ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ನಗರ ಪಾಲಿಕೆಗಳ ಆಯವ್ಯಯಗಳು ಮಂಡನೆಯಾಗಿದೆ. ವಾಸ್ತವಿಕ ಆದಾಯ ಮೂಲಗಳಿಗೆ ಹೊಂದಿಕೆಯಾಗದಂತೆ 20,220.58 ಕೋಟಿ ರೂ ಮೊತ್ತದ ಬಜೆಟ್ ಮಂಡನೆಯಾಗಿರುವುದು ಭ್ರಮಾ ಲೋಕದ ಕನಸು ಎಂದು ಬಿಜೆಪಿ ಮುಖಂಡ ಎನ್ ಅರ್ ರಮೇಶ್ ಆರೋಪಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಕೇಂದ್ರ (3,427.34 ಕೋಟಿ), ಉತ್ತರ (4,344 ಕೋಟಿ), ದಕ್ಷಿಣ (3,826.43 ಕೋಟಿ), ಪೂರ್ವ (3,890 ಕೋಟಿ) ಮತ್ತು ಪಶ್ಚಿಮ (4,732.81 ಕೋಟಿ) 5 ನಗರ ಪಾಲಿಕೆಗಳು ಭಾರೀ ಮೊತ್ತದ ಆಯವ್ಯಯ ಮಂಡಿಸಿದ್ದು, ಇದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ ಎಂದರು.
ಆದಾಯಕ್ಕಿಂತ ಹೆಚ್ಚಾದ ನಿರೀಕ್ಷೆಗಳು:
ಪಾಲಿಕೆಗಳ ಪ್ರಮುಖ ಆದಾಯ ಮೂಲಗಳು ಆಸ್ತಿ ತೆರಿಗೆ, ನಕ್ಷೆ ಮಂಜೂರಾತಿ ಶುಲ್ಕ, ರಸ್ತೆ ಅಗೆತ ಶುಲ್ಕ, ವ್ಯಾಪಾರ ಪರವಾನಗಿ ಮತ್ತು ಜಾಹೀರಾತು ಶುಲ್ಕ ಸೇರಿ ಒಟ್ಟು ಸುಮಾರು 5,800 ಕೋಟಿ ರೂ ಮಾತ್ರ ಸಂಗ್ರಹ ಸಾಧ್ಯತೆ ಇದೆ. ರಾಜ್ಯ ಸರ್ಕಾರದಿಂದ ಘೋಷಿತ 7,000 ಕೋಟಿ ರೂ ಅನುದಾನ ಕೂಡ ಸಂಪೂರ್ಣವಾಗಿ ಸಿಗುವ ಅನುಮಾನವಿದೆ. ಹೀಗಾಗಿ ಒಟ್ಟು ಆದಾಯ 12,800 ಕೋಟಿ ರೂ ಮೀರದು ಎನ್ನಲಾಗಿದೆ.ಆದರೂ 20,000 ಕೋಟಿ ರೂ ಗೂ ಮೀರಿ ಬಜೆಟ್ ಮಂಡಿಸಿರುವುದು ಅಸಂಗತವಾಗಿದೆ ಎಂದರು.
ಕೇಂದ್ರ ಪಾಲಿಕೆಯಿಂದ ಆದಾಯ ನಿರೀಕ್ಷೆ ಅಸಂಗತ:
ಕೇಂದ್ರ ಪಾಲಿಕೆಯು ಜಾಹೀರಾತುಗಳಿಂದಲೇ 192 ಕೋಟಿ ರೂ ಆದಾಯ ನಿರೀಕ್ಷಿಸಿರುವುದು ಪ್ರಶ್ನೆಗೆ ಗುರಿಯಾಗಿದೆ. ಹಿಂದಿನ ಬಿಬಿಎಂಪಿ ಅವಧಿಯಲ್ಲಿ ಗರಿಷ್ಠ 30 ಕೋಟಿ ರೂ ಮಾತ್ರ ಸಂಗ್ರಹವಾಗಿತ್ತು. ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ ಮೂಲಕ 1,500 ಕೋಟಿ ರೂ ಸಂಗ್ರಹ ಗುರಿ ಇಟ್ಟಿರುವುದೂ ಅಸಾಧ್ಯವೆಂದು ಹೇಳಲಾಗಿದೆ. ಸರ್ಕಾರ ವಿಧಿಸಿರುವ ಶುಲ್ಕ ಹೆಚ್ಚಳದಿಂದ ನಾಗರಿಕರು ಈ ಪ್ರಕ್ರಿಯೆಗೆ ಮುಂದಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅನುದಾನ ಹಂಚಿಕೆಯಲ್ಲಿ ತಾರತಮ್ಯ:
ಪೂರ್ವ, ಕೇಂದ್ರ ಮತ್ತು ದಕ್ಷಿಣ ಪಾಲಿಕೆಗಳ ವಾರ್ಡ್‌ಗಳಿಗೆ 2.25 ರಿಂದ 2.50 ಕೋಟಿ ರೂ ಮೀಸಲಿದ್ದರೆ, ಪಶ್ಚಿಮ ಮತ್ತು ಉತ್ತರ ಪಾಲಿಕೆಗಳಿಗೆ ಕೇವಲ 1.50 ಕೋಟಿ ರೂ ಮೀಸಲಾಗಿರುವುದು ತಾರತಮ್ಯವಾಗಿದೆ. ಜನಪ್ರತಿನಿಧಿಗಳ ಕೊರತೆಯಿಂದ ಕೇಂದ್ರದ ಹಣಕಾಸು ಆಯೋಗದ ಅನುದಾನ ಸಿಗುವ ಸಾಧ್ಯತೆ ಕಡಿಮೆ ಇದೆ. ಮುಸ್ಸಿಪಲ್ ಬಾಂಡ್ ಮೂಲಕ ಆದಾಯ ನಿರೀಕ್ಷೆಯೂ ವಾಸ್ತವಿಕವಲ್ಲ ಎಂದು ಹೇಳಲಾಗುತ್ತಿದೆ. ಹಿಂದೆ 9,000 ಕೋಟಿ ರೂ ಬಿಬಿಎಂಪಿ ಬಜೆಟ್ ತಿರಸ್ಕರಿಸಿದ್ದ ರಾಜ್ಯ ಸರ್ಕಾರ, ಈಗ 20,220 ಕೋಟಿ ರೂ ಆಯವ್ಯಯದ ಬಗ್ಗೆ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಜನರು ಕಾದು ನೋಡುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಎನ್ ಅರ್ ರಮೇಶ್ ಎನ್.ಆರ್ ತಿಳಿಸಿದರು.















