸಲು ಒತ್ತಿಹೇಳಲಾಗಿದೆ. ಈ ಹಿನ್ನಲೆಯಲ್ಲಿ ಕಂದಾಯ ವಿಭಾಗಕ್ಕೆ 1964.60 ಕೋಟಿ ರೂ. ಆದಾಯ ಗುರಿಯನ್ನು ಇಡಲಾಗಿದ್ದು, ಅದರಲ್ಲಿ 872 ಕೋಟಿ ರೂ ಆಸ್ತಿ ತೆರಿಗೆ ರೂಪದಲ್ಲಿ ಸಂಗ್ರಹಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಅಭಿಯಾನದಿಂದ 563 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಹೊಸ ಆಸ್ತಿ ನೋಂದಣಿ ಮತ್ತು ಇ-ದಾಖಲೆಗಳ ವ್ಯವಸ್ಥೆಯಿಂದ ಹೆಚ್ಚುವರಿ ಆದಾಯವೂ ಲಭಿಸುವ ನಿರೀಕ್ಷೆಯಿದೆ. ಹೊಸ ಜಾಹೀರಾತು ನೀತಿಯಡಿ ಖಾಸಗಿ ಸಂಸ್ಥೆಗಳಿಗೆ ಟೆಂಡರ್‌ ಮೂಲಕ ಅವಕಾಶ ನೀಡುವುದರಿಂದ 116 ಕೋಟಿ ರೂ. ಸಂಗ್ರಹಿಸುವ ಗುರಿ ಇಡಲಾಗಿದೆ. ಜೊತೆಗೆ 50 ಸ್ಕೈವಾಕ್‌ಗಳ ಮೇಲೆ ಜಾಹೀರಾತು ಅಳವಡಿಕೆ ಮೂಲಕ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.

ಬಜೆಟ್ ನಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವೈಜ್ಞಾನಿಕ ವಿಲೇವಾರಿಗೆ 300 ಕೋಟಿ ರೂ. ಮೀಸಲು ಇಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 10 ಟ್ರಾನ್ಸ್‌ಫರ್‌ ಸ್ಟೇಷನ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಪರಿಶಿಷ್ಟಜಾತಿ/ಪಂಗಡ, ಹಿಂದುಳಿದ ವರ್ಗ, ಪೌರಕಾರ್ಮಿಕರು, ಅಲ್ಪಸಂಖ್ಯಾತರು ಹಾಗೂ ವಿಶೇಷ ಚೇತನರಿಗೆ ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ನೆರವು ನೀಡಲು 334.99 ಕೋಟಿ ರೂ ಮೀಸಲಿಡಲಾಗಿದೆ. ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಲ್ಯಾಪ್‌ಟಾಪ್‌ ವಿತರಣೆ, ಮಹಿಳೆಯರಿಗೆ ಕೌಶಲ್ಯ ತರಬೇತಿ, ಉಚಿತ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಒದಗಿಸಲಾಗಿದೆ.

ಮೂಲಸೌಕರ್ಯಕ್ಕೆ ಒತ್ತು:

ಭೂಸ್ವಾಧೀನ ಹಾಗೂ ಟಿಡಿಆರ್‌ ಕೋಶ ಸ್ಥಾಪನೆ, ಟಿಡಿಆರ್‌ ಎಕ್ಸ್ಚೇಂಜ್‌ ಸೆಲ್‌ ಆರಂಭಿಸುವ ಮೂಲಕ ಮೂಲಸೌಕರ್ಯ ಯೋಜನೆಗಳಿಗೆ ವೇಗ ನೀಡಲು ಹಲವು ಯೋಜನೆಗಳನ್ನು ಬಜೆಟ್ ನಲ್ಲಿ ಹಾಕಿಕೊಳ್ಳಲಾಗಿದೆ. ಇಟ್ಟುಮಡು, ಕುರುಬರಹಳ್ಳಿ, ಮಹಾಲಕ್ಷ್ಮೀಪುರಂ, ಹನುಮಂತನಗರ, ತ್ಯಾಗರಾಜನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆ ಅಗಲೀಕರಣಕ್ಕೆ ಹತ್ತು ಹಲವು ಯೋಜನೆಗಳನ್ನು ಉಲ್ಲೇಖಿಸಲಾಗಿದೆ.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon